Advertisement

ಹಲ್ಮಿಡಿ ಗ್ರಾಮ ಅಭಿವೃದ್ಧಿಗೆ ಕ್ರಮ

04:26 PM Nov 22, 2020 | Suhan S |

ಬೇಲೂರು: ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡಭಾಷೆ ಎಂದಿಗೂ ನಶಿಸುವುದಿಲ್ಲ. ಅದನ್ನು ಉಳಿಸಿ ಬೆಳೆಸಲುಪ್ರತಿಯೊಬ್ಬರೂ ಮುಂದಾಗಬೇಕು ಎಂದು ಶಾಸಕ ಕೆ.ಎಸ್‌.ಲಿಂಗೇಶ್‌ ತಿಳಿಸಿದರು.

Advertisement

ಪಟ್ಟಣದ ಪುಟ್ಟಮ್ಮ ಚನ್ನಕೇಶವೇಗೌಡ ಕಲ್ಯಾಣ ಮಂಟಪದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ವೇದಿಕೆ ಆಯೋಜಿಸಿದ್ದ 65ನೇ ಕರ್ನಾಟಕ ರಾಜ್ಯೋತ್ಸವ, ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಕರ್ನಾಟಕದಲ್ಲಿ ತಾಯಿ ಭಾಷೆ ಕನ್ನಡ. ಅನೇಕ ಮಹನೀಯರು ಹುಟ್ಟಿ ಬೆಳೆದಂತಹ ಮಹಾನ್‌ ನಾಡು, ಸಾಹಿತ್ಯ ಬದುಕು ಜೀವನವನ್ನು ಕಟ್ಟಿಕೊಟ್ಟಂತಹ ಪುಣ್ಯಭೂಮಿ. ಇಂತಹ ನಾಡಿನ ಭಾಷೆ ಬೆಳೆವಣಿಗೆಗೆ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.

ಯುವ ಸಾಹಿತಿಗಳ ಗುರುತಿಸಿ: ಬೇಲೂರಿನಲ್ಲಿ ನೂತನವಾಗಿ ಆರಂಭಗೊಂಡಿರುವ ಕೇಂದ್ರ ಸಾಹಿತ್ಯ ವೇದಿಕೆ ಸಮಾಜದಲ್ಲಿ ತುಳಿತಕ್ಕೆ ಒಳಗಾದಂತಹ ಹಾಗೂ ಗ್ರಾಮೀಣ ಭಾಗದಲ್ಲಿರುವ ಯುವ ಕವಿಗಳನ್ನು ಗುರುತಿಸಿ ಪ್ರೋತ್ಸಾಹಿಸುವಂತಹ ಕೆಲಸವನ್ನು ಮಾಡಲು ಮುಂದಾಗಬೇಕು. ಅಲ್ಲದೆ, ಯುವಬರಹಗಾರರು, ಉತ್ಸಾಹಿ ಸಾಹಿತಿಗಳನ್ನು ಗುರುತಿಸುವಂತಹ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.

ಸಚಿವರಿಗೆ ಮನವಿ: ಕನ್ನಡದ ಪ್ರಥಮ ಶಿಲಾಶಾಸನ ದೊರೆತ ಹಲ್ಮಿಡಿ ಶಾಸನದ ಬಗ್ಗೆ ಜಾಗೃತಿ ಮೂಡಿಸಬೇಕು ಹಾಗು ಗ್ರಾಮದ ಅಭಿವೃದ್ಧಿಗೆ ಈಗಾಗಲೇ ವಿಧಾನಸಭೆ ಅಧಿವೇಶನದಲ್ಲಿಚರ್ಚಿಸಿದ್ದು, ರಸ್ತೆ, ಶೌಚಾಲಯ, ವಿಶ್ರಾಂತಿ ನಿಲಯ ಹಾಗೂ ಬರುವಂತಹ ಪ್ರವಾಸಿಗರಿಗೆ ಮೂಲ ಸೌಕರ್ಯ ಒದಗಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ವಿವರಿಸಿದರು.

ಗಣ್ಯರಿಗೆ ಸನ್ಮಾನ: ವೇದಿಕೆಯಿಂದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಡಾ.ಮಮತಾ, ಸಾವಯುವ ಕೃಷಿಕ ಮಹೇಶ್‌ ಭಾರದ್ವಾಜ್‌, ಶಿಕ್ಷಕ ಮಹೇಶ್‌ ಅವರನ್ನು ಸನ್ಮಾನಿಸಲಾಯಿತು.

Advertisement

ವೇದಿಕೆಯಲ್ಲಿ ನೂತನ ಅಧ್ಯಕ್ಷ ಪ್ರಕಾಶ್‌, ಗೌರವಾಧ್ಯಕ್ಷ ಬಿ.ಎನ್‌.ಆನಂದ್‌, ಉಪಾಧ್ಯಕ್ಷ ಗೋಪಾಲೇಗೌಡ, ಸಂಶೋಧಕ ಶ್ರೀವತ್ಸ ಎಸ್‌. ವಟಿ, ರಾಜ್ಯ ಕೃಷಿ ಮಹಾ ಮಂಡಲದ ನಿರ್ದೇಶಕ ಮಹೇಶ್‌, ವೇದಿಕೆಯ ಮಾರುತಿ, ನಿರಂಜನ್‌, ಪಲ್ಲವಿ, ಹೊನ್ನರಾಜು, ಕುಮಾರಸ್ವಾಮಿ, ಹೇಮಾವತಿ, ನಾಗರಾಜ್‌, ಸಿ ಎಂ ಪೃಥ್ವಿ, ಚಂದ್ರು, ಮಂಜು ಇತರರು ಹಾಜರಿದ್ದರು.

ಡಿ.5ರಬಂದ್‌ಗೆ ಸಾಹಿತ್‌ಪರಿಷತ್‌ ವೇದಿಕ ಬೆಂಬಲ :

ಬೇಲೂರಿನಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್‌ ಎಸ್‌ .ಉಪ್ಪಾರ್‌, ನಮ್ಮ ಕನ್ನಡ ನಾಡಿಗೆ ಅಪಮಾನ ಮಾಡಿ ಮರಾಠಿಗರನ್ನು ಬೆಳೆಸಲು ಪ್ರಾಧಿಕಾರ ನೀಡಲು ಹೊರಟಿರುವ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿ ಡಿ.5ರಂದು ನಡೆಸಲು ಉದ್ದೇಶಿಸಿರುವ ರಾಜ್ಯ ಬಂದ್‌ಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು. ಕನ್ನಡ ನಾಡು ಸಂಘಟನೆಗೆ 2ಸಾವಿರ ವರ್ಷಗಳ ಇತಿಹಾಸವಿದ್ದು, ಇಲ್ಲಿ ಅನೇಕ ಮಹಾನೀಯರು ಸಾಧನೆ ಮಾಡಿದ್ದಾರೆ. ಕವಿಗಳಿಗೆ ಶಬ್ಧವೇ ಜ್ಞಾನ, ಕವಿಗಳು ತಮ್ಮ ಸಾಹಿತ್ಯದ

ಮೂಲಕ ಇತರರಿಗೆ ಬೆಳಕಾಗಿದ್ದಾರೆ. ಇಂದಿನ ದಿನಗಳಲ್ಲಿ ಗಟ್ಟಿ ಕಾವ್ಯಗಳು ಕಾಣುತ್ತಿಲ್ಲ. ಪ್ರತಿಯೊಬ್ಬರೂ ಕನ್ನಡದ ಬಗ್ಗೆ ಅಭಿಮಾನ ಹೊಂದಿರಬೇಕು ಎಂದು ಹೇಳಿದರು. ಮಕ್ಕಳಿಗೆ ಕೇವಲ ಶಿಕ್ಷಣ ಕಲಿಸುವುದಷ್ಟೇ ಅಲ್ಲ. ಸೃಜನ ಶೀಲತೆಯನ್ನು ಕಲಿಸಬೇಕು. ಈಗಾಗಲೇ ರಾಜ್ಯ ಸೇರಿ ಹೊರ ರಾಜ್ಯಗಳಲ್ಲೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಯುವ ಸಾಹಿತಿಗಳನ್ನು ಬೆಳಕಿಗೆ ತರಲು ವೇದಿಕೆ ಮುಂದಾಗುತ್ತಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next