ಹಾವೇರಿ: ಮಂಗಳೂರು ವಿಮಾನ ನಿಲ್ದಾಣದ ಬಳಿ ಬಾಂಬ್ ಇಟ್ಟಿರುವವರ ಹಿಂದೆ ಯಾರಿದ್ದಾರೆಂದು ಪತ್ತೆ ಹಚ್ಚಲು ಪೊಲೀಸ್ ಇಲಾಖೆ ಕಾರ್ಯ ಪ್ರವೃತ್ತವಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ಸೋಮವಾರ ಶಿಗ್ಗಾವಿ ತಾಲೂಕಿನ ಗೊಟಗೋಡಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಂಗಳೂರು ಪೊಲೀಸ್ ಕಮಿಷನರ್ ಈಗಾಗಲೇ ತನಿಖೆ ಪ್ರಾರಂಭಿಸಿದ್ದಾರೆ.
ಸೋಮವಾರ ಬೆಳಗ್ಗೆ 8:45ರಿಂದ 9 ಗಂಟೆ ಸುಮಾರಿಗೆ ಅನಾಮಧೇಯ ವ್ಯಕ್ತಿ ಬಂದು ಒಂದು ಬ್ಯಾಗ್ ಪ್ಯಾಕ್ ಇಟ್ಟಿರುವುದನ್ನು ಸಿಸಿಟಿವಿಯಲ್ಲಿ ಗುರುತಿಸಲಾಗಿದೆ. ಸಂಶಯಾಸ್ಪದ ಇರುವುದರಿಂದ ಅದನ್ನು ಪೊಲೀಸರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿದ್ದಾರೆ. ಬಾಂಬ್ ನಿಷ್ಕ್ರಿಯ ದಳ ಚೆಕ್ ಮಾಡಿದ ಮೇಲೆ ಸಜೀವ ಬಾಂಬ್ ವಸ್ತುಗಳು ಸಿಕ್ಕಿವೆ ಎಂದು ಪ್ರಾಥಮಿಕ ವರದಿಯಲ್ಲಿ ಕಂಡು ಬಂದಿದೆ. ಅವುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ವಿಮಾನ ನಿಲ್ದಾಣಗಳಿಗೆ ಭದ್ರತೆ ಹೆಚ್ಚಿಸಲಾಗಿದ್ದು, ಮಂಗಳೂರು, ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ದೊಡ್ಡ ಪ್ರಮಾಣದಲ್ಲಿ ಅನಾಹುತ ಸೃಷ್ಟಿಸಬೇಕೆಂಬ ಕಾರಣಕ್ಕೆ ವಿಮಾನ ನಿಲ್ದಾಣದಲ್ಲಿ ಈ ರೀತಿಯ ಕೃತ್ಯ ಮಾಡಿದ್ದಾರೆ. ದೇಶದ್ರೋಹಿ ಶಕ್ತಿಗಳು ಭಯೋತ್ಪಾದನೆ ಹುಟ್ಟು ಹಾಕಿ ಜನರಲ್ಲಿ ಆತಂಕ ಉಂಟು ಮಾಡುತ್ತಿವೆ.
ನಮ್ಮ ದೇಶದ ಆರ್ಥಿಕ ಚಟುವಟಿಕೆಗಳಿಗೆ ಭಂಗ ತರುವ ಕೃತ್ಯ ಇದಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಮಂಗಳೂರು ಆರ್ಥಿಕ ಚಟುವಟಿಕೆಯ ಕೇಂದ್ರವಾಗಿರುವುದರಿಂದ ಅಲ್ಲಿ ಈ ಕೃತ್ಯಕ್ಕೆ ಮುಂದಾಗಿದ್ದಾರೆ. ಮಂಗಳೂರು ದೇಶದ್ರೋಹಿ ಚಟುವಟಿಕೆ ಹಿನ್ನೆಲೆ ಇರುವ ತಾಣ ಎಂದು ಗುರುತಿಸಲಾಗಿದೆ.
ಮಂಗಳೂರು, ಬೆಂಗಳೂರು, ಹುಬ್ಬಳ್ಳಿಯಲ್ಲಿ ತೀವ್ರ ತನಿಖೆ ನಡೆಸಲಾಗುತ್ತಿದೆ. ಏಳೆಂಟು ವರ್ಷದಿಂದ ದೊಡ್ಡ ಪ್ರಮಾಣದಲ್ಲಿ ಇಡೀ ದೇಶದ ತುಂಬಾ ಈ ರೀತಿಯ ಪ್ರಯತ್ನ ನಡೆಯುತ್ತಿದೆ. ಗಣರಾಜೋತ್ಸವ ಬಂದಾಗ ಈ ರೀತಿಯ ವಿಧ್ವಂಸಕ ಕೃತ್ಯ ಮಾಡುವಂತಹದ್ದು ನಡೆಯುತ್ತಲೇ ಇದೆ. ಅವರ ಪ್ರಯತ್ನವನ್ನು ನಾವು ಭಂಗ ಮಾಡುತ್ತಲೇ ಬಂದಿದ್ದೇವೆ ಎಂದರು.