Advertisement

Prajwal Revanna Case ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ಡಿಲೀಟ್‌ ಮಾಡಿಸಲು ಕ್ರಮ: ಪರಂ

11:50 PM May 01, 2024 | Team Udayavani |

ದಾವಣಗೆರೆ: ಸಂಸದ ಪ್ರಜ್ವಲ್‌ ರೇವಣ್ಣ ಪ್ರಕರಣದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವೀಡಿಯೋ ಹರಿದಾಡುತ್ತಿವೆ. ಇವು ಪೋಸ್ಟ್‌ ಆಗದಂತೆ ಹಾಗೂ ಈಗಾಗಲೇ ಪೋಸ್ಟ್‌ ಆಗಿದ್ದನ್ನು ಅಳಿಸಿ ಹಾಕುವಂತೆ ಸಾಮಾಜಿಕ ಜಾಲತಾಣಗಳ ಏಜೆನ್ಸಿಗೆ ಕೋರಲಾಗುವುದು ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದ ಸಂತ್ರಸ್ತೆಯರ ರಕ್ಷಣೆಗೆ ರಾಜ್ಯ ಸರಕಾರ ಬದ್ಧವಾಗಿದೆ. ಯಾರಿಗೆ ರಕ್ಷಣೆ ಬೇಕೋ ಅವರಿಗೆಲ್ಲ ರಕ್ಷಣೆ ಕೊಡುತ್ತೇವೆ ಎಂದು ಹೇಳಿದರು.

Advertisement

ರಾಜ್ಯ ಪೊಲೀಸರ ಮೇಲೆ ವಿಶ್ವಾಸವಿದೆ
ಪ್ರಜ್ವಲ್‌ ಪ್ರಕರಣವನ್ನು ಖಾಸಗಿ ತನಿಖಾ ಸಂಸ್ಥೆಗೊಳಪಡಿಸಬೇಕೆಂದು ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರ ನಡೆಸುವಾಗ ನಾನು ಗೃಹ ಸಚಿವನಾಗಿದ್ದೆ. ಆಗ ಅವರು ರಾಜ್ಯ ಪೊಲೀಸ್‌ ವ್ಯವಸ್ಥೆ ಬಗ್ಗೆ ವಿಶ್ವಾಸ ಹೊಂದಿದ್ದರು. ಈಗ ಏಕಾಏಕಿ ಅವರಿಗೆ ರಾಜ್ಯ ಪೊಲೀಸರ ಮೇಲಿನ ವಿಶ್ವಾಸ ಹೋಯಿತೇ? ನನಗಂತೂ ರಾಜ್ಯ ಪೊಲೀಸ್‌ ಇಲಾಖೆ ಬಗ್ಗೆ ವಿಶ್ವಾಸವಿದೆ ಎಂದರು.

ಬಿಎಸ್‌ವೈ ತನಿಖೆ ನಡೆದಿದೆ
ರಾಮೇಶ್ವರಂ ಕೆಫೆ ಬಾಂಬ್‌ ಪ್ರಕರಣದ ಆರೋಪಿಯನ್ನು ರಾಜ್ಯದ ಪೊಲೀಸರಿಂದಲೇ ಬೇಗ ಬಂಧಿಸಲಾಗಿದೆ. ನೇಹಾ ಹತ್ಯೆ ವಿಚಾರ ಗೊತ್ತಾದ ತತ್‌ಕ್ಷಣ ಗಂಟೆಯೊಳಗೆ ಆರೋಪಿಯನ್ನು ಬಂಧಿಸಿ, ಸಿಐಡಿ ತನಿಖೆಗೆ ವಹಿಸಲಾಗಿದೆ. ಇದನ್ನು ಬಿಜೆಪಿ ನಾಯಕರು ತಿಳಿಯಬೇಕು. ಮಹಿಳೆಯೊಬ್ಬರು ಕೊಟ್ಟ ದೂರಿನ ಪ್ರಕರಣ ವಿಚಾರವಾಗಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ನೋಟಿಸ್‌ ನೀಡಲಾಗಿದೆ. ನೋಟಿಸ್‌ಗೆ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. ಅದರ ತನಿಖೆ ನಡೆದಿದೆ ಎಂದರು.

ಪ್ರಧಾನಿ ಮೋದಿ, ಶಾ ಆರೋಪಕ್ಕೆ
ಸದನದಲ್ಲೇ ಉತ್ತರ ಕೊಡುತ್ತೇನೆ
ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜ್ಯಕ್ಕೆ ಬಂದಾಗ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂದು ಆರೋಪ ಮಾಡಿದ್ದಾರೆ. ಈ ಆರೋಪ ಸತ್ಯಕ್ಕೆ ದೂರವಾಗಿದ್ದು, ಈ ಕುರಿತು ಅಂಕಿ-ಅಂಶಗಳನ್ನು ನಾನು ಸದನಲ್ಲಿಯೇ ತಿಳಿಸುತ್ತೇನೆ. ಬಿಜೆಪಿ ಆಡಳಿತವಿದ್ದಾಗ ರಾಜ್ಯದಲ್ಲಿ ಎಷ್ಟು ಕೊಲೆ, ಅತ್ಯಾಚಾರ, ಇತರ ಅಪರಾಧ ಪ್ರಕರಣಗಳು ನಡೆದಿದ್ದವು, ನಮ್ಮ ಸರಕಾರ ಇದ್ದಾಗ ಎಷ್ಟು ನಡೆದಿವೆ ಎಂಬ ಅಂಕಿ-ಸಂಖ್ಯೆ ಕೊಡುತ್ತೇನೆ. ಬಿಜೆಪಿ ಆಡಳಿತಾವಧಿಗಿಂತ ನಮ್ಮ ಆಡಳಿತಾವಧಿಯಲ್ಲಿ ಕಾನೂನು ವ್ಯವಸ್ಥೆ ಹೆಚ್ಚು ಸುವ್ಯವಸ್ಥಿತವಾಗಿದೆ ಎಂದು ಪರಮೇಶ್ವರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next