ಕೋಲಾರ: ಕೊರೊನಾ 4ನೇ ಅಲೆಯನ್ನು ಎದುರಿ ಸಲು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕರಿಗೆ 10 ಲಕ್ಷ ಮಾಸ್ಕ್ ವಿತರಿಸಲು ಸಿದ್ಧತೆ ನಡೆಸಿಕೊಂಡಿದ್ದು, ಇದರ ಜತೆಯಲ್ಲೇ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾಧ್ಯಕ್ಷ ಡಾ.ಎನ್. ಗೋಪಾಲಕೃಷ್ಣೇಗೌಡ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ರೆಡ್‌ಕ್ರಾಸ್ ಸಂಸ್ಥೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತರಿ ಗಾಗಿ 5500 ಮಾಸ್ಕ್ಗಳನ್ನು ವಿತರಿಸಿ ಮಾತನಾಡಿದರು. ರೆಡ್ ಕ್ರಾಸ್ ಸಂಸ್ಥೆ ನಿಸ್ವಾರ್ಥ ಸೇವೆಗೆ ಮತ್ತೂಂದು ಹೆಸರಾಗಿದೆ. ಸಾರ್ವಜನಿಕರ ಸೇವೆಗೆ ಸರ್ಕಾರ ದೊಂದಿಗೆ ಕೈ ಜೋಡಿಸಿದ್ದು, ಹಲವಾರು ಕಾರ್ಯ ಕ್ರಮಗಳನ್ನು ರೂಪಿಸುತ್ತಾ ಬಂದಿದೆ ಎಂದರು.
ಕೋವಿಡ್ ಮಹಾಮಾರಿಯಿಂದ 3 ವರ್ಷಗಳಿಂದ ಅನುಭವಿಸಿದ ಸಮಸ್ಯೆಗಳು ಸುಧಾರಣೆಯಾಗಿದೆ ಎನ್ನುವಷ್ಟರಲ್ಲೇ ಮತ್ತೆ 4ನೇ ಅಲೆ ಕಾಣಿಸಿಕೊಳ್ಳಲಿದೆ ಎಂಬ ಸರ್ಕಾರದ ಸೂಚನೆಗೆ ಮುನ್ನವೇ ರೆಡ್‌ಕ್ರಾಸ್ ಸಂಸ್ಥೆಯಿಂದ ಬುಧವಾರವೇ ಜಿಪಂನಲ್ಲಿ ಕೋವಿಡ್ ಕುರಿತು ಅರಿವು ಮೂಡಿಸಿ ಲಸಿಕೆ ಪಡೆದ ಪ್ರತಿಯೊಬ್ಬರು ಬೂಸ್ಟರ್ ಡೋಸ್ ಪಡೆಯಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ 16 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, ರೆಡ್ ಕ್ರಾಸ್ ಸಂಸ್ಥೆಯಿಂದ 10 ಲಕ್ಷ ಮಾಸ್ಕ್ ವಿತರಿಸುವ ಗುರಿ ಹೊಂದಿರುವುದಾಗಿ ತಿಳಿಸಿದ ಅವರು ಈಗಾಗಲೇ 7 ಲಕ್ಷ ಮಾಸ್ಕ್ ನಮ್ಮ ಬಳಿ ಸಿದ್ಧವಿದೆ ಎಂದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ವಿ. ಗೋಪಿನಾಥ್ ಮಾತನಾಡಿ, ಸಮಾಜಮುಖೀ ಆಲೋಚನೆ ಇರುವವರು ರೆಡ್‌ಕ್ರಾಸ್ ಸಂಸ್ಥೆ ಸದಸ್ಯತ್ವ ಪಡೆಯಬಹುದಾಗಿದ್ದು, ರೆಡ್ ಕ್ರಾಸ್ ಸಂಸ್ಥೆಯು ಮತ್ತಷ್ಟು ವಿಸ್ತರಿಸುವ ಮೂಲಕ ಸಮಾ ಜದ ಶಕ್ತಿಯಾಗಿ ಪರಿವರ್ತನೆಯಾಗಬೇಕೆಂದು ಆಶಿಸಿದರು.
ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸದಸ್ಯ ಕೆ.ಎಸ್. ಗಣೇಶ್ ಮಾತನಾಡಿ, ಕೋವಿಡ್-19ರ ಮೊದಲನೇ, ಎರಡನೇ ಹಂತದಲ್ಲಿ ಅನೇಕ ಮಂದಿ ಆತ್ಮೀಯರು, ಗಣ್ಯರು, ಸಮಾಜ ಸೇವಕರನ್ನು, ಬಂದು ಬಳಗವನ್ನು ಕಳೆದು ಕೊಂಡು ಮೂರನೇ ಹಂತದಲ್ಲಿ ಮುಂಜಾಗೃತೆ ಪಾಲನೆಯಿಂದ ಸುಧಾರಣೆ ಕಂಡು ಕೊಂಡ ನಂತರವೂ 4ನೇ ಆಲೆಯು ಯಾರ ರೀತಿ ಪರಿಣಾಮ ಬೀರುವುದು ಎಂದು ನಿರೀಕ್ಷಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿರುವುದರಿಂದ ಮಾಸ್ಕ್ ಬಳಕೆಯು ಮುಂಜಾಗೃತಿಯ ಸಾಧನವಾಗಿದೆ ಎಂದು ಅಭಿಪ್ರಾಯ ಪಟ್ಟರು.
ರೆಡ್ ಕ್ರಾಸ್ ಸಂಸ್ಥೆಯ ಉಪಸಭಾಪತಿ ಆರ್. ಶ್ರೀನಿವಾಸ್ ಮಾತನಾಡಿ, ನಾವುಗಳ ಶೈಕ್ಷಣಿಕ ಸೇವೆಯ ಜತೆಗೆ ಸಾಮಾಜಿಕ ಕಾಳಜಿಯಿಂದ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಕೆಲವೆ ಮಂದಿಯ ಕಪಿಮುಷ್ಠಿಗೆ ಸಿಲುಕಿದ್ದ ರೆಡ್‌ಕ್ರಾಸ್ ಸಂಸ್ಥೆ ಇಂದು ಸಾಮಾಜಿಕ ಚಟುವಟಿಕೆಗಳೊಂದಿಗೆ ಮನೆ ಮನೆ ಮಾತಾಗಿದೆ ಎಂದರು.
ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ವಿ.ಮುನಿರಾಜು, ರೆಡ್ ಕ್ರಾಸ್ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಜಿ.ಶ್ರೀನಿವಾಸ್, ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಉಪಸಭಾಪತಿ ಆರ್.ಶ್ರೀನಿವಾಸನ್, ರೆಡ್ ಕ್ರಾಸ್ ಸಂಸ್ಥೆಯ ವೆಂಕಟಕೃಷ್ಣ ಮಾತನಾಡಿದರು. ಜಿಲ್ಲಾ ಪತ್ರಕರ್ತರ ಸಂಘದ ಖಜಾಂಜಿ ಎ.ಜಿ.ಸುರೇಶ್ ಕುಮಾರ್, ರೆಡ್ ಕ್ರಾಸ್ ಸಂಸ್ಥೆಯ ನಾಗೇಂದ್ರ ಪ್ರಸಾದ್, ಗಾಜಲದಿನ್ನೆ ಸೀನಪ್ಪ ಮತ್ತಿತರರು ಹಾಜರಿದ್ದರು.