ಮುದ್ದೇಬಿಹಾಳ: ರೈತರಿಂದ ಯಾವುದೇ ರೀತಿಯ ದೂರು ಬಂದಲ್ಲಿ ರಸಗೊಬ್ಬರ, ಬೀಜ, ಕೀಟನಾಶಕ ಮಾರಾಟಗಾರರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಕೊಳ್ಳಲಾಗುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ರೇವಣೆಪ್ಪ ಮನಗೂಳಿ ತಿಳಿಸಿದ್ದಾರೆ.
ಇಲ್ಲಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಸಭಾ ಭವನದಲ್ಲಿ ಏರ್ಪಡಿಸಿದ್ದ ರಸಗೊಬ್ಬರ, ಕೀಟನಾಶಕ ಹಾಗೂ ಬಿತ್ತನೆ ಬೀಜಗಳ ಪರಿಕರ ಮಾರಾಟಗಾರರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತರಿಗೆ ಕೃಷಿ ಪರಿಕರ ವಿತರಣೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗದಂತೆ ರಸಗೊಬ್ಬರ ಮಾರಾಟಗಾರರು ಗಮನಹರಿಸಬೇಕು. ಪರಿಕರ ಮಾರಾಟಗಾರರು ಖರೀದಿಸಿದ ಪರಿಕರಗಳಿಗೆ ರಶೀದಿಯನ್ನು ಕಡ್ಡಾಯವಾಗಿ ನೀಡಬೇಕು. ಸರ್ಕಾರ ನಿಗದಿ ಪಡಿಸಿದ ದರದಲ್ಲಿಯೇ ಮಾರಾಟ ಮಾಡಬೇಕು. ಅಂಗಡಿಗಳಲ್ಲಿ ಕಡ್ಡಾಯವಾಗಿ ದರಪಟ್ಟಿ ಹಾಕಬೇಕು. ರೈತರಿಗೆ ಒಂದೇ ಕಂಪನಿಯ ಪರಿಕರಗಳಾದ ಬೀಜ, ರಸಗೊಬ್ಬರ, ಕೀಟನಾಶಕಗಳನ್ನು ಖರೀದಿಸಲು ಒತ್ತಡ ಹೇರಬಾರದು. ರೈತರ ಆಯ್ಕೆಗೆ ಅನುಗುಣವಾಗಿ ಬಿತ್ತನೆ ಬೀಜ ವಿತರಿಸಬೇಕು ಎಂದು ತಿಳಿಸಿದರು.
ಕೃಷಿ ಇಲಾಖೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕ ಶಶಿಧರ ಹಾಲ್ಯಾಳ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಈ ವರ್ಷ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದು ಮೇ ಅಂತ್ಯದವರೆಗೆ ರೈತರು ಹೆಸರು ಮತ್ತು ಉದ್ದು ಬಿತ್ತನೆ ಮಾಡಬಹುದಾಗಿದೆ. ರಸಗೊಬ್ಬರ, ಕೀಟನಾಶಕ ಹಾಗೂ ಬಿತ್ತನೆ ಬೀಜಗಳನ್ನು ನಿಗದಿತ ದರದಲ್ಲಿ ಮಾರಾಟ ಮಾಡಲು ಮಾರಾಟಗಾರರು ಕ್ರಮ ವಹಿಸಬೇಕು. ಪ್ರತಿ ತಿಂಗಳ ರಸಗೊಬ್ಬರದ ಪಿಓಎಸ್ ಮಷಿನದ ದಾಸ್ತಾನನ್ನು ಕೃಷಿ ಇಲಾಖೆಯ ಕಚೇರಿಗೆ ಸಲ್ಲಿಸಬೇಕು. ರೈತರು ನಿಗದಿತ ಪ್ರಮಾಣದಲ್ಲಿ ಕಳೆನಾಶಕಗಳನ್ನು ಉಪಯೋಗಿಸಲು ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.
ಸಿಂಜೇಟಾ ಕಂಪನಿಯ ವ್ಯವಸ್ಥಾಪಕ ಅಬ್ದುಲ್‌ರಜಾಕ ಅವರು ಕೀಟನಾಶಕಗಳ ಬಳಕೆಯ ಬಗ್ಗೆ ಹಾಗೂ ಅದರ ದುಷ್ಪರಿಣಾಮದ ಬಗ್ಗೆ ಮತ್ತು ಮನುಷ್ಯನ ಮೇಲೆ ಹೇಗೆ ಪರಿಣಾಮ ಬಿರುತ್ತವೆ ಎಂಬುದನ್ನು ತಿಳಿಸಿಕೊಟ್ಟು ಕೀಟನಾಶಕ ಉಪಯೋಗಿಸುವ ಮುನ್ನಾ ಪಾಲಿಸಬೇಕಾದ ಮುಂಜಾಗ್ರತಾ ಕ್ರಮಗಳನ್ನು ವಿವರಿಸಿದರು.
ತಾಲೂಕು ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಶಂಕರಗೌಡ ಹಿರೇಗೌಡರ ಆಲೂರ ಅವರು ಮಾತನಾಡಿ ಜಂಕ್ಷನ್‌ಗಳಾದ ಗ್ರೋಮರ್, ಜುವಾರಿ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮಾರುವದನ್ನು ಬಿಟ್ಟು ಬೇರೆ ಕಂಪನಿಗಳ ಉತ್ಪನ್ನಗಳನ್ನು ಮಾರುತ್ತಿರುವದು ಕಂಡು ಬಂದಿದೆ. ಆಂಧ್ರದಿಂದ ಬಂದಂತಹ ಪರಿಕರ ಮಾರಾಟಗಾರರು ಜೀವರಾಸಾಯನಿಕ ಉತ್ಪನ್ನಗಳನ್ನು ಮಾರುವದನ್ನು ನಿಲ್ಲಿಸಲು ಕ್ರಮ ಜರುಗಿಸಬೇಕು ಎಂದರು.