ಮಂಡ್ಯ: ಕೋವಿಡ್ 19 ಸೋಂಕು ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಸೇರಿದಂತೆ ಇತರೆಡೆ ಬೆಳೆದಿರುವ ದ್ರಾಕ್ಷಿ ಬೆಳೆ ಕಟಾವು ಮಾಡಿ, ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರಗಳಲ್ಲಿ ಸುಮಾರು 400 ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆದು ನಿಂತಿದೆ. ಕಟಾವು ಮಾಡಲು ಕೂಲಿ ಕಾರ್ಮಿಕರಿಲ್ಲದೆ ರೈತರು ಪರಿತಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದ್ರಾಕ್ಷಿ ಬೆಳೆ ಕಟಾವು ಮಾಡಿಸಿ ಮಾರಾಟ ಮಾಡುವ ವ್ಯವಸ್ಥೆ ಮಾಡಲು ತೋಟಗಾರಿಕೆ ಇಲಾಖೆ ವತಿಯಿಂದ ಸಿದ್ಧತೆ ನಡೆಸುತ್ತಿರುವುದಾಗಿ ಹೇಳಿದರು. ಹಾಪ್‌ಕಾಮ್ಸ್ ವತಿಯಿಂದ
ತರಕಾರಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಗತ್ಯ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ವರ್ತಕರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೆ.ಜಿ.ಯೊಂದಕ್ಕೆ 750 ರೂ. ನೀಡಿ ರೇಷ್ಮೆ ಖರೀದಿ : ಲಾಕ್‌ಡೌನ್ ಪರಿಣಾಮ ರೈತರು ಮಾರುಕಟ್ಟೆಗಳಿಗೆ ರೇಷ್ಮೆ ಗೂಡನ್ನು ಕೊಂಡೊಯ್ಯಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಎಲ್ಲ ರೇಷ್ಮೆ ಮಾರುಕಟ್ಟೆಗಳಲ್ಲಿ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಹಣ ಪಾವತಿಸುವಂತೆ ಸಂಬಂಧಿಸಿದವರಿಗೆ ಎಚ್ಚರಿಕೆ ನೀಡಿದ್ದೇವೆ. ಒಂದು ವೇಳೆ ರೈತರು ಮಾರುಕಟ್ಟೆಗೆ ಸಾಗಿಸಲಾಗುತ್ತಿಲ್ಲ ಎಂದು ಆತಂಕಪಡುವುದು ಬೇಡ. ಕಪ್ಪು ಬಟ್ಟೆ ಮೇಲೆ ರೇಷ್ಮೆ ಗೂಡನ್ನು ಹಾಕಿ ಒಣಗಿಸಿ ಒಂದು ತಿಂಗಳ ನಂತರ ಅದನ್ನು ಮಾರಾಟ ಮಾಡಿದರೂ ಕೆ.ಜಿ.ಯೊಂದಕ್ಕೆ 750 ರೂ. ನೀಡಿ ಖರೀದಿಸಲಾಗುವುದು ಎಂದು ಸಚಿವ ನಾರಾಯಣಗೌಡ ಭರವಸೆ ನೀಡಿದರು.
ರೈತರಿಂದ ನೇರವಾಗಿ ಖರೀದಿ ಮಾಡುವಂತೆ ಮೈಸೂರು ಸಿಲ್ಕ್ಸ್ ನವರಿಗೆ ಸೂಚನೆ ನೀಡಿದ್ದು, ರೇಷ್ಮೆ ಗೂಡು ಖರೀದಿ ಹಾಗೂ ರೈತರಿಗೆ ಯಾವುದೇ ರೀತಿಯ ನಷ್ಟವಾಗದಂತೆ ಕ್ರಮ ಕೈಗೊಳ್ಳಲಿದ್ದಾರೆ ಎಂದರು.