ಮನಪಾ ವತಿಯಿಂದ ಮನೆ ಮನೆಗೆ ಬಂದು ಹಸಿ ಕಸ, ಒಣಕಸ ಪ್ರತ್ಯೇಕಿಸಿ ಕೊಡಿ ಎಂದು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದರೂ ನಗರದ ಕೆಲವು ಭಾಗಗಳಲ್ಲಿ ರಸ್ತೆ ಬದಿಯಲ್ಲೇ ಕಸ ರಾಶಿ ಹಾಕಲಾಗುತ್ತಿದೆ.
ಮಳೆಗಾಲ ಆರಂಭವಾದಾಗಿನಿಂದ ನಗರದಲ್ಲಿ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗುತ್ತಿದೆ. ಈ ನಡುವೆ ಕಸದ ರಾಶಿ ಮತ್ತಷ್ಟು ಆತಂಕ ಸೃಷ್ಟಿಸುತ್ತಿದೆ. ಕಸದ ರಾಶಿಗೆ ಮಳೆ ನೀರು ಬಿದ್ದಾಗ ಅಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ರೋಗಗಳನ್ನು ಸೃಷ್ಟಿಸುವ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜರಗಿಸಬೇಕಾಗಿದೆ.
ಸಾರ್ವಜನಿಕರು ಮನೆಗೆ ಬರುವ ಕಸ ವಿಲೇವಾರಿ ವಾಹನಗಳಿಗೆ ಹೆಚ್ಚಾಗಿ ಕಸ ನೀಡುತ್ತಾರೆ.ಆದರೆ ಹೊಟೇಲ್, ಅಂಗಡಿ, ಮಾರುಕಟ್ಟೆ ವ್ಯಾಪಾರಿಗಳು ಎಲ್ಲಾದರೂ ರಸ್ತೆ ಬದಿಯಲ್ಲಿ ಕಸ ಎಸೆಯುವ ಪ್ರಕರಣಗಳು ಹೆಚ್ಚಾಗುತ್ತಿವೆ. ಪಾಲಿಕೆ ಅಧಿಕಾರಿಗಳು ಇಂತಹವರಿಗೆ ದಂಡ ವಿಧಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಜನರು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಅದಕ್ಕಾಗಿ ಪಾಲಿಕೆ ಈ ಬಗ್ಗೆ ಇನ್ನಷ್ಟು ಗಮನಹರಿಸಬೇಕಾಗಿದೆ.
ಗೋಳಿಕಟ್ಟೆ ಬಜಾರ್: ಕಸ ವಿಲೇವಾರಿಗೊಳಿಸಿ
ಬಂದರು ಗೋಳಿಕಟ್ಟೆ ಬಜಾರ್ ಬಳಿ ಕಸ ವಿಲೇವಾರಿ ಮಾಡದೇ ಇರುವುದರಿಂದ ಸ್ಥಳೀಯ ಅಂಗಡಿ ವ್ಯಾಪಾರಸ್ಥರಿಗೆ ಸಮಸ್ಯೆ ಯಾಗಿ ಪರಿಣಮಿಸಿದೆ. ಸ್ಥಳೀಯವಾಗಿ ಉತ್ಪನ್ನವಾಗುವ ಎಲ್ಲ ತ್ಯಾಜ್ಯಗಳನ್ನು ತಂದು ಇಲ್ಲಿ ಒಂದೆಡೆ ಸುರಿಯಲಾಗುತ್ತದೆ. ಆದರೆ ಪಾಲಿಕೆಯ ಕಸ ವಿಲೇವಾರಿ ಮಾಡುವ ವಾಹನವು ಇಲ್ಲಿ ಬರುವುದಿಲ್ಲ. ಮಳೆಗೆ ತ್ಯಾಜ್ಯವು ರಸ್ತೆ ಮೇಲೆ ಹರಿದು ಕೊಳಚೆಯಂತಾಗಿದೆ. ದಯವಿಟ್ಟು ಇದಕ್ಕೆ ಪರಿಹಾರ ಸೂಚಿಸಿ ನೆಮ್ಮದಿಯ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕು.
•ಸ್ಥಳೀಯ ನಾಗರಿಕರು