Advertisement

ದೌರ್ಜನ್ಯ ಕುರಿತು ದೂರು ನೀಡಿದ ತಕ್ಷಣ ಕ್ರಮ

12:26 PM Aug 26, 2018 | |

ಬೆಂಗಳೂರು: ಗಾರ್ಮೆಂಟ್ಸ್‌ಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಕಿರುಕುಳ, ಲೈಂಗಿಕ ದೌರ್ಜನ್ಯ ಸೇರಿದಂತೆ ಯಾವುದೇ ಸಮಸ್ಯೆಗಳ ಬಗ್ಗೆ ದೂರು ನೀಡಿದರೆ ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸಿ ಕ್ರಮ ಕೈಗೊಳ್ಳಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ.ಜಯಮಾಲಾ ಹೇಳಿದ್ದಾರೆ.

Advertisement

ಗಾರ್ಮೆಂಟ್ಸ್‌ಗಳಲ್ಲಿ ಮಹಿಳಾ ಕಾರ್ಮಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಕುರಿತು “ಉದಯವಾಣಿ’ಯಲ್ಲಿ ಪ್ರಕಟವಾದ ಸರಣಿ ವರದಿಗಳ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಮಹಿಳಾ ಕಾರ್ಮಿಕರ ಮೇಲಿನ ಶೋಷಣೆ ತಡೆಗಟ್ಟಲು ಸಾಕಷ್ಟು ಕಾನೂನುಗಳು ಬಂದಿವೆ.

2011ರಲ್ಲಿ ಜಾರಿಗೊಂಡ ವಿಶಾಕ ವರದಿ ಪ್ರಕಾರ ಹೆಣ್ಣುಮಕ್ಕಳು ದುಡಿಯುವ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ತಡೆಗೆ ಆಂತರಿಕ ಸಮಿತಿ ರಚಿಸಬೇಕು. ತೊಂದರೆಗೆ ಒಳಗಾದವರು ನೇರವಾಗಿ ಅಥವಾ ಆ ಸಮಿತಿ ಮೂಲಕ ಸರ್ಕಾರಕ್ಕೆ ದೂರು ಸಲ್ಲಿಸಿದರೆ ಸರ್ಕಾರ ತಕ್ಷಣ ಅದಕ್ಕೆ ಸ್ಪಂದಿಸಿ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ತಾವು ಕೆಲಸ ಮಾಡುವ ಯಾವುದೇ ಸ್ಥಳದಲ್ಲಿ ಅನುಭವಿಸುವ ದೌರ್ಜನ್ಯದ ವಿರುದ್ಧ ದೂರು ಸಲ್ಲಿಸುವ ಎದೆಗಾರಿಕೆಯನ್ನು ಮಹಿಳೆಯರು ಬೆಳೆಸಿಕೊಳ್ಳಬೇಕು. ಮಹಿಳೆಯರು ದೂರು ನೀಡಿದರೆ ಸರ್ಕಾರ ಅಗತ್ಯವಾಗಿ ಕಠಿಣ ಕ್ರಮ ತೆಗೆದುಕೊಳ್ಳಲಿದೆ. ಗಾರ್ಮೆಂಟ್ಸ್‌ ಮಹಿಳೆಯರೇ ಸ್ವಯಂ ಪ್ರೇರಿತವಾಗಿ ದೂರು ನೀಡಲು ಮುಂದಾಗಬೇಕು. ಗಾರ್ಮೆಂಟ್ಸ್‌ಗಳಲ್ಲಿ ಶೋಷಣೆ ಅನುಭವಿಸುತ್ತಿರುವ ಮಹಿಳೆಯರು ದೌರ್ಜನ್ಯದ ವಿರುದ್ಧ ಮುನ್ನುಗ್ಗಿದ್ದರೆ ಅವರ ಪರವಾಗಿ ನಾವಿದ್ದೇವೆ ಎಂದೂ ಅವರು ಸ್ಪಷ್ಟಪಡಿಸಿದರು.

ದಾಖಲೆ ಬೇಕು: ಗಾರ್ಮೆಂಟ್ಸ್‌ಗಳಲ್ಲಿ ದುಡಿಯುತ್ತಿರುವ ಮಹಿಳೆಯರು ಎದುರಿಸುವ ತೊಂದರೆಗಳ ಬಗ್ಗೆ ಕೇವಲ ಮೌಖೀಕವಾಗಿ ಹೇಳಿದರೆ ಸರ್ಕಾರವನ್ನು ತಲುಪುವುದು ಹೇಗೆ? ಆರೋಪಗಳ ವಿರುದ್ಧ ಕ್ರಮ ಕೈಗೊಳ್ಳಲು ದಾಖಲೆ ಬೇಕು. ಹೀಗಾಗಿ ಮಹಿಳೆಯರೇ ಸ್ವಯಂ ಪ್ರೇರಿತವಾಗಿ ದೂರು ಸಲ್ಲಿಸಬೇಕು. ಆಗ ಸರ್ಕಾರದ ಬಳಿ ದಾಖಲೆಗಳಿರುತ್ತವೆ. ಅಂತಹ ಗಾರ್ಮೆಂಟ್ಸ್‌ಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬಹುದು ಎಂದು ಅವರು ಹೇಳಿದರು.

Advertisement

ಸಮಸ್ಯೆಗಳು ಎಲ್ಲಾ ಕಡೆ ಇವೆ. ಅವೆಲ್ಲವನ್ನೂ ಸರ್ಕಾರವೇ ಕಂಡು ಹಿಡಿದು ಪರಿಹಾರ ಮಾಡಬೇಕು ಎಂದರೆ ಸಾಧ್ಯವಿಲ್ಲ. ಒಂದೊಮ್ಮೆ ಸರ್ಕಾರವೇ ಸಮಸ್ಯೆಗಳ ಬಗ್ಗೆ ಕ್ರಮಕ್ಕೆ ಮುಂದಾದರೆ ಆಗ ದಾಖಲೆಗಳು ಬೇಕಾಗುತ್ತದೆ. ಹೀಗಾಗಿ ತೊಂದರೆಗೊಳಗಾದ ಮಹಿಳಾ ಕಾರ್ಮಿಕರು ದೂರು ನೀಡುವ ಮೂಲಕ ಸರ್ಕಾರದೊಂದಿಗೆ ಸಹಕರಿಸಬೇಕು ಎಂದೂ ಅವರು ಮನವಿ ಮಾಡಿದರು.

ಹಾಗೆಂದು ಮೌಖೀಕ ದೂರು, ಒಟ್ಟಾರೆ ಆರೋಪಗಳನ್ನು ಆಧಾರವಾಗಿಟ್ಟುಕೊಂಡು ಗಾರ್ಮೆಂಟ್ಸ್‌ಗಳ ಮೇಲೆ ಕ್ರಮಕೈಗೊಳ್ಳಲು ಸಾಧ್ಯವಿಲ್ಲ. ಏಕೆಂದರೆ, ಲಕ್ಷಾಂತರ ಮಹಿಳೆಯರು ಗಾರ್ಮೆಂಟ್ಸ್‌ಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಯಾರಿಗೆ ತೊಂದರೆಯಾಗಿದೆಯೋ ಅವರಿಗೆ ನ್ಯಾಯ ಒದಗಿಸಲು ಸರ್ಕಾರ ಬದ್ಧವಾಗಿದೆ.  

ಗಾರ್ಮೆಂಟ್ಸ್‌ನಲ್ಲಿರುವ ಮಹಿಳಾ ಕಾರ್ಮಿಕರು ಯಾತನೆ ಸಹಿಸಿಕೊಂಡು ಸುಮ್ಮನಿರದೆ ದೌರ್ಜನ್ಯ ಎಸಗುವವರ ವಿರುದ್ಧ ಕಾರ್ಮಿಕ ಇಲಾಖೆ ಅಥವಾ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಬಹುದು. ಸರ್ಕಾರ ಪ್ರತಿಕ್ಷಣ ಅವರೊಂದಿಗೆ ಇದೆ. ವಿಕೃತ ಮನಸ್ಥಿತಿಯ ವಿರುದ್ಧ ಹೋರಾಟ ನಡೆಸಲು ಹೆಣ್ಣು ಮಕ್ಕಳು ಸಂಘಟಿತರಾಗಬೇಕು ಎಂದರು.

ದೂರುದಾರರ ರಕ್ಷಣೆ ನಮ್ಮ ಕರ್ತವ್ಯ: ಮಹಿಳೆಯರ ರಕ್ಷಣೆಗಾಗಿ ಸಾಕಷ್ಟು ಕಾನೂನುಗಳಿವೆ. ಮಹಿಳೆಯರ ಮೇಲೆ ದೌರ್ಜನ್ಯ ಎಸಗುವವರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದಂತಹ ಕಠಿಣ ನಿಯಮಗಳು ಜಾರಿಯಲ್ಲಿವೆ. ಅಷ್ಟೇ ಅಲ್ಲ, ದೂರು ನೀಡಿದವರನ್ನು ಕೆಲಸದಿಂದ ತೆಗೆದು ಹಾಕುವಂತೆಯೂ ಇಲ್ಲ.

ಹೀಗಾಗಿ ಮಹಿಳೆಯರು ಧೈರ್ಯವಾಗಿ ಮುಂದೆ ಬಂದು ತಾವು ಗಾರ್ಮೆಂಟ್ಸ್‌ಗಳಲ್ಲಿ ಅನುಭವಿಸುತ್ತಿರುವ ಶೋಷಣೆ ಕುರಿತು ಸರ್ಕಾರದ ವಿವಿಧ ಸಂಸ್ಥೆಗಳಲ್ಲಿ ದೂರು ನೀಡಬಹುದು. ದೂರು ನೀಡಿದ ಮಹಿಳೆಯನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದೂ ಸಚಿವೆ ಜಯಮಾಲಾ ತಿಳಿಸಿದರು.

ಮಹಿಳೆಯರನ್ನು ಜೀತದಾಳುಗಳ ರೀತಿ ನಡೆಸಿಕೊಳ್ಳುವುದು ಹೀನಾಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ. ಮಹಿಳಾ ದೌರ್ಜನ್ಯ ಕುರಿತು ಸಂಘಟನೆಗಳು ಅಥವಾ ಸಂತ್ರಸ್ತರು ದೂರು ಸಲ್ಲಿಸಿದರೆ, ಆರೋಪಿಗಳ ವಿರುದ್ಧ ಸರ್ಕಾರ ಖಂಡಿತ ಕಠಿಣ ಕ್ರಮ ಕೈಗೊಳ್ಳಲಿದೆ.
-ಡಾ.ಜಯಮಲಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ

Advertisement

Udayavani is now on Telegram. Click here to join our channel and stay updated with the latest news.

Next