Advertisement

ಲಸಿಕಾ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಕ್ರಮ

06:07 PM Jan 20, 2022 | Team Udayavani |

ತುಮಕೂರು: ಜಿಲ್ಲೆಯಲ್ಲಿ ಪ್ರತಿ ಸಭೆಯಲ್ಲಿಯೂ ಶೇ.100ರಷ್ಟು ಲಸಿಕಾ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ಹಲವಾರು ಬಾರಿ ನಿರ್ದೇಶನ ನೀಡಿದರೂ ಸಹ, ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್‌ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿ ಮಾತನಾಡಿದ ಅವರು, ಬೇರೆ ಜಿಲ್ಲೆಗಳಲ್ಲಿ ಶೇ.100ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಲಸಿಕಾ ಪ್ರಕ್ರಿಯೆ ಪೂರ್ಣವಾಗುತ್ತಿದೆ. ಆದರೆ, ನಮ್ಮ ಜಿಲ್ಲೆಯಲ್ಲಿ ಲಸಿಕಾ ಪ್ರಕ್ರಿಯೆಯಲ್ಲಿ ಶೇ.100ರಷ್ಟು ಗುರಿ ಸಾಧಿಸದಿರಲು ತೊಂದರೆ ಯೇನು? ಪ್ರತಿ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸೂಚನೆ ನೀಡಿದರೂ ಸಹ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಬೇಸರಿಸಿದ ಅವರು, ಇನ್ನು 3 ದಿನಗಳೊಳಗೆ ಲಸಿಕಾ ಪ್ರಕ್ರಿಯೆ ಪೂರ್ಣಗೊಳಿಸದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು
ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅಧಿಕಾರಿಗಳ ತಂಡ ರಚಿಸಿ: ಜಿಲ್ಲಾದ್ಯಂತ ಬರುವ ಶುಕ್ರವಾರದವರೆಗೆ ಲಸಿಕಾ ಅಭಿಯಾನ ನಡೆಸಿ, ಬಾಕಿ ಇರುವ ಮೊದಲ ಹಾಗೂ ಎರಡನೇ ಡೋಸ್‌ ಲಸಿಕಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆದ್ಯತೆ ನೀಡಬೇಕು. ನಂತರ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಗುರಿಯನ್ನು ಪೂರ್ಣಗೊಳಿಸಬೇಕು.

ತಾಲೂಕು ಮಟ್ಟದಲ್ಲಿ ತಾಲೂಕು ಆರೋಗ್ಯಾಧಿಕಾರಿ, ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ, ತಹಶೀಲ್ದಾರರು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯ
ಅಧಿಕಾರಿಗಳ ತಂಡ ರಚಿಸಿ ಸ್ಥಳ ಪರಿಶೀಲನೆ ಮಾಡಿ, ಮತಗಟ್ಟೆವಾರು ಮತದಾರರ ಪಟ್ಟಿಯಲ್ಲಿರುವ ಹೆಸರು ಗಳನ್ನು ಪರಿಶೀಲಿಸಿ ಲಸಿಕೆ ಪಡೆಯುವವರ ಪಟ್ಟಿ ಮಾಡಿ ಅರ್ಹರಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಲಸಿಕಾ ಪ್ರಕ್ರಿಯೆಯಲ್ಲಿ ತೀರಾ ಹಿಂದುಳಿದಿರುವ ಪಾವಗಡ ತಾಲೂಕಿನಲ್ಲಿ ಶೇ.100ರಷ್ಟು ಪೂರ್ಣಗೊಳಿ ಸಲು ಶಿಕ್ಷಣ ಹಾಗೂ ಕಂದಾಯ ಇಲಾಖೆಯವರು ಆರೋಗ್ಯ ಇಲಾಖೆಯೊಂದಿಗೆ ಸಹಕಾರ ನೀಡಬೇಕು. ಬೂಸ್ಟರ್‌ ಡೋಸ್‌ ಪಡೆಯಲು ಅರ್ಹರಿರುವ ಕಂದಾಯ, ಆರೋಗ್ಯ, ಪೊಲೀಸ್‌, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಮುಂಚೂಣಿ ಕಾರ್ಯಕರ್ತರು 2ನೇ ಡೋಸ್‌ ಪಡೆದು 90 ದಿನಗಳು ಪೂರ್ಣ
ಗೊಂಡಿದ್ದರೆ, ಕಡ್ಡಾಯವಾಗಿ ಬೂಸ್ಟರ್‌ ಡೋಸ್‌ ಲಸಿಕೆ ಪಡೆಯಬೇಕೆಂದು ಸೂಚಿಸಿದರು.

Advertisement

ಔಷಧಿ ಕೊರತೆಯಾಗದಂತೆ ನಿಗಾವಹಿಸಿ: ಕೋವಿಡ್‌ ಸೋಂಕು ದೃಢಪಟ್ಟ ರೋಗಿಗಳಿಗೆ ನೀಡಲು ಅನುವಾಗುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್‌ಗೆ ಸಂಬಂಧಿಸಿದ ಔಷಧಿಗಳನ್ನು ದಾಸ್ತಾನು ಇಟ್ಟಿರಬೇಕು. ಸೋಂಕಿತರಿಗೆ ಔಷಧಿ ಕೊರತೆಯಾಗ ದಂತೆ ಗ್ರಾಮ ಮಟ್ಟದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ನಗರ ವ್ಯಾಪ್ತಿಯಲ್ಲಿ ಬಿಲ್‌ ಕಲೆಕ್ಟರ್‌ಗಳು ನಿಗಾವಹಿಸಬೇಕು. ಪ್ರತಿ 100 ಸೋಂಕಿತರಲ್ಲಿ ಒಬ್ಬರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಔಷಧಿ ಪೂರೈಕೆಯಾಗುತ್ತಿರುವ ಬಗ್ಗೆ ಮಾಹಿತಿ ಪಡೆದು ಪರಿಶೀಲಿಸಲಾಗುವುದು. ಸೋಂಕಿತರಿಂದ ದೂರುಗಳು ಬಂದಲ್ಲಿ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮೋಹನ್‌ ದಾಸ್‌, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ಕೇಶವರಾಜ್‌, ಪಾಲಿಕೆ ಆಯುಕ್ತೆ ರೇಣುಕಾ ಹಾಗೂ ಆರೋಗ್ಯಾಧಿಕಾರಿ ಡಾ.ರಕ್ಷಿತ್‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next