Advertisement

ರೈತರ ಹಣ ದುರ್ಬಳಕೆ ಮಾಡಿದರೆ ಕ್ರಮ

01:13 PM Aug 31, 2019 | Team Udayavani |

ಮಂಡ್ಯ: ರೈತರ ಬೆಳೆಸಾಲ ದುರ್ಬಳಕೆ ಮಾಡಿ ಕೊಂಡಿರುವ ಕಾರ್ಯದರ್ಶಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಪಂ ಅಧ್ಯಕ್ಷೆ ನಾಗರತ್ನಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಹಕಾರ ಇಲಾಖೆಯ ಉಪನಿಬಂಧಕರು ರೈತರಿಗೆ ಬೆಳೆ ಸಾಲ ಕುರಿತು ಮಾತನಾಡಿ, ಕೆ.ಆರ್‌.ಪೇಟೆ ತಾಲೂಕು ಸಹಕಾರ ಸಂಘದ ಸೊಸೈಟಿಗೆ ಬೆಳೆ ಸಾಲ ಬಿಡುಗಡೆಯಾಗಿದ್ದು, ಆ ಹಣವನ್ನು ಆಡಳಿತ ಮಂಡಳಿ ಸದಸ್ಯರ ಸಮ್ಮುಖದಲ್ಲಿ ಬಟವಾಡೆ ಮಾಡ ಬೇಕಾಗಿರುತ್ತದೆ. ಆದರೆ, ಕಾರ್ಯದರ್ಶಿ 44 ರೈತರ 4.64 ಲಕ್ಷ ರೂ.ಗಳನ್ನು ಬಟವಾಡೆ ಮಾಡದೆ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಸಹಕಾರ ಸಂಘಗಳ ಇಲಾಖೆ ಅಧಿಕಾರಿ ಕೃಷ್ಣಮೂರ್ತಿ ಮಾತನಾಡಿ, ಸಂಬಂಧಿಸಿದ ಆಡಳಿತ ಮಂಡಳಿಯವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬಹುದೇ ಹೊರತು ನಮಗೆ ಕಾರ್ಯದರ್ಶಿ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಇಲ್ಲ ಎಂದು ಸ್ಪಷ್ಟಪಡಿಸಿದರು.

ವಿದ್ಯುತ್‌ ಕಂಬ-ತಂತಿಗಳ ಬದಲಾವಣೆ:ವಿದ್ಯುತ್‌ ಇಲಾಖೆ ಮೇಲಿನ ಚರ್ಚೆ ವೇಳೆ ಕೆ.ಆರ್‌. ಪೇಟೆ ತಾಲೂಕಿನಲ್ಲಿ ಶಿಥಿಲಗೊಂಡಿರುವ ಮತ್ತು ಹಾಳಾಗಿರುವ ವಿದ್ಯುತ್‌ ಕಂಬ ಮತ್ತು ತಂತಿಗಳನ್ನು ಬದಲಾವಣೆ ಮಾಡಲಾಗಿದೆ. ನಿರಂತರ ಜ್ಯೋತಿ ವಿದ್ಯುತ್‌ ಸರಬರಾಜಿಗಾಗಿ ಮಡುವಿನಕೋಡಿ ಗ್ರಾಮದ ವ್ಯಾಪ್ತಿಯಲ್ಲಿ ಈಗಾಗಲೇ ಶೇ. 70ರಷ್ಟು ಕೆಲಸ ಮುಗಿದಿದ್ದು, ಇನ್ನುಳಿದ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸೆಸ್ಕ್ನ ಅಧೀಕ್ಷಕ ಅಭಿಯಂತರ ಶ್ರೀನಿವಾಸಮೂರ್ತಿ ಸಭೆಗೆ ತಿಳಿಸಿದರು.

ಮದ್ದೂರು ತಾಲೂಕು ಅಜ್ಜಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸ್ಥಳ ಪರಿಶೀಲಿಸಿ ತಾತ್ಕಾಲಿಕವಾಗಿ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ ಎಂದರು. ಮಧ್ಯೆ ಪ್ರವೇಶಿಸಿದ ಅಧ್ಯಕ್ಷೆ ನಾಗರತ್ನಸ್ವಾಮಿ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್‌ ಸಮಸ್ಯೆ ಸರಿಪಡಿಸಲು ಅವಕಾಶ ಬೇಕೆ ಎಂದು ಪ್ರಶ್ನಿಸಿದರು.

Advertisement

ಇದಕ್ಕೆ ಉತ್ತರಿಸಿದ ಸೆಸ್ಕ್ ಅಧೀಕ್ಷಕ ಅಭಿಯಂತರ ಶ್ರೀನಿವಾಸಮೂರ್ತಿ, ನಗರ ಪ್ರದೇಶದಲ್ಲಿ 24 ಗಂಟೆಯೊಳಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ 72 ಗಂಟೆಯೊಳಗೆ ದುರಸ್ತಿ ಪಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಪ್ರತ್ಯೇಕ ಮೀಟರ್‌ ಸಾಧ್ಯವಿಲ್ಲ: ಶ್ರೀರಂಗಪಟ್ಟಣ ಆಯುಷ್‌ ಆಸ್ಪತ್ರೆಯು ಹೆಚ್ಟಿ ಸ್ಥಾವರದ ಆವರಣದಲ್ಲಿರುವುದರಿಂದ ಸೆಸ್ಕ್ ವತಿಯಿಂದ ಪ್ರತ್ಯೇಕ ಮೀಟರ್‌ ಅಳವಡಿಸಲು ಇಲಾಖೆಯ ನಿಯಮಗಳಲ್ಲಿ ಅವಕಾಶವಿರುವುದಿಲ್ಲ ಎಂದು ತಿಳಿಸಿದರು.

ಪ್ರತ್ಯೇಕ ಮೀಟರ್‌ ಅಳವಡಿಸದಿದ್ದರೆ ಮತ್ತೇನು ಮಾಡುವುದು ಎಂದು ಆಯುಷ್‌ ವೈದ್ಯಾಧಿಕಾರಿ ಡಾ. ಪುಷ್ಪಾಸೆಸ್ಕ್ ಅಧೀಕ್ಷಕ ಅಭಿಯಂತರರನ್ನು ಪ್ರಶ್ನಿಸ್ದಿದರು. ಇದಕ್ಕೆ ಉತ್ತರಿಸಿದ ಸೆಸ್ಕ್ ಅಧೀಕ್ಷಕ ಶ್ರೀನಿವಾಸಮೂರ್ತಿ, ಬೇರೆ ಮೀಟರ್‌ ಬೇಕಾದರೆ ಅರ್ಜಿ ಕೊಡಿ, ಹೊಸ ಮೀಟರ್‌ ಅಳವಡಿಸಿಕೊಡಲಾಗುವುದು ಎಂದು ವಿವರಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಗಾಯತ್ರಿ ಇತರೆ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next