ಬಾಗಲಕೋಟೆ: ಆರ್ಥಿಕವಾಗಿ ಸದೃಢರು ಪಡೆದಿರುವ ಬಿಪಿಎಲ್ ಕಾರ್ಡ್‌ನ್ನು ಸರ್ಕಾರ ಕ್ರಮ ಕೈಗೊಳ್ಳುವ ಮೊದಲೇ ಹಿಂದಿರುಗಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಎಚ್ಚರಿಸಿದ್ದಾರೆ.
ಆರ್ಥಿಕವಾಗಿ ದುರ್ಬಲರಿರುವ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುತ್ತಿರುವ ಬಿಪಿಎಲ್ ಪಡಿತರವನ್ನು ಕೆಲವು ಸದೃಢ ಕುಟುಂಬಗಳು ಸುಳ್ಳು ಮಾಹಿತಿ ನೀಡಿ ಪಡೆದುಕೊಂಡು ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ. ಆದಾಯ ತೆರಿಗೆ ಪಾವತಿಸುತ್ತಿರುವ ಮತ್ತು 1000 ಚದುರಡಿಗಿಂತ ದೊಡ್ಡದಾದ ಮನೆ ಹೊಂದಿರುವ ಕೆಲವು ಕುಟುಂಬಗಳು ಬಿಪಿಎಲ್ ಪಡೆದು ವಂಚಿಸಿದ್ದಾರೆ.
ಶಿಕ್ಷಣ, ಸಾರಿಗೆ, ವಿದ್ಯುತ್, ರೇಲ್ವೆ, ಪೊಲೀಸ್ ಮೊದಲಾದ ಇಲಾಖೆಗಳಲ್ಲಿ ಸರ್ಕಾರಿ ನೌಕರಿ ಮಾಡುತ್ತಿರುವ ಕೆಲವರು ತಮ್ಮ ಹೆಸರನ್ನು ಹೊರತುಪಡಿಸಿ ಕುಟುಂಬದ ಇತರರ ಹೆಸರಿನಲ್ಲಿ ಬಿಪಿಎಲ್ ಪಡೆದುಕೊಂಡಿದ್ದಾರೆ. ಸಹಕಾರ ಸಂಘಗಳ ಕಾಯಂ ನೌಕರರು, ಸ್ವಾಯುತ್ತ ಸಂಸ್ಥೆ, ಮಂಡಳಿಗಳ ನೌಕರರು, ಬ್ಯಾಂಕ್ ನೌಕರರುಗಳು, ಆಸ್ಪತ್ರೆ ನೌಕರರು, ವಕೀಲರು, ಆಡಿಟರ್ಗಳು, ದೊಡ್ಡ ಅಂಗಡಿ, ಹೋಟೆಲ್ ವರ್ತಕರು ಬಿಪಿಎಲ್ ಪಡೆದು ವಂಚಿಸಿದ್ದಾರೆ.
ಸ್ವಂತ ಕಾರು, ಲಾರಿ, ಜೆಸಿಬಿ ಮೊದಲಾದ ವಾಹನ ಹೊಂದಿರುವವರು, ಅನುದಾನಿತ ಶಾಲಾ ಕಾಲೇಜು ನೌಕರರು, ಗುತ್ತಿಗೆದಾರರು, ಕಮಿಷನ್ ಏಜೆಂಟ್‌ಗಳು, ಮನೆ, ಮಳಿಗೆ ಕಟ್ಟಡ ಬಾಡಿಗೆಗೆ ನೀಡಿ ವರಮಾನ ಪಡೆಯುತ್ತಿರುವವರು, ಬಹುರಾಷ್ಟ್ರೀಯ ಕಂಪನಿ ಉದ್ದಿಮೆದಾರರು, ನಿವೃತ್ತಿ ವೇತನ ಪಡೆಯುತ್ತಿರುವ ಸರ್ಕಾರಿ ನೌಕರರು ಬಿಪಿಎಲ್ ಪಡೆದಿರುತ್ತಾರೆ. ಸರ್ಕಾರವು ಬಿಪಿಎಲ್ ಪಡಿತರ ಚೀಟಿ ಪಡೆಯಲು 1,20,000 ರೊಳಗೆ ಕುಟುಂಬದ ಆದಾಯ ನಿಗದಪಡಿಸಲಾಗಿದ್ದು, ಈ ಆದಾಯವನ್ನು ಮೀರಿದ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಿರುವುದಿಲ್ಲ. ಸರ್ಕಾರ 1 ಕೆಜಿ ಅಕ್ಕಿಗೆ ರೂ.35 ರಂತೆ ಪಾವತಿಸಿ ದುರ್ಬಲ ಕುಟುಂಬಗಳಿಗೆ ನೀಡುತ್ತಿರುವ ಈ ಯೋಜನೆಯ ಲಾಭವನ್ನು ಕೆಲವು ಸದೃಢರು ಸುಳ್ಳು ಮಾಹಿತಿ ನೀಡಿ ಕಬಳಿಸಿರುವುದು ವಿಷಾದನೀಯ ಸಂಗತಿಯಾಗಿದೆ. ಇಂತಹ ವಂಚಕರನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಪತ್ತೆ ಮಾಡುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ