ಸಾಗರ: ಕಂಟೇನ್ಮೆಂಟ್ ಝೋನ್‌ಗಳಿಗೆ ನೇಮಕ ಮಾಡಿರುವ ಇನ್ಸಿಡೆಂಟ್ ಕಮಾಂಡರ್‌ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸೀಲ್ ಡೌನ್ ಪ್ರದೇಶದಲ್ಲಿರುವ ಜನರ ಬೇಕು ಬೇಡಗಳನ್ನು ಗಮನಿಸುತ್ತಿಲ್ಲ ಎನ್ನುವ ದೂರುಗಳಿವೆ. ಅವರು ತಮ್ಮ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸದಿದ್ದರೆ ಸೂಕ್ತ ಶಿಸ್ತು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ಸೂಚನೆ ನೀಡಿದ್ದಾರೆ.
ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಕೋವಿಡ್-19 ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರು ಬರುತ್ತಿಲ್ಲ. ಬೆಂಗಳೂರು ಸೇರಿದಂತೆ ಹೊರರಾಜ್ಯದ ಜನರು ಪ್ರವಾಸಕ್ಕೆ ಬರುವುದಿಲ್ಲ. ಸ್ಥಳೀಯರು ಬರುತ್ತಿದ್ದು, ಅವರ ಬಗ್ಗೆ ಸಹ ಕಾಳಜಿ ಇಲ್ಲ. ಬೆಂಗಳೂರು ಸೇರಿದಂತೆ ಬೇರೆಬೇರೆ ಜಿಲ್ಲೆಗಳಲ್ಲಿ ಕೋವಿಡ್ ಸೋಂಕು ಹೆಚ್ಚಿರುವ ಪ್ರದೇಶದಿಂದ ಸಾಗರಕ್ಕೆ ಬರುವ ಜನರ ಬಗ್ಗೆ ಹೆಚ್ಚು ಜಾಗ್ರತೆ ಇರಲಿ. ಅವರನ್ನು ಸೂಕ್ತ ತಪಾಸಣೆಗೆ ಒಳಪಡಿಸಬೇಕು. ಗ್ರಾಮಾಂತರ ಪ್ರದೇಶಗಳಿಗೆ ಹೊರಜಿಲ್ಲೆಗಳಿಂದ, ಹೊರರಾಜ್ಯದಿಂದ ಬರುವ ಜನರ ಬಗ್ಗೆ ಕಾಳಜಿ ವಹಿಸಿ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಈ ಬಗ್ಗೆ ಗಮನ ಹರಿಸುತ್ತಿರಬೇಕು ಎಂದು ಸೂಚನೆ ನೀಡಿದರು.
ಎಸಿ ಡಾ| ನಾಗರಾಜ್ ಎಲ್. ಮಾತನಾಡಿ, ಮಂಗಳವಾರದಿಂದ ಬೆಳಿಗ್ಗೆ 9 ರಿಂದ ಸಂಜೆ 6ರ ವರೆಗೆ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಈಗ ತರಕಾರಿ ಮಾರಾಟ ಮಾಡುತ್ತಿರುವ ವಿಧಾನದಲ್ಲಿ ಯಾವುದೇ ಬದಲಾವಣೆ ಇಲ್ಲ. ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ವಾರದ ಸಂತೆಗೆ ಯಾವುದೇ ಅವಕಾಶವಿಲ್ಲ ಎಂದು ತಿಳಿಸಿದರು.
ಪೌರಾಯುಕ್ತ ಎಚ್.ಕೆ.ನಾಗಪ್ಪ ಮಾತನಾಡಿ, ಸೀಲ್ ಡೌನ್ ವ್ಯಾಪ್ತಿಯಲ್ಲಿನ ಅಂಗಡಿಗಳಲ್ಲಿನ ವ್ಯಾಪಾರಸ್ಥರು ಈರುಳ್ಳಿ, ಆಲೂಗಡ್ಡೆ, ಬೆಳ್ಳುಳ್ಳಿ ಸೇರಿದಂತೆ ಕೆಲವು ವಸ್ತುಗಳು ಹಾಳಾಗುವ ಹಿನ್ನೆಲೆಯಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಕಂಟೇನ್ಮೆಂಟ್ ಝೋನ್ ನಿವಾಸಿಗಳಲ್ಲಿ ಕೆಲವರು ಔಷಧ ಖರೀದಿ ಸೇರಿದಂತೆ
ಅಗತ್ಯ ವಸ್ತುಗಳು ತುರ್ತಾಗಿ ಬೇಕಾಗಿದ್ದರೆ ನಮ್ಮ ಅಧಿಕಾರಿಗಳಿಗೆ ತಿಳಿಸಬೇಕು. ಸೀಲ್‌ಡೌನ್ ಆದ ಪ್ರದೇಶವೊಂದರಲ್ಲಿನ ಮನೆಯಲ್ಲಿ ಅಪಘಾತಕ್ಕೆ ಒಳಗಾದ ಮಗ ಮಾತ್ರ ಇದ್ದಾರೆ. ಆತನ ಮನೆಯಲ್ಲಿನ ಉಳಿದವರಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಶಿವಮೊಗ್ಗ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿದೆ. ನಗರಸಭೆ ಸಿಬ್ಬಂದಿ ಅವರಿಗೆ ಆಹಾರ ಒದಗಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಚಂದ್ರಶೇಖರ ನಾಯ್ಕ, ಡಿವೈಎಸ್‌ಪಿ ವಿನಾಯಕ ಎಸ್. ಶೆಟ್ಟಿಗಾರ್, ತಾಲೂಕು ಆರೋಗ್ಯಾಧಿಕಾರಿ ಡಾ| ಮೋಹನ್ ಕೆ.ಎಸ್., ಸುರೇಶ್, ಕಾರ್ಯನಿರ್ವಾಹಣಾಧಿಕಾರಿ ಪುಷ್ಪಾ ಎಂ. ಕಮ್ಮಾರ್, ಎಪಿಎಂಸಿ ಅಧ್ಯಕ್ಷ ಚೇತನರಾಜ್ ಕಣ್ಣೂರು ಇನ್ನಿತರರು ಹಾಜರಿದ್ದರು.