Advertisement

ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸದಿದ್ದರೆ ಕ್ರಮ: ಲೋಕಾಯುಕ್ತ ಡಿವೈಎಸ್ಪಿ

06:22 PM Aug 04, 2023 | Team Udayavani |

ಬಾಗಲಕೋಟೆ: ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸದೇ ಅಸಡ್ಡೆ ತೋರಿಸುತ್ತಿರುವ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ-ಸಿಬ್ಬಂದಿಗೆ ಲೋಕಾಯುಕ್ತ ಡಿವೈಎಸ್ಪಿ ಪುಷ್ಪತಲಾ ಎನ್‌. ಖಡಕ್‌ ಎಚ್ಚರಿಕೆ ನೀಡಿದ್ದು, ಸಂತ್ರಸ್ತರ
ಬೇಡಿಕೆಗೆ ತಕ್ಷಣ ಸ್ಪಂದಿಸುವಂತೆ ಸೂಚಿಸಿದ್ದಾರೆ.

Advertisement

ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಹಠಾತ್‌ ದಾಳಿ ನಡೆಸಿದ ಅವರು, ಬಿಟಿಡಿಎ ಕಚೇರಿಯ
ಪುನರ್‌ವಸತಿ ಅಧಿಕಾರಿ ಹಾಗೂ ಮುಖ್ಯ ಎಂಜಿನಿಯರ್‌ ಕಚೇರಿಯ ದಾಖಲೆಗಳ ಪರಿಶೀಲನೆ ನಡೆಸಿದರು. ಈ ವೇಳೆ
ಹಲವು ಹಕ್ಕುಪತ್ರಗಳು ಸಿದ್ಧಗೊಂಡಿದ್ದರೂ ಸಂತ್ರಸ್ತರಿಗೆ ನೀಡದೇ, ಕಚೇರಿಯಲ್ಲೇ ಇಟ್ಟುಕೊಂಡಿರುವುದು ಕಂಡುಬಂತು. ಸಂತ್ರಸ್ತರಿಗೆ ಯಾವುದೇ ಕಾರಣ ನೀಡದೇ ಕಚೇರಿಗೆ ಅಲೆದಾಡಿಸುತ್ತಾರೆ ಎಂಬ ದೂರು ಕೇಳಿಬಂತು.

ನೂರಾರು ಸಂತ್ರಸ್ತರು, ತಮ್ಮ ಕೆಲಸ ಕಾರ್ಯಗಳಿಗಾಗಿ ಕಚೇರಿಗೆ ಬಂದಿದ್ದರೂ, ಬಹುತೇಕ ಸಿಬ್ಬಂದಿ ಬೆಳಗ್ಗೆ 10:30
ಆಗಿದ್ದರೂ ಕಚೇರಿಗೆ ಬಂದಿರಲಿಲ್ಲ. ಲೋಕಾಯುಕ್ತ ಅಧಿಕಾರಿಗಳು, ಕಚೇರಿಗೆ ಬಂದಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಹಲವು ಅಧಿಕಾರಿ-ಸಿಬ್ಬಂದಿಗಳು ಕಚೇರಿಗೆ ದೌಡಾಯಿಸಿದರು. ಈ ವೇಳೆ ಸಿಬ್ಬಂದಿಗೆ ಸೂಚನೆ ನೀಡಿದ್ದಲ್ಲದೇ, ಕಚೇರಿಯಲ್ಲಿಯೇ ಇಟ್ಟುಕೊಂಡಿದ್ದ ಕೆಲವು ಹಕ್ಕುಪತ್ರಗಳನ್ನು ಸಂಬಂಧಿಸಿದ ಸಂತ್ರಸ್ತರಿಗೆ ವಿತರಿಸಲು ಕ್ರಮ
ಕೈಗೊಂಡರು. ಬಿಟಿಡಿಎ ಕಚೇರಿಯಲ್ಲಿ ಏಜೆಂಟ್‌ರ ಹಾವಳಿ ಇದೆ.

ಅಧಿಕಾರಿ-ಸಿಬ್ಬಂದಿ ಕಚೇರಿಗೆ ಸರಿಯಾಗಿ ಬರುವುದಿಲ್ಲ. ತಕ್ಷಣ ಕೆಲಸ ಮಾಡಿಕೊಡದೇ ಅಲೆದಾಡಿಸುತ್ತಾರೆ ಎಂದು ಹಲವು
ಸಾರ್ವಜನಿಕರು ದೂರು ನೀಡಿದ್ದರು. ಹೀಗಾಗಿ ನಮ್ಮ ಎಲ್ಲ ಇನ್ಸ್‌ಪೆಕ್ಟರ್‌ ಹಾಗೂ ಸಿಬ್ಬಂದಿ ಜತೆಗೆ ಕಚೇರಿ ಸಮಯಕ್ಕೆ ಭೇಟಿ ನೀಡಿದಾಗ ಹಲವು ಅಧಿಕಾರಿ-ಸಿಬ್ಬಂದಿಗಳು ಇನ್ನೂ ಕಚೇರಿಗೆ ಬಂದಿರಲಿಲ್ಲ. ಮಧ್ಯಾಹ್ನದವರೆಗೂ ಆರ್‌ಒ ಮತ್ತು ಚೀಪ್‌ ಎಂಜಿನಿಯರ್‌ ಕಚೇರಿ ಪರಿಶೀಲನೆ ಮಾಡಿದ್ದೇವೆ. ಹಕ್ಕುಪತ್ರ ಸಿದ್ಧಗೊಂಡಿದ್ದರೂ ಸಂತ್ರಸ್ತರಿಗೆ ಕೊಟ್ಟಿರಲಿಲ್ಲ. ಅವುಗಳ ವಿತರಣೆ ಕ್ರಮ ಕೈಗೊಳ್ಳಲಾಗಿದೆ. ಈ ಪರಿಶೀಲನೆ ಮುಂದುವರಿಯಲಿದೆ ಎಂದು ಲೋಕಾಯುಕ್ತ ಡಿವೈಎಸ್ಪಿ ಪುಷ್ಪಲತಾ ಎನ್‌. ಉದಯವಾಣಿಗೆ ತಿಳಿಸಿದರು.

ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ಎಂ.ಎಚ್‌. ಬಿದರಿ, ಬಸವರಾಜ ಅವಟಿ, ಡಿ.ಜೆ. ಪಾಟೀಲ, ಸಿಬ್ಬಂದಿ ದೇಸಾಯಿ, ಮುಷ್ಟಿಗೇರಿ, ದೊಡಮನಿ, ಗೌಡರ, ಹಲಗತ್ತಿ, ಮುರನಾಳ, ಪೂಜಾರಿ, ಜೋಕೆರ, ರಾಜನಾಳ, ಮುಲ್ಲಾ, ಬಳಬಟ್ಟಿ, ಪಾಟೀಲ, ಮಾಸರಡ್ಡಿ, ವಾಲಿಕಾರ ಮುಂತಾದವರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next