ವಿಧಾನ ಪರಿಷತ್ತು: ಸಬ್ ರಿಜಿಸ್ಟ್ರಾರ್ ಕಚೇರಿಗೆ ಆಸ್ತಿ ನೋಂದಣಿಗೆ ಬರುವ ಸಾರ್ವಜನಿಕರಿಂದ ಸ್ಟಾಂಪ್ ವೆಂಡರ್ಸ್ ನಿಗದಿಪಡಿಸಿದ ಶುಲ್ಕಕಿಂತ ಹೆಚ್ಚು ಹಣ ವಸೂಲಿ ಮಾಡಿದರೆ ಅಂತವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಎಚ್ಚರಿಕೆ ನೀಡಿದರು.
ಪರಿಷತ್ತಿನಲ್ಲಿ ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ- 2024 ಮಂಡಿಸಿ ಅವರು ಮಾತನಾಡಿದರು.
ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್ ಹಲವು ಸದಸ್ಯರು ನೋಂದಣಿ ವಿಧೇಯಕದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಹಲವು ಸಲಹೆಗಳನ್ನು ನೀಡಿದ್ದಾರೆ. ನೋಂದಣಿ ಇಲಾಖೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಸ್ಯಾಂಪ್ ವೆಂಡರ್ಸ್‌ಗಳು, ವಕೀಲರು ಉಪನೋಂದಣಾಧಿಕಾರಿಗಳ ಹೆಸರು ಹೇಳಿಕೊಂಡು ನಿಗದಿತ ಶುಲ್ಕಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಬಗ್ಗೆ ಇಲಾಖೆಗೆ ಸಾಕಷ್ಟು ದೂರು ಬಂದಿವೆ ಎಂದರು.
ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಸಹಾಯ ವಾಣಿ ಯೊಂದನ್ನು ಆರಂಭಿಸಿದೆ. ಉಪ ನೋಂದಣಿ ಅಧಿಕಾರಿಗಳ ಹೆಸರು ಹೇಳಿಕೊಂಡು ಹೆಚ್ಚು ಹಣ ವಸೂಲಿ ಮಾಡಿದ ಸ್ಟಾಂಪ್ ವೆಂಡರ್ ವಿರುದ್ದ ಸಾಕ್ಷ್ಯ ಸಹಿತ
ಸಹಾಯವಾಣಿಗೆ ಸಂಖ್ಯೆ 080-68265316 ಕರೆ ಮಾಡಿ ದೂರು ದಾಖಲಿಸಿದರೆ ಅಂತವರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ತಿಳಿಸಿದರು. ಒಂದು ವೇಳೆ ಆರೋಪ ರುಜುವಾತಾದರೆ ಸ್ಟಾಂಪ್ ವೆಂಡರ್ ಅವರ ಪರವಾನಗಿ ರದ್ದು ಮಾಡುವುದಾಗಿ ತಿಳಿಸಿದರು.