ಕಾರವಾರ: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ ವಿವಿಧ ಇಲಾಖೆಗಳ ಮೂಲಕ ನಿಯೋಜಿಸಿರುವ ಯೋಜನೆಗಳ ಅನುಷ್ಠಾನಗೊಳಿಸುವಲ್ಲಿ ವಿಳಂಬ ತೋರುವ ಇಲಾಖೆ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಶಿಸ್ತುಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ಹರೀಶ್‌ಕುಮಾರ್ ಕೆ. ತಿಳಿಸಿದ್ದಾರೆ.
ಜಿಲ್ಲಾ ಮಟ್ಟದ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಗಳ ಅನುಷ್ಠಾನ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಅವರು, ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಈ ಯೋಜನೆಗಳು ಸಕಾಲಕ್ಕೆ ಸಮರ್ಪಕವಾಗಿ ಸರಿಯಾದ ಫಲಾನುಭವಿಗಳನ್ನು ತಲುಪಬೇಕು. ಯೋಜನೆ ಅನುಷ್ಠಾನದಲ್ಲಿ ವಿಳಂಬ ತೋರಿದರೆ ಅಥವಾ ಇನ್ನಾವುದೇ ಲೋಪ ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ಕಾರ್ಯಕ್ರಮಗಳ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಗೆ ಇನ್ನು ಹಲವಾರು ಇಲಾಖೆಗಳು ಸೂಕ್ತ ಮಾಹಿತಿಯೊಂದಿಗೆ ಬರಬೇಕು. ಎಲ್ಲ ಇಲಾಖೆಗಳು, ನಿಗಮ, ಮಂಡಳಿ, ನಗರ ಸ್ಥಳೀಯ ಸಂಸ್ಥೆಗಳು, ಪಂಚಾಯತ್ ರಾಜ್ ಇಲಾಖೆಗಳ ಸಂಸ್ಥೆಗಳೂ ಸಭೆಯಲ್ಲಿ ಕಡ್ಡಾಯವಾಗಿ ಇರಬೇಕು ಮತ್ತು ಪ್ರಗತಿ ಮಾಹಿತಿಯನ್ನು ನೀಡಬೇಕು ಎಂದ ಅವರು, ಮುಂದಿನ ಸಭೆಯಲ್ಲಿ ಯಾವುದೇ ವಿಳಂಬವಿಲ್ಲದಂತೆ ಪ್ರಗತಿ ಸಾಧಿಸಿ ವರದಿ ಸಲ್ಲಿಸಬೇಕು ಹಾಗೂ ಕಡ್ಡಾಯವಾಗಿ ಸಭೆಯಲ್ಲಿ ಭಾಗವಹಿಸಬೇಕು ಎಂದು ಅವರು ತಿಳಿಸಿದರು.
ಸಾಮಾಜಿಕ ನ್ಯಾಯದ ತಳಹದಿಯಲ್ಲಿ ಫಲಾನುಭವಿಗಳ ಆಯ್ಕೆ ಆಗಬೇಕು ಎಂದ ಅವರು, ನಿಯೋಜಿತ ಅನುದಾನ ಸದ್ಬಳಕೆ ಸಕಾಲದಲ್ಲಿ ಹಾಗೂ ಸರಿಯಾದ ಫಲಾನುಭವಿ ಆಯ್ಕೆ ಮಾಡುವುದು ಇಲಾಖೆ ಅಧಿಕಾರಿಗಳ ಕರ್ತವ್ಯ. ಇದರಲ್ಲಿ ಒಂದಂಶವೂ ಕೊರತೆಯಾದರೆ ಕಾಯ್ದೆ ಪ್ರಕಾರ ಕರ್ತವ್ಯಲೋಪದಡಿ ಆ ಇಲಾಖೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪುರುಷೋತ್ತಮ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅಜ್ಜಪ್ಪ ಸೊಗಲದ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.