ಕೆ.ಆರ್.ಪೇಟೆ: ಪಟ್ಟಣದ ಯಾವುದೇ ಭಾಗದಲ್ಲಿ ರಸ್ತೆ, ಚರಂಡಿ ಸೇರಿದಂತೆ ಯಾವುದೇ ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಾಣ ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಪುರಸಭಾ ಮುಖ್ಯಾಧಿಕಾರಿ ಸತೀಶ್‌ಕುಮಾರ್ ಎಚ್ಚರಿಕೆ ನೀಡಿದರು.
ಅವರು ಪಟ್ಟಣದ ಹಳೇ ಕಿಕ್ಕೇರಿ ರಸ್ತೆಯಲ್ಲಿ ಡಾ.ಅರವಿಂದ್ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಾಣ ಮಾಡುತ್ತಿರುವುದನ್ನು ತಡೆದು ಮಾತನಾಡಿದರು. ಪಟ್ಟಣದಲ್ಲಿ ಈಗಾಗಲೇ ರಸ್ತೆಗಳು ಕಿರಿದಾಗಿದ್ದು ವಾಹನ ಸವಾರರು ತಮ್ಮ ವಾಹನಗಳನ್ನು ಚಲಾಯಿಸಲು ತೊಂದರೆ
ಅನುಭವಿಸುತ್ತಿದ್ದಾರೆ. ಸಾರ್ವಜನಿಕರು ಜೀವ ಭಯದಲ್ಲಿಯೇ ಓಡಾಡುವಂತಾಗಿದೆ. ಚರಂಡಿಗಳನ್ನು ಮುಚ್ಚಿರುವುದರಿಂದ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಇದಕ್ಕೆ ಪ್ರಮುಖ ಕಾರಣ ಜನರ ದುರಾಸೆ ಜನರು ಚರಂಡಿ ಮತ್ತು ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಾಣ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದೆ.
ಈಗಾಗಲೇ ಪಟ್ಟಣದ ಹಳೆ ಕಿಕ್ಕೇರಿ ರಸ್ತೆಯಲ್ಲಿ ವಾಹನಗಳು ಓಡಾಡಲು ತೊಂದರೆಯಾಗಿದ್ದು, ರಸ್ತೆಯಲ್ಲಿ ಏಕಮುಖ ಸಂಚಾರ ಮಾಡಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿದೆ. ಹೀಗಿದ್ದರೂ ಡಾ ಅರವಿಂದ್ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಾಣ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿರುವುದರಿಂದ ಸಿಬ್ಬಂದಿಯೊಂದಿಗೆ ಹೋಗಿ ರಸ್ತೆಯಲ್ಲಿ ತೆಗೆದಿದ್ದ ಗುಂಡಿಯನ್ನು ಮುಚ್ಚಿಸಿ ಕಟ್ಟಡ ಮಾಲೀಕರಿಗೆ ಎಚ್ಚರಿಕೆ ನೀಡಿದ್ದೇವೆ ಎಂದರು.
ಇದರ ಜತೆಗೆ ರಾಜಕಾಲುವೆ ಒತ್ತುವರಿ ಮಾಡಿರುವ ಬಗ್ಗೆ ದೂರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ನಮ್ಮ ಸಿಬ್ಬಂದಿ ರಾಜಕಾಲುವೆಯನ್ನು ಅಳತೆಮಾಡಿಸಿ ರಾಜಕಾಲುವೆಯನ್ನು ಒತ್ತುವರಿ ಮಾಡಿ ನಿರ್ಮಾಣ ಮಾಡಿರುವ ಕಟ್ಟಡಗಳನ್ನು ತೆರವುಗೊಳಿಸಲು ಕ್ರಮ ವಹಿಸುತ್ತೇವೆ ಎಂದು ತಿಳಿಸಿದರು. ನರಸಿಂಹಶೆಟ್ಟಿ ಮತ್ತು ಪುರಸಭಾ ಸಿಬ್ಬಂದಿ ಹಾಜರಿದ್ದರು.