ಅರಸೀಕೆರೆ: ನಗರದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಕ್ಕೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಹಾಗೂ ಹಾಸನದ ನೋಡಲ್ ಅಧಿಕಾರಿ ದೇವರಾಜ್ ದಿಢೀರ್ ಭೇಟಿ ನೀಡಿ ಅಲ್ಲಿನ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು. ವಿದ್ಯಾರ್ಥಿಗಳ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಇಲ್ಲದಿದ್ದರೆ ಶಿಸ್ತುಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ನಿಲಯ ಪಾಲಕರಿಗೆ ಎಚ್ಚರಿಕೆ ನೀಡಿದರು.
ಹಾಸ್ಟೆಲ್ ಗುಣಮಟ್ಟದ ಕೊರತೆ: ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳು ಉತ್ತಮ ಗುಣಮಟ್ಟದಿಂದ ನಡೆಯಬೇಕು. ಹಿಂದುಳಿದ ವರ್ಗಗಳ ಮಕ್ಕಳ ಸ್ಥಿತಿಗತಿಗಳು ಚೆನ್ನಾಗಿರಲು ಹಾಗೂ ಶೈಕ್ಷಣಿಕವಾಗಿ ಮೇಲೆಬರಲು ಎಲ್ಲರು ಶ್ರಮಿಸುವ ಕಾರ್ಯ ಮಾಡಬೇಕಿದೆ. ಆದರೆ ಕೆಲವು ಹಾಸ್ಟೆಲ್‌ಗಳಲ್ಲಿ ಗುಣಮಟ್ಟದ ಕೊರತೆ ಇರುವ ದೂರು ಬಂದಿದ್ದು ನಾವೇ ಹಾಸ್ಟೆಲ್‌ಗಳಿಗೆ ವೀಕ್ಷಿಸಿ ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ. ಸಮಾಜ ಕಲ್ಯಾಣ ಇಲಾಖೆಗೆ ಸರ್ಕಾರ ಹೆಚ್ಚು ಹಣವನ್ನು ಬಿಡುಗಡೆ ಮಾಡಿದ್ದು ಶೌಚಾಲಯ, ನೀರಿನ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.
ಶಿಸ್ತಿನಿಂದ ಇರಲು ಸೂಚನೆ: ಮಹನೀಯರ ಭಾವಚಿತ್ರಗಳನ್ನು ಎಲ್ಲೆಂದರಲ್ಲಿ ಇಟ್ಟಿರುವುದು ಗಮನಿಸಿದ್ದು ಗೌರವ ತರುವ ಹಾಗೆ ನಡೆದು ಕೊಂಡು ಎಲ್ಲವನ್ನೂ ಸರಿಪಡಿಸಲು ಅಧಿಕಾರಿ ದೇವರಾಜ್ ಸೂಚಿಸಿದರು. ದಿನನಿತ್ಯ ಬಳಕೆಯ ಆಹಾರ ಪದಾರ್ಥಗಳನ್ನು ಸರಿಯಾದ ಜಾಗದಲ್ಲಿ ಸಂಗ್ರಹಿಸಿಡುವ ಬಗ್ಗೆ ತಿಳಿಹೇಳಿದ್ದು, ಯಾವುದೇ ವಿದ್ಯಾರ್ಥಿಗಳಿಂದ ದೂರು ಬಂದಿರುವುದಿಲ್ಲ. ಹೆಣ್ಣು ಮಕ್ಕಳ ಹಾಸ್ಟೆಲ್ ಗಳು ಉತ್ತಮ ಸ್ಥಿತಿಯಲ್ಲಿದ್ದು ಇದನ್ನೇ ಕಾಪಾಡಿ ಕೊಂಡು ಹೋಗುವಂತೆ ತಿಳಿಸಲಾಗಿದೆ ಎಂದರು.
ಅಧಿಕಾರಿಗಳೊಂದಿಗೆ ಭೇಟಿ: ಹಾಸ್ಟೆಲ್‌ಗಳ ಸುಧಾರಣೆ ದೃಷ್ಟಿಯಿಂದ ಎಲ್ಲಾ ತಾಲೂಕು ಅಧಿ ಕಾರಿಗಳು, ಜಿಲ್ಲೆಯ ಅಧಿಕಾರಿಗಳ ಜೊತೆಯಲ್ಲಿ ಹಾಸ್ಟೆಲ್‌ಗಳಿಗೆ ಭೇಟಿ ನೀಡುತ್ತಿದ್ದು, ಸಂಪೂರ್ಣ ವರದಿಗಳನ್ನು ಪಡೆದುಕೊಳ್ಳಲಾಗುವುದು. ಅಲ್ಲದೇ ಅಧಿಕಾರಿಗಳ ಸಭೆ ಕರೆದು ಸಲಹೆ ಸೂಚನೆಗಳನ್ನು ನೀಡಲಾಗುವುದು ಎಂದರು.
ದಲಿತ ಮುಖಂಡರಿಂದ ಮನವಿ: ದಲಿತ ಮುಖಂಡ ಎ.ಪಿ. ಚಂದ್ರಯ್ಯ ನಗರದಲ್ಲಿ ನಡೆ ಯುತ್ತಿರುವ ಅಂಬೇಡ್ಕರ್ ಭವನ ಪೂರ್ಣ ಗೊಳ್ಳದಿರುವ ಬಗ್ಗೆ ದೂರು ನೀಡಿದರು.ಇದಕ್ಕೆ ಉತ್ತರಿಸಿದ ಅವರು, ಭವನ ನಿರ್ಮಾಣ ಕುಂಟುತ್ತ ಸಾಗುತ್ತಿದ್ದು, ಕಾಮಗಾರಿ ಶೀಘ್ರ ಪೂರ್ಣಗೊಸಲು ಕ್ರಮಕೈಗೊಳ್ಳಲಾಗುವುದು ಎಂದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶ್ರೀಧರ್, ಸಹಾಯಕ ನಿರ್ದೇಶಕ ಗೋಪಾಲಪ್ಪ, ಪರಶಿವಮೂರ್ತಿ, ಹಾಸ್ಟೆಲ್ ವಾರ್ಡನ್ ಎಚ್.ಎಂ. ಗಂಗಶ್ರೀ ಉಪಸ್ಥಿತರಿದ್ದರು.