ಚಾಮರಾಜನಗರ: ಅಂಗಡಿ, ಹೋಟೆಲ್, ಉದ್ದಿಮೆಗಳ ಸ್ಥಳಗಳಿಗೆ ಭೇಟಿ ಕೊಟ್ಟು, ವಾಗಿ ಪರಿಶೀಲನೆ ನಡೆಸಿ, ಬಾಲಕಾರ್ಮಿಕರನ್ನು ನೇಮಿಸಿಕೊಂಡಿದ್ದಲ್ಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲೆಯನ್ನು ಬಾಲ ಕಾರ್ಮಿಕರು ಕಿಶೋರಾವಸ್ಥೆ ಕಾರ್ಮಿಕರ ಮುಕ್ತ ಜಿಲ್ಲೆಯನ್ನಾಗಿ ಘೋಷಿಸಲು ಕ್ರಮ ಕೈಗೊಳ್ಳುವ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ತಪಾಸಣೆ ಕಾರ್ಯವನ್ನು ಚುರುಕುಗೊಳಿಸಿ, ಬಾಲ್ಯಾವಸ್ಥೆಯಲ್ಲಿ ದುಡಿಯುತ್ತಿರುವವರನ್ನು ಪತ್ತೆ ಹಚ್ಚಬೇಕು. ಪುನರ್ವಸತಿಗೊಳಿಸಲು ರಚಿಸಲಾಗಿರುವ ತಾಲೂಕು ತಂಡಗಳು ಸಕ್ರಿಯವಾಗಿರಬೇಕು, ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ ಕಾರ್ಮಿಕ ಕಾಯ್ದೆ ಅನುಷ್ಠಾನ ಪರಿಣಾಮಕಾರಿಯಾಗಿ ನಡೆಯಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಬಾಲ ಕಾರ್ಮಿಕ ಮುಕ್ತ ವಲಯವನ್ನಾಗಿ ಮಾಡಲು ತಾಲೂಕು ಮಟ್ಟದಲ್ಲಿ ರಚಿಸಿರುವ ತಂಡಗಳ ಸದಸ್ಯರಿಗೆ, ಹೋಬಳಿವಾರು ತಂಡದ ಸದಸ್ಯರಿಗೆ ಹಾಗೂ ಗ್ರಾಪಂಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಅರಿವು ಮತ್ತು ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸುವಂತೆ ಅವರು ಸೂಚನೆ ನೀಡಿದರು.
ಬಾಲ ಕಾರ್ಮಿಕರನ್ನು ಶಾಲೆಗೆ ತನ್ನಿ: ಶಾಲೆ ತೊರೆದು ಕೆಲಸ ಮಾಡುತ್ತಿರುವ ಮಕ್ಕಳನ್ನು ಗುರುತಿಸಬೇಕು. ಮಕ್ಕಳನ್ನು ದುಡಿಮೆಗೆ ಹಚ್ಚದೇ ಶಾಲೆಗೆ ಸೇರ್ಪಡೆ ಮಾಡಲು ಕ್ರಮ ವಹಿಸಬೇಕು. ವಲಸೆ ಕಾರ್ಮಿಕರು ದುಡಿಯಲು ಹೋಗುವಾಗ ಮಕ್ಕಳನ್ನು ಶಾಲೆಗೆ ಕಳುಹಿಸದೇ ಅವರ ವಲಸೆ ಪ್ರದೇಶಕ್ಕೆ ಕರೆದ್ದೊಯುತ್ತಿರುವುದರ ಬಗ್ಗೆ ಪರಿಶೀಲಿಸುವಂತೆ ಕಾವೇರಿ ಅವರು ನಿರ್ದೇಶನ ನೀಡಿದರು.
ಗ್ರಾಮಗಳಲ್ಲಿ ಅತೀ ಹೆಚ್ಚಿನ ಗಮನವಹಿಸಿ ಅರಿವು ಮೂಡಿಸಿ ಮಕ್ಕಳನ್ನು ಶಾಲೆಗೆ ಸೇರಿಸುವ ಕೆಲಸ ಮಾಡಬೇಕು. ಯಾರೂ ಸಹ ಬಾಲ ಕಾರ್ಮಿಕ ಪದ್ಧತಿಗೆ ಬಲಿಯಾಗದಂತೆ ಪ್ರತಿಯೊಬ್ಬರಿಗೂ ಉತ್ತಮ ವಿದ್ಯಾಭ್ಯಾಸ ದೊರಕುವಂತೆ ಮಾಡಬೇಕು ಎಂದು ಕಾವೇರಿ ತಿಳಿಸಿದರು. ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಚ್. ನಾರಾಯಣ್‌ರಾವ್ ಮಾತನಾಡಿ, ಶಾಲೆ ಬಿಟ್ಟು ಮಕ್ಕಳು ವ್ಯಾಪಾರ ಇನ್ನಿತರ ಚಟುವಟಿಕೆಗಳನ್ನು ಮಾಡುತ್ತಿರುವ ಪ್ರಕರಣಗಳು ಯಾವುದೇ ಭಾಗದಲ್ಲಿ ಕಂಡುಬಂದರೂ ತಕ್ಷಣ ಕ್ರಮ ತೆಗೆದುಕೊಳ್ಳಬೇಕು.
ಮರಳಿ ಶಾಲೆಗೆ ಸೇರ್ಪಡೆ ಮಾಡಲು ಮುಂದಾಗಬೇಕು. ಶಾಲೆ ತೊರೆದ ಹೆಣ್ಣು ಮಕ್ಕಳ ಮಾಹಿತಿಯನ್ನು ಶಿಕ್ಷಣ ಇಲಾಖೆ ಪಡೆಯಬೇಕು. ಬಾಲ್ಯವಿವಾಹದಂಥ ಪದ್ಧತಿ ಕಂಡುಬಂದರೆ ಅದನ್ನು ತಡೆಗಟ್ಟುವ ಕೆಲಸವಾಗಬೇಕು ಎಂದು ಹೇಳಿದರು. ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣನವರ, ಕಾರ್ಮಿಕ ಅಧಿಕಾರಿ ಮಂಜುಳಾ, ಹಿರಿಯ ಕಾರ್ಮಿಕ ನಿರೀಕ್ಷಕಿ ಗೀತಾ, ಯೋಜನಾ ನಿರ್ದೇಶಕ ಎಂ. ಮಹೇಶ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.