‘ನಮಗೆ ಆ್ಯಕ್ಷನ್ ಕೂಡಿಬರುವಷ್ಟು ಬೇರೆ ಯಾವುದೂ ಬರೋದಿಲ್ಲ …’
-ಹೀಗೆ ಹೇಳಿ ನಕ್ಕರು ನಿರ್ಮಾಪಕ ರಾಮು. ‘ಕೋಟಿ ರಾಮು’ ಎಂದೇ ಚಿತ್ರರಂಗದಲ್ಲಿ ಕರೆಸಿಕೊಳ್ಳುವ ರಾಮು ಅವರು ಇಲ್ಲಿವರೆಗೆ ತಮ್ಮ ಬ್ಯಾನರ್‌ನಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಔಟ್ ಅಂಡ್ ಔಟ್ ಆ್ಯಕ್ಷನ್ ಸಿನಿಮಾಗಳಿಂದ ಹಿಡಿದು, ಫ್ಯಾಮಿಲಿ ಡ್ರಾಮಾ, ಲವ್‌ಸ್ಟೋರಿ … ಹೀಗೆ ಬೇರೆ ಬೇರೆ ಜಾನರ್‌ನ ಸಿನಿಮಾಗಳನ್ನು ನೀಡಿದರೂ, ಅವರ ಕೈ ಹಿಡಿದಿರೋದು ಮಾತ್ರ ಆ್ಯಕ್ಷನ್ ಸಿನಿಮಾಗಳು. ಅದೇ ಕಾರಣದಿಂದ ನಿರ್ಮಾಪಕ ರಾಮು ಈ ರೀತಿ ಹೇಳಿದ್ದು. ‘ನಮ್ಮ ಬ್ಯಾನರ್‌ನಲ್ಲಿ ಆ್ಯಕ್ಷನ್ ಜೊತೆಗೆ ಬೇರೆ ಬೇರೆ ಜಾನರ್‌ನ ಒಳ್ಳೆಯ ಸಿನಿಮಾಗಳನ್ನು ಮಾಡಿದರೂ ಅದು ಅಷ್ಟಾಗಿ ನಮ್ಮ ಕೈ ಹಿಡಿಯಲಿಲ್ಲ. ನಮಗೆ ಆ್ಯಕ್ಷನ್ ಸಿನಿಮಾಗಳೇ ಕೂಡಿ ಬರೋದು’ ಎಂದು. ರಾಮು ಅವರು ಹೀಗೆ ಹೇಳಲು ಕಾರಣ, ‘ಅರ್ಜುನ್ ಗೌಡ’. ಪ್ರಜ್ವಲ್ ದೇವರಾಜ್ ನಾಯಕರಾಗಿರುವ ‘ಅರ್ಜುನ್ ಗೌಡ’ ಚಿತ್ರ ರಾಮು ನಿರ್ಮಾಣದಲ್ಲಿ ತಯಾರಾಗುತ್ತಿದೆ. ಇದು ಔಟ್ ಅಂಡ್ ಔಟ್ ಆ್ಯಕ್ಷನ್ ಸಿನಿಮಾ. ಈ ಚಿತ್ರ ತಮ್ಮ ಕೈ ಹಿಡಿಯುತ್ತದೆ ಎಂಬ ನಂಬಿಕೆ ರಾಮು ಅವರಿಗಿದೆ.
ಈ ಹಿಂದೆ ‘ದೇವ್ರಾಣೆ’, ’90’ ಚಿತ್ರಗಳನ್ನು ನಿರ್ದೇಶಿಸಿರುವ ಲಕ್ಕಿ ಶಂಕರ್ ಈ ಚಿತ್ರದ ನಿರ್ದೇಶಕರು. ಈ ಹಿಂದಿನ ತಮ್ಮ ಕಾಮಿಡಿ ಜಾನರ್‌ನಿಂದ ಹೊರಬಂದಿರುವ ಶಂಕರ್, ಈ ಬಾರಿ ಆ್ಯಕ್ಷನ್ ಮೊರೆ ಹೋಗಿದ್ದಾರೆ. ಪ್ರಜ್ವಲ್ ಅವರು ಈ ಹಿಂದೆ ಕಾಣಿಸಿಕೊಳ್ಳದ ಗೆಟಪ್‌ನಲ್ಲಿ ‘ಅರ್ಜುನ್ ಗೌಡ’ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಚಿತ್ರದ ಬಗ್ಗೆ ಮಾತನಾಡುವ ಲಕ್ಕಿ ಶಂಕರ್, ‘ಇದು ಹೈವೋಲೆrೕಜ್ ಆ್ಯಕ್ಷನ್ ಸಿನಿಮಾ. ಹಾಗಂತ ರೆಗ್ಯುಲರ್ ಪ್ಯಾಟರ್ನ್ನಲ್ಲಿ ಚಿತ್ರ ಮಾಡಿಲ್ಲ. ಕಥೆಯಿಂದ ಹಿಡಿದು ಆ್ಯಕ್ಷನ್‌ವರೆಗೂ ಬೇರೆ ತರಹ ಇರುತ್ತದೆ. ಚಿತ್ರದ ಒಂದಷ್ಟು ದೃಶ್ಯ ನೋಡಿರುವ ನಿರ್ಮಾಪಕರು ಖುಷಿಯಾಗಿದ್ದಾರೆ. ಪ್ರಜ್ವಲ್ ಅವರು ಈ ಚಿತ್ರದಲ್ಲಿ ಮೂರು ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ’ ಎಂಬುದು ಶಂಕರ್ ಮಾತು. ‘ಅರ್ಜುನ್ ಗೌಡ’ ಅನೌನ್ಸ್ ಆದ ಸಮಯದಲ್ಲಿ ಇದು ತೆಲುಗಿನ ‘ಅರ್ಜುನ್ ರೆಡ್ಡಿ’ ಚಿತ್ರದ ರೀಮೇಕ್ ಎಂಬ ಮಾತು ಕೇಳಿಬಂದಿತ್ತು. ಈ ಬಗ್ಗೆ ಸ್ಪಷ್ಟನೆ ಕೊಡುವ ಶಂಕರ್, ‘ಅರ್ಜುನ್ ರೆಡ್ಡಿಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇದು ಸ್ವಮೇಕ್ ಚಿತ್ರ. ನೈಜ ಘಟನೆಗಳಿಂದ ಸ್ಫೂರ್ತಿ ಪಡೆದು ಕಥೆ ಮಾಡಿದ್ದೇವೆ. ಟೈಟಲ್ನಲ್ಲಿ ಫೋರ್ಸ್ ಇರಲಿ ಎಂಬ ಕಾರಣಕ್ಕೆ ‘ಅರ್ಜುನ್ ಗೌಡ’ ಎಂದಿಟ್ಟಿದ್ದೇವೆ’ ಎನ್ನುತ್ತಾರೆ.
ಚಿತ್ರದಲ್ಲಿ ನಟಿಸಿರುವ ಪ್ರಜ್ವಲ್ ದೇವರಾಜ್ ಅವರಿಗೆ ಒಂದೊಳ್ಳೆಯ ಬ್ಯಾನರ್‌ನಲ್ಲಿ ಮತ್ತೆ ನಟಿಸುತ್ತಿರುವ ಖುಷಿ ಇದೆ. ಈ ಹಿಂದೆ ರಾಮು ಬ್ಯಾನರ್‌ನಲ್ಲಿ ನಟಿಸಿದ ಸಿನಿಮಾ ಹಿಟ್ ಆಗಿದ್ದು, ಈಗ ‘ಅರ್ಜುನ್ ಗೌಡ’ ಕೂಡಾ ಅದೇ ಹಾದಿಯಲ್ಲಿ ಸಾಗುತ್ತದೆ ಎಂಬ ವಿಶ್ವಾಸವಿದೆಯಂತೆ. ‘ರಾಮು ಅವರ ಬ್ಯಾನರ್ ಎಂದರೆ ಅದು ಹೋಂಬ್ಯಾನರ್ ಇದ್ದಂತೆ. ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಕಿಲ್ಲ’ ಎನ್ನುವ ಪ್ರಜ್ವಲ್ಗೆ ‘ಅರ್ಜುನ್ ಗೌಡ’ ಮೇಲೆ ವಿಶ್ವಾಸವಿದೆ. ಇಲ್ಲಿ ಅವರು ರಫ್ ಅಂಡ್ ಟಫ್ ಪಾತ್ರ ಮಾಡಿದ್ದಾರಂತೆ. ಪ್ರಿಯಾಂಕಾ ತಿಮ್ಮೇಶ್ ಈ ಚಿತ್ರದ ನಾಯಕಿ. ನಿರ್ದೇಶಕರು ಆಡಿಷನ್‌ಗೆ ಕರೆದು ಆಯ್ಕೆ ಮಾಡುವ ವೇಳೆ ಸ್ವಲ್ಪ ದಪ್ಪಗಿದ್ದ ಪ್ರಿಯಾಂಕಾ, ‘ನನಗಿಂತ ಹೈಟಾಗಿರುವ, ಇನ್ನೂ ಸುಂದರವಾಗಿರುವ ಹುಡುಗಿರಿದ್ದಾರೆ. ನನ್ನನ್ನೇ ಯಾಕಾಗಿ ಆಯ್ಕೆ ಮಾಡ್ತಿದ್ದೀರಿ’ ಎಂದು ಕೇಳಿದರಂತೆ. ಅದಕ್ಕೆ ನಿರ್ದೇಶಕರು, ‘ಪಾತ್ರಕ್ಕೆ ನೀವೇ ಚೆನ್ನಾಗಿ ಹೊಂದುತ್ತೀರಿ’ ಎಂದರಂತೆ. ಚಿತ್ರದಲ್ಲಿ ‘ಸ್ಪರ್ಶ’ ರೇಖಾ ಚಾನೆಲ್ವೊಂದರ ಮಾಲೀಕರಾಗಿ ಕಾಣಿಸಿಕೊಂಡಿದ್ದು, ಪ್ರಜ್ವಲ್ ಅವರ ಮಗನ ಪಾತ್ರ ಮಾಡಿದ್ದಾರಂತೆ. ಚಿತ್ರಕ್ಕೆ ಜೈ ಆನಂದ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನವಿದೆ. ಈಗಗಾಲೇ 60ಕ್ಕೂ ಹೆಚ್ಚು ದಿನಗಳ ಚಿತ್ರೀಕರಣವಾಗಿದ್ದು, ಇನ್ನು 15 ದಿನಗಳ ಚಿತ್ರೀಕರಣ ಬಾಕಿ ಇದೆಯಂತೆ. ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ.