Advertisement

ಸಂಚಾರ ನಿಯಮ ಉಲ್ಲಂಘಿಸಿದರೆ ಕ್ರಮ

04:16 PM Aug 14, 2019 | Team Udayavani |

ಚನ್ನಪಟ್ಟಣ: ಸಂಚಾರ ನಿಯಮಗಳ ಉಲ್ಲಂಘನೆಗೆ ಕಡಿವಾಣ ಹಾಕಲು ಮುಂದಾಗಿರುವ ಸಂಚಾರ ಠಾಣೆ ಪೊಲೀಸರು, ಆ.15ರಿಂದ ವಾಹನ ಸವಾರರು ಸಂಚಾರ ನಿಯಮಗಳ ಪಾಲನೆ ಮಾಡುವ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

Advertisement

ನಿಯಮಗಳ ಉಲ್ಲಂಘನೆಯಿಂದಾಗಿ ಬೆಂಗಳೂರು- ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ 275 ಸೇರಿದಂತೆ ರಾಜ್ಯ ಹೆದ್ದಾರಿಗಳಲ್ಲಿ ಸಾಕಷ್ಟು ಅಪಘಾತಗಳು ಪ್ರತಿದಿನ ಸಂಭವಿಸುತ್ತಿದ್ದು, ಸಾವು ನೋವು ಹೆಚ್ಚಾಗುತ್ತಿವೆ. ಬಹುತೇಕ ಅಪಘಾತಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಎಲ್ಲ ಬಗೆಯ ವಾಹನ ಸವಾರರಿಗೂ ಈಗಾಗಲೇ ತಿಳಿವಳಿಕೆ ನೀಡಿ, ಕಡ್ಡಾಯ ಅನುಷ್ಠಾನಕ್ಕೆ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.

ವಾಹನ ಸವಾರರಿಗೆ ಎಚ್ಚರಿಕೆ: ಹೆಲ್ಮೆಟ್, ಸೀಟ್ ಬೆಲ್r ಧರಿಸದೇ ಚಾಲನೆ, ಮಿತಿಮೀರಿದ ವೇಗ, ಅಡ್ಡಾದಿಡ್ಡಿ ಚಾಲನೆ, ಸಿಗ್ನಲ್ಜಂಪ್‌, ಎಲ್ಲೆಂದರಲ್ಲಿ ವಾಹನ ನಿಲುಗಡೆ, ದಾಖಲೆಗಳಿಲ್ಲದೇ ವಾಹನ ಚಾಲನೆ, ವಾಹನಗಳಿಗೆ ವಿಮೆ ಇಲ್ಲದೆ ಚಾಲನೆ ಹೀಗೆ ಎಲ್ಲ ಬಗೆಯ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸುವ ಜತೆಗೆ, ಇನ್ನೊಮ್ಮೆ ಉಲ್ಲಂಘನೆ ಮಾಡಿದರೆ ಪರವಾನಗಿ ರದ್ದುಪಡಿಸುವ ಎಚ್ಚರಿಕೆ ನೀಡಲು ಪೊಲೀಸರು ಮುಂದಾಗಲಿದ್ದಾರೆ.

ಸಿಸಿ ಕ್ಯಾಮರಾಗಳ ಅಳವಡಿಕೆ: ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಹಿನ್ನಲೆಯಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯ ಪಟ್ಟಣ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪ್ರಮುಖ ಸಿಗ್ನಲ್ಗಳಲ್ಲಿ ಸಿಸಿ ಟಿವಿ ಕಣ್ಗಾವಲು ವಾಹನ ಸವಾರರ ನಿಯಮ ಉಲ್ಲಂಘನೆ ಸೆರೆ ಹಿಡಿಯಲು ಸಜ್ಜಾಗಿವೆ. ಕೆಂಗಲ್, ಶೇರೂ ಹೋಟೆಲ್, ಸಾತನೂರು ವೃತ್ತ, ಪೊಲೀಸ್‌ ಠಾಣೆ ವೃತ್ತ, 8ನೇ ಕ್ರಾಸ್‌ಗಳಲ್ಲಿ ಹೈ ರೆಸಲ್ಯೂಷನ್‌ ಕ್ಯಾಮರಾಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ.

ಜತೆಗೆ ಇಂಟರ್‌ಸೆಪ್ಟರ್‌ಗಳು, ತಪಾಸಣೆ ತಂಡ ಸಹ ಸವಾರರ ಮೇಲೆ ಹದ್ದಿನ ಕಣ್ಣಿಡಲಿದೆ. ಸಂಚಾರ ಉಲ್ಲಂಘನೆ ಮಾಡಿ, ತಪ್ಪಿಸಿಕೊಂಡರೂ ಪ್ರಕರಣ ಆನ್‌ಲೈನ್‌ನಲ್ಲಿ ದಾಖಲಾಗಿ, ನೇರ ಮನೆಗೆ ನೋಟಿಸ್‌ ಬರಲಿದೆ. ವಾಹನದ ಆರ್‌.ಸಿ. ದಾಖಲಾತಿಯೊಂದಿಗೆ ಸೇರ್ಪಡೆಗೊಳ್ಳಲಿದೆ. ಮುಂದೆ ಮತ್ತೆ ಉಲ್ಲಂಘನೆ ಮಾಡಿ ಸಿಕ್ಕಿಬಿದ್ದಾಗ ಹಳೆಯ ಪ್ರಕರಣ ಸೇರಿ ದಂಡ ಕಟ್ಟಬೇಕಿದೆ.

Advertisement

ಪಾರ್ಕಿಂಗ್‌ ಹಾವಳಿಗೂ ಕಡಿವಾಣ: ಪಟ್ಟಣದಲ್ಲಿ ಪ್ರಮುಖವಾಗಿ ಪಾರ್ಕಿಂಗ್‌ ಸಮಸ್ಯೆ ಯಥೇಚ್ಚವಾಗಿ ಕಾಡುತ್ತಿದೆ. ಎಂ.ಜಿ.ರಸ್ತೆ, ಜೆಸಿ ರಸ್ತೆ ಸೇರಿದಂತೆ ಬೆಂಗಳೂರು- ಮೈಸೂರು ಹೆದ್ದಾರಿ ಅಕ್ಕಪಕ್ಕದಲ್ಲಿ ಎಲ್ಲೆಂದರಲ್ಲಿ ಪಾರ್ಕಿಂಗ್‌ ಮಾಡಲಾಗುತ್ತಿದೆ. ಈಗಾಗಲೇ ಪ್ರಮುಖ ರಸ್ತೆಗಳಲ್ಲಿ ದಿನಗಳನ್ನು ನಿಗದಿಪಡಿಸಿ, ಏಕಮುಖ ಪಾರ್ಕಿಂಗ್‌ ಜಾರಿಯಲ್ಲಿದ್ದರೂ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಇದಕ್ಕೂ ಸಹ ಮುಂದಿನ ದಿನಗಳಲ್ಲಿ ಕಡಿವಾಣ ಬೀಳಲಿದೆ.

ಎಷ್ಟಿದೆ ದಂಡ?: ಹೆಲ್ಮೆಟ್ ಧರಿಸದೇ ಚಾಲನೆ ಮಾಡಿದರೆ 500 ರೂ., 2ನೇ ಬಾರಿಗೆ 1000 ರೂ., ಎದುರು ರಸ್ತೆಯಲ್ಲಿ ಚಾಲನೆ ಮಾಡಿದರೆ 500 ರೂ., 2ನೇ ಬಾರಿಗೆ 1000 ರೂ. ನೋ ಪಾರ್ಕಿಂಗ್‌ ಸ್ಥಳದಲ್ಲಿ ನಿಲುಗಡೆ ಮಾಡಿದರೆ 500 ರೂ., 2ನೇ ಬಾರಿಗೆ 1000 ರೂ. ಇವೆಲ್ಲವೂ ಮುಂದುವರಿದರೆ ಚಾಲನಾ ಪರವಾನಗಿ ರದ್ದುಪಡಿಸಲು ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗುತ್ತಿದೆ.

ಇನ್ನು ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರ ಸಾಗಣೆ, ಆಟೋಗಳಲ್ಲಿ ಶಾಲಾ ಮಕ್ಕಳನ್ನು ಕರೆದೊ ಯ್ಯುವುದು. ಆಟೋಗಳಲ್ಲಿ ಹೆಚ್ಚು ಪ್ರಯಾಣಿಕರನ್ನು ಹಾಕುವುದು, ಆಟೋ ಚಾಲಕರು ಸಮವಸ್ತ್ರ ಧರಿಸದಿ ರುವುದು. ಶಾಲಾ ವಾಹನಗಳ ಚಾಲಕರು ನಿಯಮ ಪಾಲಿಸದಿರುವುದು ಹೀಗೆ ಎಲ್ಲಾ ರೀತಿಯ ನಿಯಮ ಗಳನ್ನು ಪಾಲಿಸದಿದ್ದರೆ ದಂಡ ವಿಧಿಸುವ ಜತೆಗೆ ಪರವಾನಗಿ ರದ್ದುಪಡಿಸಲು ಆರ್‌ಟಿಒಗೆ ಶಿಫಾರಸ್ಸು ಮಾಡಲು ಪೊಲೀಸರು ಸಜ್ಜುಗೊಂಡಿದ್ದಾರೆ.

 

● ಎಂ.ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next