ಬೆಂಗಳೂರು: ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್‌ನ ಸಮಗ್ರ ಅಭಿವೃದ್ಧಿಗಾಗಿ ಹತ್ತು ದಿನಗಳೊಳಗಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸೋಮವಾರ ಯಶವಂತಪುರ ಬಳಿ ದೇವರಾಜ ಅರಸು ಟ್ರಕ್ ಟರ್ಮಿನಲ್‌ಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಟರ್ಮಿನಲ್ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳು ಮತ್ತು ಟರ್ಮಿನಲ್ ಅಧ್ಯಕ್ಷರೊಂದಿಗೆ ಚರ್ಚಿಸಿದರು.
ನಂತರ ಸುದ್ದಿಗಾರರ ಜತೆ ಮಾತನಾಡಿದ ಜಾರ್ಜ್, “ಟರ್ಮಿನಲ್ ಅಭಿವೃದ್ಧಿಗೆ ಪೂರಕವಾಗಿ 10 ದಿನಗಳೊಳಗೆ ಡಿಪಿಆರ್ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದರು. ಕೂಡಲೇ ಬೀದಿ ದೀಪಗಳ ನಿರ್ವಹಣೆ ಹಾಗೂ ಚರಂಡಿಗಳಲ್ಲಿನ ಹೂಳೆತ್ತಲು ಮುಂದಾಗಬೇಕು ಎಂದು ಸೂಚಿಸಲಾಗಿದೆ.
ನಗರೋತ್ಥಾನ ಯೋಜನೆ ಅಡಿಯಲ್ಲಿ ಟರ್ಮಿನಲ್ ಅಭಿವೃದ್ಧಿಪಡಿಸಲಾಗುವುದು. ಟರ್ಮಿನಲ್ ಸಂಪರ್ಕಿಸುವ ರಸ್ತೆಗಳಿಗೆ ಡಾಂಬರೀಕರಣ, ಪಾದಚಾರಿ ಮಾರ್ಗಗಳ ಅಭಿವೃದ್ಧಿ, ಲಾರಿಗಳ ನಿಲುಗಡೆ ವ್ಯವಸ್ಥೆ, ಸಿಬ್ಬಂದಿಗೆ ಮೂಲಸೌಕರ್ಯ ಒದಗಿಸಲು ನಗರೋತ್ಥಾನ ಯೋಜನೆಯಡಿಯಲ್ಲಿ 5 ಕೋಟಿ ರೂ. ವೆಚ್ಚ ಮಾಡಲಾಗುವುದು,’ ಎಂದು ಹೇಳಿದರು.
ಮೇಯರ್ ಜಿ.ಪದ್ಮಾವತಿ ಮಾತನಾಡಿ, ಟರ್ಮಿನಲ್‌ನಲ್ಲಿರುವ ತ್ಯಾಜ್ಯವನ್ನು ವಿಲೇವಾರಿ ಮಾಡುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜತೆಗೆ ನಿರಂತರ ತ್ಯಾಜ್ಯ ವಿಲೇವಾರಿಗೆ ಸಿಬ್ಬಂದಿ ನೇಮಿಸುವಂತೆಯೂ ತಿಳಿಸಲಾಗಿದೆ ಎಂದು ತಿಳಿಸಿದರು. ಶಾಸಕ ಮುನಿರತ್ನ, ಟರ್ಮಿನಲ್‌ನ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನಯ್ಯ, ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಉಪಸ್ಥಿತರಿದ್ದರು.
ಪೊಲೀಸ್ ಚೌಕಿಗೆ ಸಿಬ್ಬಂದಿ ನೇಮಿಸಿ
ಟರ್ಮಿನಲ್‌ನಲ್ಲಿ ವ್ಯಾಪ್ತಿಯಲ್ಲಿ ಮರಳು ದಂಧೆಯಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿದೆ ಎಂಬ ದೂರುಗಳಿವೆ. ಹೀಗಾಗಿ ಅಂತಹ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ಇಲ್ಲಿರುವ ಪೊಲೀಸ್ ಚೌಕಿಯಲ್ಲಿ ಸಿಬ್ಬಂದಿ ನೇಮಿಸಲು ಮುಂದಾಗುವಂತೆ ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರಿಗೆ ಜಾರ್ಜ್ ಇದೇ ವೇಳೆ ಸೂಚಿಸಿದರು.