ಹುಬ್ಬಳ್ಳಿ: ಕೇಂದ್ರ ಸರಕಾರದ ಉದ್ಯಮ ಭಾರತೀಯ ಉಕ್ಕು ಪ್ರಾಧಿಕಾರದ (ಎಸ್ ಎಐಎಲ್) ಗುಣಮಟ್ಟದ ಉಕ್ಕು ಸಾಮಗ್ರಿಗಳನ್ನು ದೇಶದ ಬೃಹತ್ ಯೋಜನೆಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಜನಸಾಮಾನ್ಯರಿಗೂ ಈ ಉತ್ಪನ್ನಗಳು ದೊರೆಯುವಂತೆ ಮಾಡುವ ಯೋಜನೆ ಕಂಪನಿಯದ್ದಾಗಿದೆ ಎಂದು ಎಸ್ ಎಐಎಲ್ ಎಜಿಎಂ ಬಿ.ಕೆ. ಸಿಂಗ್ ತಿಳಿಸಿದರು.
ಮಂಗಳವಾರ ಸುದ್ದಿಗಾರರಗೊಂದಿಗೆ ಮಾತನಾಡಿದ ಅವರು, ದೇಶದ ಜಿಡಿಪಿ ಪ್ರಗತಿಯಲ್ಲಿ ಉಕ್ಕು ಉತ್ಪನ್ನ ಪ್ರಮುಖ ಪಾತ್ರ ವಹಿಸುತ್ತದೆ. ವಿವಿಧ ಖಾಸಗಿ ಕಂಪನಿಗಳು ಪ್ರತಿ ವರ್ಷ 90 ಮಿಲಿಯನ್ ಟನ್ ಉಕ್ಕು ಉತ್ಪನ್ನಗಳನ್ನು ಉತ್ಪಾದಿಸುತ್ತಿದ್ದು, ಅದರಲ್ಲಿ ಎಸ್‌ಎಐಎಲ್‌ನಿಂದ 12.38 ಮಿಲಿಯನ್ ಟನ್ ತಯಾರಿಸಲಾಗುತ್ತಿದೆ ಎಂದು ಹೇಳಿದರು.
ರೈಲ್ವೆ, ಬಿಎಚ್‌ಎಲ್, ಬೆಂಗಳೂರು ಮೆಟ್ರೋ ಸೇರಿದಂತೆ ರಾಷ್ಟ್ರದ ಪ್ರಮುಖ ಯೋಜನೆಗಳಿಗೆ ಎಸ್‌ಎಐಎಲ್ ಉತ್ಪನ್ನಗಳನ್ನು ಪೂರೈಸಲಾಗುತ್ತಿದೆ. ಬೆಂಗಳೂರಿನಲ್ಲಿ ಉತ್ತಮ ಮಾರುಕಟ್ಟೆಯಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಮಾರುಕಟ್ಟೆ ವಿಸ್ತರಿಸುವ ಯೋಜನೆ ರೂಪಿಸಲಾಗಿದೆ.
ಅದರ ಪ್ರಯುಕ್ತ ಈ ಭಾಗದಲ್ಲಿ ಈ ಉತ್ಪನ್ನಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ. ಗುಣಮಟ್ಟದಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಂಡಿಲ್ಲ. ಭೂಕಂಪ, ತುಕ್ಕು ನಿರೋಧಕ ಪ್ರಮಾಣ ಹೆಚ್ಚಿದೆ. ಕಾಂಕ್ರೀಟ್‌ನೊಂದಿಗೆ ಬೆರೆತುಕೊಳ್ಳುತ್ತದೆ ಎಂದು ಹೇಳಿದರು.
ಉಕ್ಕು ಆಧಾರಿತ ಉತ್ಪನ್ನಗಳಲ್ಲಿ ಖಾಸಗಿ ಕಂಪನಿಗಳಿಂದ ಸಾಕಷ್ಟು ಸ್ಪರ್ಧೆಯಿದೆ. ಪ್ರದೇಶಕ್ಕೆ ಅನುಗುಣವಾಗಿ ಉತ್ಪಾದನಾ ಕೇಂದ್ರಗಳು ಇರುವುದರಿಂದ ಸಾರಿಗೆ ವೆಚ್ಚ ಹಾಗೂ ಜನಪ್ರಿಯತೆ ಗಳಿಸಿಕೊಂಡಿವೆ.
ಆದರೆ, ಎಸ್‌ಎಐಎಲ್ ಉತ್ಪಾದನಾ ಕೇಂದ್ರಗಳು ಕೆಲವೇ ಪ್ರದೇಶಕ್ಕೆ ಸೀಮಿತವಾಗಿರುವುದರಿಂದ ಮಾರುಕಟ್ಟೆ ಮಾಡಲು ಕಷ್ಟವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಉತ್ಪನ್ನಗಳನ್ನು ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಖಾಸಗಿ ಕಂಪನಿಗಳೊಂದಿಗೆ ಪೈಪೋಟಿ ಮಾಡಲಾಗುತ್ತಿದೆ.
ಜನರು ಸರಕಾರದ ಉದ್ಯಮವನ್ನು ಬೆಳಸುವ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದಿಂದ ಕೂಡಿರುವ ಎಸ್‌ಎಐಎಲ್ ಉತ್ಪನ್ನಗಳನ್ನು ಖರೀದಿಸುವಂತೆ ಮನವಿ ಮಾಡಿದರು. ನಂತರ ಎಸ್‌ಎಐಎಲ್ ಉತ್ಪನ್ನಗಳ ಕುರಿತು ತಿಳಿಸುವ ಕಾರ್ಯಕ್ರಮ ನಡೆಯಿತು. ಸ್ಥಳೀಯ ಎಂಜೀನಿಯರ್ ಗಳು, ಮಾರಾಟಗಾರರು ಪಾಲ್ಗೊಂಡಿದ್ದರು.