Advertisement

ಶಾಂತಿಯುತ ರಂಜಾನ್‌ ಆಚರಣೆಗೆ ಕ್ರಮ

01:15 PM Jun 23, 2017 | Team Udayavani |

ದಾವಣಗೆರೆ: ರಂಜಾನ್‌ ಹಬ್ಬದ ಶಾಂತಿಯುತ ಆಚರಣೆಗೆ ಸಿಸಿ ಟಿವಿ ಅಳವಡಿಕೆ ಒಳಗೊಂಡಂತೆ ಎಲ್ಲ ರೀತಿಯ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್‌ ಎಸ್‌. ಗುಳೇದ್‌ ತಿಳಿಸಿದ್ದಾರೆ. ರಂಜಾನ್‌ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ನಾಗರಿಕ ಸೌಹಾರ್ದ ಮತ್ತು ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.

Advertisement

ರಂಜಾನ್‌ ಹಬ್ಬದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ 8 ಭಾಗದಲ್ಲಿ ಸಿಸಿ ಟಿವಿ ಅಳವಡಿಸಲಾಗುತ್ತಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಸಿಸಿ ಟಿವಿ ಅಳವಡಿಕೆಗೆ ಇಲಾಖೆಗೆ ಅನುದಾನ ಬಿಡುಗಡೆಯಾಗಿದ್ದು, ಸವಿವರದ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದರು. ತಾವು ಅಧಿಕಾರ ವಹಿಸಿಕೊಂಡ ನಂತರದಿಂದ ದಾವಣಗೆರೆ ನಗರ ಮತ್ತು ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ.

ಇದನ್ನು ನೋಡಿದರೆ ಇಲ್ಲಿನ ಜನರಿಗೆ ಯಾವುದೇ ರೀತಿಯ ಗಲಾಟೆಯೇ ಬೇಕಿಲ್ಲ. ಎಲ್ಲರೂ  ಶಾಂತಿಯುತವಾಗಿ ಹಬ್ಬ-ಹರಿದಿನ ಆಚರಿಸುವ ಮನೋಭಾವ ಹೊಂದಿರುವುದು ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿದರು. ಇಲಾಖೆ ಕೆಲವಾರು ಕಿಡಿಗೇಡಿಗಳ ಬಗ್ಗೆ ಸದಾ ಗಮನ ನೀಡುತ್ತಿದೆ. 2 ವರ್ಷದಲ್ಲಿ ಕೆಲವರ ವಿರುದ್ಧ ರೌಡಿಶೀಟ್‌ ಪ್ರಾರಂಭ, ಸಿಆರ್‌ಪಿಸಿ 107 ಅಡಿ ಮುಂಜಾಗ್ರತಾ ಕ್ರಮ ತೆಗೆದುಕೊಂಡು 5 ರಿಂದ 10 ಲಕ್ಷ ಬಾಂಡ್‌ ಆಧಾರದಲ್ಲಿ ಬಿಡುಗಡೆ ಮಾಡಿದೆ.

ಸಮಾಜದಲ್ಲಿ ಕೆಟ್ಟವರು ಯಾರಿಯೇ ಆಗಿರಲಿ ಅಂತಹವರ ವಿರುದ್ಧ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ. ಯಾವುದೇ ಕಾರಣಕ್ಕೂ ಕೆಟ್ಟವರನ್ನು ಸುಮ್ಮನೆ ಬಿಡುವುದೇ ಇಲ್ಲಎಂದು ಎಚ್ಚರಿಸಿದರು.  ರಂಜಾನ್‌ ಹಬ್ಬದ ಹಿನ್ನೆಲೆಯಲ್ಲಿ ಪ್ರಾರ್ಥನಾ ಸ್ಥಳಗಳಲ್ಲಿ ಸ್ವತ್ಛತೆ, ನೀರಿನ ಸೌಲಭ್ಯ ಒದಗಿಸುವ ಬಗ್ಗೆ ಸಂಬಂಧಿತ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ, ಸೂಕ್ತ ಸೂಚನೆ ನೀಡಲಾಗಿದೆ.

ಹರಿಹರದಲ್ಲಿ ಒಳ ಚರಂಡಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ತೆರಳಲು ಅನಾನುಕೂಲ ಆಗುತ್ತಿರುವ ಬಗ್ಗೆ ನಗರಸಭೆ ಪೌರಾಯುಕ್ತರೊಂದಿಗೆ ಚರ್ಚಿಸಲಾಗಿದೆ. ತಾತ್ಕಾಲಿಕವಾಗಿ ಸೂಕ್ತ ರೀತಿಯ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದರು. 

Advertisement

ರಂಜಾನ್‌ ಹಬ್ಬದ ಹಿನ್ನೆಲೆಯಲ್ಲಿ ದಾವಣಗೆರೆಯ ಅರುಣ ಚಿತ್ರಮಂದಿರ ವೃತ್ತದಿಂದ ಕೋರ್ಟ್‌ ವೃತ್ತದವರೆಗೆ ರಸ್ತೆಯ ಒಂದು ಭಾಗದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಮಾಡಿಕೊಡಲಾಗುವುದು. ಪ್ರಾರ್ಥನೆ ಸಮಯದಲ್ಲಿ ವಾಹನ ಸಂಚಾರ ನಿಲ್ಲಿಸಲಾಗುವುದು ಎಂದಾಗ  ತಂಜೀಮುಲ್‌ ಕಮಿಟಿ ಅಧ್ಯಕ್ಷ ಸಾಧಿಕ್‌ ಪೈಲ್ವಾನ್‌, ಯುವ ಮುಖಂಡ ಜೆ. ಅಮಾನುಲ್ಲಾಖಾನ್‌, ಎಂ. ಟಿಪ್ಪುಸುಲ್ತಾನ್‌ ಇತರರು ಹಿಂದಿನ ವರ್ಷದಂತೆಯೇ ರಸ್ತೆಯ ಎರಡೂ ಬದಿಯಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. 

ರಂಜಾನ್‌ ಹಬ್ಬದ ಸಾಮೂಹಿಕ ಪ್ರಾರ್ಥನೆಗೆ ರಸ್ತೆಯ ಎರಡೂ ಬದಿಯಲ್ಲಿ ಅವಕಾಶ ಇತರೆ ಸೌಲಭ್ಯಕ್ಕೆ ಮಹಾನಗರ ಪಾಲಿಕೆ, ಪೊಲೀಸ್‌ ಇಲಾಖೆಗೆ ಮನವಿ ಸಲ್ಲಿಸಲಾಗುವುದು ತಂಜೀಮುಲ್‌ ಕಮಿಟಿ ಅಧ್ಯಕ್ಷ ಸಾಧಿಕ್‌ ಪೈಲ್ವಾನ್‌ ಎಂದು ತಿಳಿಸಿದಾಗ, ಅದರ ಆಧಾರದಲ್ಲಿ ಚರ್ಚಿಸಿ, ಎಲ್ಲರಿಗೂ ಅನುಕೂಲ ಆಗುವಂತೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್ಪಿ ಡಾ| ಭೀಮಾಶಂಕರ್‌ ಪ್ರತಿಕ್ರಿಯಿಸಿದರು.  

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಮಾತನಾಡಿ, ದಾವಣಗೆರೆ ನಗರ ಮತ್ತು ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೂ, ನಾಗರಿಕ ಸೌಹಾರ್ದ ಮತ್ತು ಸಮನ್ವಯ ಸಮಿತಿ ಸಭೆಯಲ್ಲಿ ಎಲ್ಲರೂ ಒಂದುಗೂಡಿ  ಮುಂದೆಯೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಚರ್ಚಿಸಿರುವುದು ಸಂತೋಷದ ವಿಚಾರ ಎಂದರು.

 ಎಲ್ಲರೂ ಪೀತಿಯಿಂದ ಇರುವಾಗ ಸಣ್ಣ ಪುಟ್ಟ ವಿಚಾರಗಳನ್ನು ಮರೆತುಬಿಡಬೇಕು. ಗೌಣವಾಗಿಸಿಬಿಡಬೇಕು. ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಸಮಾಜ ಏಕಮುಖೀಯಾಗಿ ಸಹಕಾರ ಸಾಗುವಂತಾಗಬೇಕು ಎಂದು ತಿಳಿಸಿದರು. ತಮಗೆ ಗೊತ್ತಿರುವಂತೆ ರಂಜಾನ್‌ ಎಂದರೆ ನಮ್ಮಲ್ಲಿನ ಎಲ್ಲಾ ಕೆಟ್ಟ ಗುಣಗಳನ್ನು ಸುಡುವ ಬೆಂಕಿ ಎಂದರ್ಥ.

ರಂಜಾನ್‌ ವ್ರತದ ಮೂಲಕ ನಮ್ಮಲ್ಲಿನ ಕೆಟ್ಟ ಗುಣಗಳನ್ನು ಸುಟ್ಟು ಅವಿಚ್ಚಿನ್ನ ಆಗುತ್ತೇವೆ. ರಂಜಾನ್‌ ನಂತರವೂ ನಾವು ಅವಿಚ್ಚಿನ್ನರಾಗಿ, ಶಾಂತಿ, ಸಂತೋಷದಿಂದ ಇರುವಂತಾಗಬೇಕು ಎಂದು ಆಶಿಸಿದರು. ಹೆಚ್ಚುವರಿ ಪೊಲೀಸ್‌ ಅಧೀಕ್ಷಕಿ ಯಶೋಧಾ ಎಸ್‌. ವಂಟಿಗೋಡಿ, ಮಹಾನಗರ ಪಾಲಿಕೆ ಉಪ ಆಯುಕ್ತ ಜಿ.ಎಂ. ರವೀಂದ್ರ ಇದ್ದರು. ವೃತ್ತ ನಿರೀಕ್ಷಕ ಜಿ.ಬಿ. ಉಮೇಶ್‌ ನಿರೂಪಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next