ಪುತ್ತೂರು: ಡಯಾಲಿಸಿಸ್ ಚಿಕಿತ್ಸೆಗೆ ಒಳಪಡುವ ರೋಗಿಗಳಿಗೆ ಅನು ಕೂಲ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ 6 ಡಯಾಲಿಸ್ ಯಂತ್ರ ಇದ್ದು, ಮುಂದಿನ ವಾರ ಇನ್ನೂಹೆಚ್ಚುವರಿಯಾಗಿ 6 ಡಯಾಲಿಸಿಸಿ ಯಂತ್ರವನ್ನು ಸ್ಥಳೀಯ ರೋಟರಿ ಸಂಸ್ಥೆಗಳ ಸಹಕಾರದಲ್ಲಿ ಅಳವಡಿಸಲಾ ಗುವುದು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
ಪುತ್ತೂರು ಸರಕಾರಿ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿದ ಅವರು ಡಯಾಲಿಸಿಸ್ ಕೇಂದ್ರ, ಆಸ್ಪತ್ರೆಯ ವಾರ್ಡ್, ಇನ್ನಿತರ ಸ್ಥಳಗಳಿಗೆ ತೆರಳಿ ಮಾಹಿತಿ ಪಡೆದು ಕೊಂಡರು. ಬಳಿಕ ಆಸ್ಪತ್ರೆಯ ವೈದ್ಯರ ಹಾಗೂ ಸಿಬಂದಿ ಸಭೆಯನ್ನು ನಡೆಸಿದರು.
ಕಡಬ ಆಸ್ಪತ್ರೆಯಲ್ಲಿರುವ ಮೂರು ಡಯಾಲಿಸಿಸ್ ಯಂತ್ರಗಳು ಸರ್ಮಪಕ ವಾಗಿ ಕೆಲಸ ನಿರ್ವಹಿಸಿದಲ್ಲಿ ಪುತ್ತೂರು ಆಸ್ಪತ್ರೆಯಲ್ಲಿ ಒತ್ತಡ ಕಡಿಮೆಯಾಗಲಿದೆ. ಈಗಾಗಲೇ ಪುತ್ತೂರು ಡಯಾಲಿಸಿಸ್ ಕೇಂದ್ರದಲ್ಲಿ ದಿನವಹಿ 30 ರೋಗಿಗಳಿಗೆ ಡಯಾಲಿಸಿಸ್ ಮಾಡಲಾಗುತ್ತದೆ. ಒಟ್ಟು 60 ಮಂದಿ ರೋಗಿಗಳು ನೋಂದಣಿ ಮಾಡಿಕೊಂಡಿದ್ದಾರೆ. 70 ಮಂದಿ ರೋಗಿಗಳು ಸರದಿಯಲ್ಲಿ ಕಾಯುತ್ತಿದ್ದಾರೆ. ಮುಂದಿನ ವಾರದಲ್ಲಿ 6 ಯಂತ್ರವನ್ನು ರೋಟರಿ ಸಂಸ್ಥೆಯು ನೀಡಲಿದೆ. ಇದರಿಂದಾಗಿ ಚಿಕಿತ್ಸೆಯ ಒತ್ತಡ ಕಡಿಮೆಯಾಗಲಿದೆ. ಉಳಿದಂತೆ ಮೂರು ಡಯಾಲಿಸಿಸ್ ಯಂತ್ರ ಹೆಚ್ಚುವರಿಯಾಗಿ ಬೇಕಾಗಿದೆ. ಇದನ್ನು ಒದಗಿಸುವ ಪ್ರಯತ್ನ ಮಾಡಲಾಗುವುದು. ಉಳಿದಂತೆ ಆಸ್ಪತ್ರೆಗೆ ಅನಸ್ತೇಶಿಯಾ ವಕಿಂìಗ್ ಘಟಕ, ಮಾಡ್ಯುಲರ್ ಒಟಿಯ ಅಗತ್ಯ ಇದೆ ಎಂದು ತಿಳಿಸಿದರು.
ಆಸ್ಪತ್ರೆಯಲ್ಲಿನ ಸಿಬಂದಿ ಕೊರತೆಯನ್ನು ಪರಿಹರಿಸುವ ನಿಟ್ಟಿನಲ್ಲಿ ತಾತ್ಕಾಲಿಕ ಸಿಬಂದಿಯನ್ನುನೇಮಕ ಮಾಡಿಕೊಳ್ಳಲು ಅವಕಾಶವಿದೆ. ಆಸ್ಪತ್ರೆಗೆ ತಾತ್ಕಾಲಿಕ ಸಿಬಂದಿ ನೇಮಕದ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಲ್ಲಿ ಚರ್ಚಿಸಿ ಭರ್ತಿ ಮಾಡಲಾಗುವುದು ಎಂದರು.
ತಾಲೂಕು ಸರಕಾರಿ ಆಸ್ಪತ್ರೆಯನ್ನು 300 ಬೆಡ್‌ನ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಇಲ್ಲಿ ಜಾಗದ ಕೊರತೆಯಿದೆ. ಇದರಿಂದಾಗಿ ಈಗಾಗಲೇ ಮೆಡಿಕಲ್ ಕಾಲೇಜು ಮಂಜೂರಾದ 40 ಎಕ್ರೆ ಜಾಗದಲ್ಲೇ 200 ಬೆಡ್ ನ ಆಸ್ಪತ್ರೆ ಜತೆಗೆ ಮೆಡಿಕಲ್ ಕಾಲೇಜು ಸ್ಥಾಪನೆಗೆ ಪ್ರಯತ್ನಿಸಲಾಗುವುದು. ಈಗ ಇರುವ ಸರಕಾರಿ ಆಸ್ಪತ್ರೆಯನ್ನು 100 ಬೆಡ್ ಆಸ್ಪತ್ರೆಯಾಗಿ ಉಳಿಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ|ದೀಪಕ್ ರೈ, ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಆಶಾ ಪುತ್ತೂರಾಯ ಮತ್ತಿತರರು ಉಪಸ್ಥಿತರಿದ್ದರು.
ಮೆಡಿಕಲ್ ಕಾಲೇಜಿಗೆ ಪ್ರಯತ್ನ
ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ನಿರ್ಮಿಸುವ ಬಗೆಗಿನ ಪ್ರಸ್ತಾವನೆಯ ಕಡತವು ಈ ತನಕ ತಾಲೂಕು ಕಚೇರಿಯಲ್ಲಿಯೇ ಬಾಕಿಯಾಗಿತ್ತು. ಈ ಕಡತವನ್ನು ಜಿಲ್ಲಾಧಿಕಾರಿಗಳ ಮೂಲಕ ಶಿಫಾರಸುಗೊಳಿಸಿ ಅದನ್ನು ಆರೋಗ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿಗಳ ಕಚೇರಿಗೆ ತಲುಪಿಸುವ ಕೆಲಸ ಮಾಡಿದ್ದೇನೆ. ಮುಂದೆ ಕ್ಯಾಬಿನೆಟ್‌ನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ಕಾಲೇಜು ನಿರ್ಮಿಸುವ ಪ್ರಯತ್ನ ಮಾಡುತ್ತೇನೆ ಎಂದು ಅಶೋಕ್ ರೈ ಹೇಳಿದರು.