ಹಾವೇರಿ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮು ಆರಂಭವಾದ ಹಿನ್ನೆಲೆಯಲ್ಲಿ ಮೇ 27 ಹಾಗೂ 28ರಂದು ಹಾನಗಲ್ ಮತ್ತು ಶಿಗ್ಗಾಂವಿ ಪಟ್ಟಣಗಳ ವ್ಯಾಪ್ತಿಯಲ್ಲಿನ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಕೃಷಿ ಅಧಿಕಾರಿಗಳ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿತು.
ಸಹಾಯಕ ಕೃಷಿ ನಿರ್ದೇಶಕ ಕರಿಯಲ್ಲಪ್ಪ ಕೊರಚರ ಅವರು ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಮಾರಾಟ ಮಾಡಬೇಕು ಹಾಗೂ ಕಡ್ಡಾಯವಾಗಿ ರಶೀದಿ ನೀಡಬೇಕು ಎಂದು ಕೃಷಿ ಪರಿಕರ ಮಾರಾಟಗಾರರಿಗೆ ಸೂಚಿಸಿದರು.
ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು, ಅವಧಿ ಮುಗಿದ ಕೃಷಿ ಪರಿಕರಗಳನ್ನು ಮಾರಾಟ ಮಾಡುವುದು, ಖುಲ್ಲಾ ಬೀಜಗಳನ್ನು ಮಾರಾಟ ಮಾಡುವುದು ಕಂಡುಬಂದಲ್ಲಿ ಪರವಾನಗಿ ಅಮಾನತು ಹಾಗೂ ರದ್ದುಗೊಳಿಸಿ ಕಾನೂನು ಕ್ರಮ ಕೈಗೊಳ್ಳಲಾವುದು ಎಂದು ಎಚ್ಚರಿಸಿದರು.
ಖುಲ್ಲಾ (ಬಿಡಿ) ಬಿತ್ತನೆ ಬೀಜಗಳನ್ನು ಬಿತ್ತುವುದರಿಂದ ಇಳುವರಿಯಲ್ಲಿ ತೀವ್ರ ನಷ್ಟವಾಗುತ್ತದೆ. ಕಾರಣ ರೈತ ಬಾಂಧವರು ಖುಲ್ಲಾ ಬೀಜಗಳನ್ನು ಖರೀದಿಸಬಾರದು ಮತ್ತು ಅಂತಹ ಮಾರಾಟಗಾರರು ಕಂಡುಬಂದಲ್ಲಿ ಕೃಷಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಲು ರೈತರಲ್ಲಿ ಮನವಿ ಮಾಡಿದರು.
ಮಾರಾಟ ಮಳಿಗೆಗಳಲ್ಲಿ ಕಡ್ಡಾಯವಾಗಿ ಕೃಷಿ ಪರಿಕರಗಳ ದಾಸ್ತಾನು ಮತ್ತು ಮಾರಾಟ ದರವನ್ನು ಎದ್ದು ಕಾಣುವಂತೆ ಪ್ರದರ್ಶಿಸಬೇಕು. ದಾಸ್ತಾನು ವಹಿಗಳನ್ನು ನಿಗದಿತ ನಮೂನೆಗಳ ಪ್ರಕಾರ ನಿರ್ವಹಿಸಬೇಕು ಹಾಗೂ ಅಧಿಕೃತ ಪರವಾನಗಿ ಇಲ್ಲದ ಪರಿಕರಗಳನ್ನು ಮಾರಾಟ ಮಾಡಬಾರದು. ಕೃಷಿ ಇಲಾಖೆ ಮಾನದಂಡದಂತೆ ವಹಿವಾಟು ಮಾಡಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ (ಜಾರಿದಳ-2) ಪ್ರಾಣೇಶ ತಿಳಿಸಿದರು. ಇದೇ ಸಂದರ್ಭದಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಮಾರಾಟಗಾರರಿಗೆ ಕಾರಣ ಕೇಳಿ ನೋಟಿಸ್ ನೀಡಿದರು.
ಹಾವೇರಿಯ ಸಹಾಯಕ ಕೃಷಿ ನಿರ್ದೇಶಕ ಸುನೀಲ ನಾಯ್ಕ, ಶಿಗ್ಗಾಂವ ಸಹಾಯಕ ಕೃಷಿ ನಿರ್ದೇಶಕ ಸುರೇಶ ದಿಕ್ಷೀತ್ ಇದ್ದರು.