Advertisement
ಸಾಮಾನ್ಯವಾಗಿ 15 ರಿಂದ 20 ಕುಟುಂಬಗಳು ಜಿಲ್ಲಾ ಕೇಂದ್ರದಲ್ಲಿ ಗಣೇಶ ಮೂರ್ತಿಗಳನ್ನು ನಿರ್ಮಿಸಿ ಮಾರಾಟ ಮಾಡುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಬ್ಬಕ್ಕೆ ಒಂದು ತಿಂಗಳು ಇರುವಂತೆಯೇ ಗಣೇಶ ಮೂರ್ತಿಗಳನ್ನು ರಸ್ತೆ ಬದಿ ಯಲ್ಲಿ ತಾತ್ಕಾಲಿಕ ಶೆಡ್ ಹಾಕಿ ಮಾರಾಟಕ್ಕೆ ಸಜ್ಜುಗೊಳಿ ಸುವುದು ವಾಡಿಕೆ. ಆದರೆ, ಈ ಬಾರಿ ಫುಟ್ಪಾತ್ ಅಂಗಡಿಗಳ ತೆರವು ಕಾರ್ಯಾಚರಣೆ ಹಾಗೂ ರಸ್ತೆ ಅಗಲೀಕರಣಕ್ಕೆ ಸಿದ್ಧವಾಗುತ್ತಿರುವ ನಗರಸಭೆ ಗಣೇಶ ಮೂರ್ತಿಗಳ ಮಾರಾಟಕ್ಕೆ ಅನುಮತಿ ನಿರಾಕರಿಸಿರು ವುದರಿಂದ ಇದುವರೆಗೂ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಬಂದಿಲ್ಲ.
Related Articles
Advertisement
ಪರಿಸರ ಸ್ನೇಹಿ ಗಣೇಶ ವಿಗ್ರಹ: ಕಳೆದ ಮೂರು ನಾಲ್ಕು ವರ್ಷಗಳಿಂದಲೂ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಯು ಪರಿಸರಕ್ಕೆ ಮಾರಕವಾಗುವ ಪಿಒಪಿ ಗಣೇಶ ವಿಗ್ರಹಗಳನ್ನು ಮಾಡುವುದು ಮತ್ತು ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಇದರಿಂದ ಬಹುತೇಕ ವ್ಯಾಪಾರಿಗಳು ಮತ್ತು ವಿಗ್ರಹ ತಯಾರಕರು ಪಿಒಪಿ ಗಣೇಶ ವಿಗ್ರಹಗಳ ಮಾಡುವುದನ್ನು ಮತ್ತು ಮಾರಾಟವನ್ನು ಸ್ಥಗಿತಗೊಳಿಸಿದ್ದು, ಸಂಪೂರ್ಣವಾಗಿ ಜೇಡಿಮಣ್ಣು, ಪೇಪರ್, ಹುಲ್ಲು ಇತ್ಯಾದಿ ಪರಿಸರ ಸ್ನೇಹಿ ವಸ್ತುಗಳಿಂದ ಮಾತ್ರವೇ ಗಣೇಶ ವಿಗ್ರಹಗಳನ್ನು ತಯಾರಿಸುತ್ತಿವೆ.
ಹಿಂದಿನ ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಟ್ಟ ಪಿಒಪಿ ವಿಗ್ರಹಗಳನ್ನು ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ಒಡೆದು ಹಾಕುವ ಕ್ರಮ ಕೈಗೊಂಡಿದ್ದರಿಂದ ಗಣೇಶ ವಿಗ್ರಹ ತಯಾರಕರು ಪಿಒಪಿ ಗಣೇಶ ವಿಗ್ರಹ ಮಾಡುವುದಕ್ಕೆ ಗುಡ್‌ಬೈ ಹೇಳಿಬಿಟ್ಟಿದ್ದಾರೆ.
ಹೊರಗಿನಿಂದ ಪಿಒಪಿ ವಿಗ್ರಹ: ಜಿಲ್ಲಾಡಳಿತ ಪಿಒಪಿ ಗಣೇಶ ವಿಗ್ರಹಗಳ ಬಗ್ಗೆ ಇಷ್ಟೆಲ್ಲಾ ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದರ ಪ್ರಭಾವ ಕೇವಲ ಸ್ಥಳೀಯ ಗಣೇಶ ವಿಗ್ರಹ ತಯಾರಕರ ಮೇಲೆ ಮಾತ್ರವೇ ಬೀಳುತ್ತಿದೆ. ಬೃಹತ್ ಗಾತ್ರದ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವ ವಿನಾಯಕ ಸಂಘಗಳು ಬೆಂಗಳೂರು, ಚೆನ್ನೈ, ಮುಂಬೈ, ಕೊಲ್ಕೊತ್ತಾಗಳಿಂದ ತರಿಸುತ್ತಿರುವ ಬೃಹತ್ ಗಣೇಶ ವಿಗ್ರಹಗಳು ಪಿಒಪಿಯಿಂದ ತಯಾರಿಸಲ್ಪಟ್ಟ ಗಣೇಶ ವಿಗ್ರಹಗಳಾಗಿರುವುದನ್ನು ಸಾರ್ವಜನಿಕರು ಗಮನಿಸುತ್ತಲೇ ಇದ್ದಾರೆ. ಸಣ್ಣ ವಿಗ್ರಹಗಳಿಗೆ ಇರುವ ಕಟ್ಟುಪಾಡು ದೊಡ್ಡ ವಿಗ್ರಹಗಳಿಗೇಕಿಲ್ಲವೆಂದು ಪ್ರಶ್ನಿಸುತ್ತಿದ್ದಾರೆ.
ಅನುಮತಿಯಲ್ಲೇ ಕಟ್ಟು ಪಾಡು: ವಿನಾಯಕ ಸಂಘಗಳು ಬೃಹತ್ ಗಾತ್ರದ ಪಿಒಪಿ ಗಣೇಶಮೂರ್ತಿಗಳನ್ನು ಹೊರ ರಾಜ್ಯಗಳಿಂದ ತರಿಸಿ ಪ್ರತಿಷ್ಠಾಪನೆ ಮಾಡುತ್ತಿರುವುದಕ್ಕೆ ಈ ಬಾರಿ ಅನುಮತಿಯಲ್ಲೇ ಷರತ್ತಿನ ಕಡಿವಾಣ ಹಾಕಲು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ನಗರಸಭೆ, ಪೊಲೀಸ್ ಇಲಾಖೆಗಳು ಕಾರ್ಯೋನ್ಮುಖವಾಗುತ್ತಿವೆ. ಈ ಕುರಿತು ನಾಲ್ಕೈದು ದಿನಗಳಲ್ಲಿ ಸ್ಪಷ್ಟವಾದ ಗಣೇಶ ಪೆಂಡಾಲ್ನಲ್ಲಿ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಪ್ರಕಟಿಸಲು ತಯಾರಿ ನಡೆಯುತ್ತಿದೆ.
ಪಿಒಪಿ ಗಣೇಶ ತರಿಸಿ ಪ್ರತಿಷ್ಠಾಪಿಸಲು ಮಂದಾದರೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲವೆಂಬ ಷರತ್ತು ಹಾಕಿ ಇದನ್ನು ಕಡ್ಡಾಯವಾಗಿ ಪಾಲಿಸಲು ತೀರ್ಮಾನಿಸಲಾಗಿದೆ. ಇದರಿಂದ ಈ ಬಾರಿ ಪರ ರಾಜ್ಯಗಳಿಂದ ಪಿಒಪಿ ಗಣೇಶ ಮೂರ್ತಿಗಳನ್ನು ತಯಾರಿಸುವವರು ಮಣ್ಣಿನ ವಿಗ್ರಹಗಳಿಗೆ ಮೊರೆ ಹೋಗಬೇಕಾಗುವುದು ಅನಿವಾರ್ಯವಾಗುತ್ತದೆ.
ಬರಗಾಲದ ಭೀತಿ: ಗಣೇಶ ಹಬ್ಬದ ಮೇಲೆ ಬರಗಾಲದ ಛಾಯೆ ಇದೆ. ಕಳೆದ ವರ್ಷವೂ ಕೋಲಾರ ಜಿಲ್ಲೆಯನ್ನು ಬರಗಾಲ ಆವರಿಸಿದ್ದು, ಗಣೇಶ ವಿಗ್ರಹಗಳ ಮಾರಾಟ ಮೇಲೆ ಇದರ ಕರಿನೆರಳು ಬಿದ್ದಿತ್ತು. ಕೆರೆ ಕುಂಟೆಗಳಲ್ಲಿ ನೀರಿಲ್ಲದ ಕಾರಣದಿಂದ ಹಲಪು ಕುಟುಂಬಗಳು ವಿಸರ್ಜನೆಗೆ ತೊಂದರೆಯಾಗಬಹುದು ಎಂಬ ಕಾರಣದಿಂದ ಗಣೇಶ ವಿಗ್ರಹಗಳು ಖರೀದಿಸುವುದನ್ನು ಬಿಟ್ಟಿದ್ದರು. ಇದರಿಂದ ಬಹುತೇಕ ಮಾರಾಟಗಾರರ ಬಳಿ ಗಣೇಶ ವಿಗ್ರಹಗಳು ಉಳಿಯುವಂತಾಗಿದ್ದವು.
ಈ ಬಾರಿಯೂ ಇಂತದ್ದೇ ಸಮಸ್ಯೆ ಎದುರಾಗಿದ್ದು, ಕೋಲಾರ ಜಿಲ್ಲೆಯ ಬಹುತೇಕ ಕೆರೆ ಕುಂಟೆ ಕಲ್ಯಾಣಿಗಳು ಮಳೆ ಕೊರತೆಯಿಂದಾಗಿ ಬತ್ತಿವೆ. ಇದು ಗಣೇಶ ವಿಗ್ರಹಗಳ ಮಾರಾಟಗಾರರ ಆತಂಕಕ್ಕೂ ಕಾರಣವಾಗಿದೆ. ಗಣೇಶ ಮದುವೆಗೆ ನೂರೆಂಟು ವಿಘ್ನ ಎನ್ನುವಂತೆ ಕೋಲಾರ ಜಿಲ್ಲೆಯಲ್ಲಿ ಗಣೇಶ ಪೂಜೆಗೂ ಹಲವಾರು ವಿಘ್ನಗಳು ಎದುರಾಗುವಂತಾಗಿದೆ.