Advertisement

ಪಾರಂಪರಿಕ ನಂದಿ ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಕ್ರಮ:ಕಾಯಕಲ್ಪ ನೀಡಲು ಮುಂದಾದ ರೈಲ್ವೆ ಇಲಾಖೆ

09:32 PM Apr 30, 2023 | Team Udayavani |

ಚಿಕ್ಕಬಳ್ಳಾಪುರ: ತಾಲೂಕಿನ ನಂದಿ ರೈಲ್ವೆ ನಿಲ್ದಾಣಕ್ಕೆ ಕೊನೆಗೂ ರೈಲ್ವೆ ಇಲಾಖೆ ಕಾಯಕಲ್ಪ, ಪಾರಂಪರಿಕ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಮುಂದಾಗಿರುವುದು ಸಹಜವಾಗಿಯೇ ಆ ಭಾಗದ ರೈಲ್ವೆ ಪ್ರಯಾಣಿಕರಲ್ಲಿ ಸಂತಸ ಮೂಡಿಸಿದೆ.

Advertisement

ಚಿಕ್ಕಬಳ್ಳಾಪುರ ಕೋಲಾರ ರೈಲ್ವೆ ಮಾರ್ಗ ಮೈಸೂರು ಸಂಸ್ಥಾನದ ಮೊದಲ ರೈಲ್ವೆ ಮಾರ್ಗವಾಗಿ 1915ರಲ್ಲಿ ಈ ಮಾರ್ಗಕ್ಕೆ ಚಾಲನೆ ನೀಡಲಾಗಿತ್ತು. 2 ದಶಕದಿಂದೀಚೆಗೆ ಹಂತ ಹಂತವಾಗಿ ಬ್ರಾಡ್‌ಗೆಜ್‌ ಮಾರ್ಗವಾಗಿ ಮಾರ್ಪಟ್ಟಿದೆ. ಈ ಮಾರ್ಗದಲ್ಲಿ ಬರುವ ರೈಲ್ವೆ ನಿಲ್ದಾಣಗಳು ಶತಮಾನದ ಇತಿಹಾಸ ಹೊಂದಿವೆ.

ಈ ಹಿನ್ನೆಲೆಯಲ್ಲಿ ಅವುಗಳನ್ನು ಜೀರ್ಣೋದ್ಧಾರಗೊಳಿಸಿ ಪಾರಂಪರಿಕ ತಾಣಗಳಾಗಿ ಉಳಿಸಿಕೊಳ್ಳಬೇಕು ಎಂಬುದು ರೈಲ್ವೆ ಇಲಾಖೆ ಉದ್ದೇಶವಾಗಿದೆ. ಈಗಾಗಲೇ ಸರ್ಕಾರೇತರ ಸಂಸ್ಥೆಯ ಸಹಯೋಗದಲ್ಲಿ ದೊಡ್ಡಜಾಲ, ದೇವನಹಳ್ಳಿ ಹಾಗೂ ಆವತಿ ನಿಲ್ದಾಣಗಳನ್ನು ಜೀರ್ಣೋದ್ಧಾರಗೊಳಿಸಲಾಗಿದ್ದು, ಅದರ ಮುಂದುವರೆದ ಭಾಗವಾಗಿ ಈಗ ನಂದಿ ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ.

ಜೀರ್ಣೋದ್ಧಾರಕ್ಕೆ ಭೂಮಿ ಪೂಜೆ:
ಪ್ರಕೃತಿ ಸೌಂದರ್ಯದ ಮಡಿಲಲ್ಲಿರುವ ನಂದಿ ರೈಲ್ವೆ ನಿಲ್ದಾಣವನ್ನು ಈ ಮಾರ್ಗದ ಪ್ರಮುಖ ಪಾರಂಪರಿಕ ತಾಣವೆಂದು ಗುರುತಿಸಲಾಗಿದೆ. ನಿಲ್ದಾಣದ ಕಟ್ಟಡದ ಹಳೆಯ ಸ್ವರೂಪಕ್ಕೆ ಧಕ್ಕೆ ಬಾರದಂತೆ ಯತಾಸ್ಥಿತಿ ಕಾಪಾಡಿಕೊಂಡು ಜೀರ್ಣೋದ್ಧಾರಗೊಳಿಸಲು ಸರ್ಕಾರೇತರ ಇಂಟ್ಯಾಕ್ಸ್‌ ಸಂಸ್ಥೆ ಕೈಜೋಡಿಸಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಂಗಳೂರು ವಿಭಾಗದ ಆಡಳಿತ ವಿಭಾಗದ ಹೆಚ್ಚುವರಿ ರೈಲ್ವೆ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್‌ ಜೀರ್ಣೋದ್ಧಾರ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಇಂಟ್ಯಾಕ್‌ ಸಂಸ್ಥೆಯ ಸಂಚಾಲಕಿ ಮೀರಾ ಅಯ್ಯರ್‌, ಸಹ ಸಂಚಾಲಕ ಅರವಿಂದ ಚೇತನಾ ಮತ್ತಿತರರು ಹಾಜರಿದ್ದರು.

ಶತಮಾನದ ಇತಿಹಾಸವುಳ್ಳ ಚಿಕ್ಕಬಳ್ಳಾಪುರದ ನಂದಿ ರೈಲ್ವೆ ನಿಲ್ದಾಣ.

Advertisement

ನಂದಿ ರೈಲ್ವೆ ನಿಲ್ದಾಣದ ಜೀರ್ಣೋದ್ಧಾರ ಕಾಮಗಾರಿಗೆ ಬೆಂಗಳೂರು ವಿಭಾಗೀಯ ಆಡಳಿತ ವಿಭಾಗದ ಹೆಚ್ಚುವರಿ ರೈಲ್ವೆ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್‌ ಭೂಮಿಪೂಜೆ ನೆರವೇರಿಸಿದರು.

ನಂದಿಯಲ್ಲಿ ರೈಲ್ವೆ ಮ್ಯೂಸಿಯಂ
ಪ್ರವಾಸೋದ್ಯಮ ದೃಷ್ಟಿಯಲ್ಲಿರಿಸಿಕೊಂಡು ನಂದಿ ಬೆಟ್ಟಕ್ಕೆ ಈಗಾಗಲೇ ರಾಜ್ಯ ಸರ್ಕಾರ ರೋಪ್‌ವೇ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದೆ. ಬೆಟ್ಟದ ತಪ್ಪಲಿನಲ್ಲಿರುವ ನಂದಿ ರೈಲ್ವೆ ನಿಲ್ದಾಣ ಕೂಡ ಪ್ರವಾಸಿಗರ ಆಕರ್ಷಿಸುವಂತೆ ಅಭಿವೃದ್ಧಿಪಡಿಸುವುದು ರೈಲ್ವೆ ಇಲಾಖೆ ಉದ್ದೇಶವಾಗಿದೆ. ಮೊದಲ ಹಂತವಾಗಿ ಮುಖ್ಯ ರಸ್ತೆಯಿಂದ ರೈಲ್ವೇ ನಿಲ್ದಾಣದವರೆಗೆ ಸಿಮೆಂಟ್‌ ಕಾಂಕ್ರಿಟ್‌ ರಸ್ತೆ ಮಾಡಲಾಗಿದೆ. ಮುಂದಿನ ಹಂತದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ರೈಲ್ವೆ ಮ್ಯೂಸಿಯಂ, ಚಿತ್ರಪಟ ಗ್ಯಾಲರಿ, ಮಕ್ಕಳ ರೈಲು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next