Advertisement

ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮ: ಸುನಿಲ್‌ ಸೂಚನೆ

12:47 AM Sep 10, 2021 | Team Udayavani |

ಉಡುಪಿ: ಜಿಲ್ಲೆಯಲ್ಲಿ ಹೆಚ್ಚು ಕೊರೊನಾ ಪರೀಕ್ಷೆಗಳನ್ನು ನಡೆಸುವುದರ ಜತೆಗೆ ಸೋಂಕಿತರನ್ನು ಪ್ರತ್ಯೇಕಿಸಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ ಕುಮಾರ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಗುರುವಾರ ಜಿ.ಪಂ. ಸಭಾಂಗಣದಲ್ಲಿ ಕೊರೊನಾ ನಿಯಂತ್ರಣ ಹಾಗೂ ಅಮೃತ್‌ ಗ್ರಾ.ಪಂ. ಯೋಜನೆಯ ಗ್ರಾ.ಪಂ. ಆಯ್ಕೆಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿದಿನ 8,000 ಕೋವಿಡ್‌ ಪರೀಕ್ಷೆಯ ಗುರಿಯನ್ನಿಟ್ಟುಕೊಂಡು ಪರೀಕ್ಷೆ ಮಾಡಬೇಕು. ಪಾಸಿಟಿವಿಟಿ ದರವನ್ನು ಶೇ. 1ರೊಳಗೆ ತರುವಂತೆಯೂ ಸೆಪ್ಟಂಬರ್‌ ಅಂತ್ಯದ ಒಳಗೆ ಜಿಲ್ಲೆಯಲ್ಲಿ ಶೇ. 100ರಷ್ಟು ಜನರಿಗೆ ಲಸಿಕೆ ನೀಡುವಂತೆಯೂ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ವಿಳಂಬಕ್ಕೆ ಅಸಮಾಧಾನ:

ತಾಲೂಕು ಮಟ್ಟದಲ್ಲಿ ಆಕ್ಸಿಜನ್‌ ಘಟಕಗಳ ನಿರ್ಮಾಣ ಪೂರ್ಣ ಗೊಂಡಿದ್ದರೂ ಉದ್ಘಾಟನೆ ವಿಳಂಬ ಆಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, 10 ದಿನದೊಳಗೆಉದ್ಘಾಟನೆ ಆಗುವಂತೆ ನೊಡಿಕೊಳ್ಳ ಬೇಕು ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಕೇರಳದಲ್ಲಿ ನಿಫಾ ವೈರಸ್‌ ಹರಡುತ್ತಿರುವುದರಿಂದ ಜಿಲ್ಲೆಗೆ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಬಂದಿರುವವರಿಗೆ ಮತ್ತೂಮ್ಮೆ ಆರೋಗ್ಯ ಪರೀಕ್ಷೆ ಮಾಡಿಸುವುದು ಸೂಕ್ತ ಎಂದರು.

Advertisement

ಶಾಸಕರಾದ ಕೆ. ರಘುಪತಿ ಭಟ್‌, ಲಾಲಾಜಿ ಆರ್‌ ಮೆಂಡನ್‌, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ., ಜಿ.ಪಂ. ಸಿಇಒ ಡಾ| ನವೀನ್‌ ಭಟ್‌ ವೈ, ಎಡಿಸಿ ಸದಾಶಿವ ಪ್ರಭು ಉಪಸ್ಥಿತರಿದ್ದರು.

ಅಮೃತ್‌ ಯೋಜನೆ: 18 ಗ್ರಾ.ಪಂ. ಆಯ್ಕೆ :

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ಜಿಲ್ಲೆಯ ಆಯ್ದ 18 ಗ್ರಾ.ಪಂ.ಗಳಲ್ಲಿ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗಾಗಿ ಘೋಷಿಸಿರುವಂತೆ ಅಮೃತ ಗ್ರಾ.ಪಂ. ಯೋಜನೆಯನ್ನು ಅನುಷ್ಠಾನಗೊಳಿಸಲು ಸರಕಾರ ತೀರ್ಮಾನಿಸಿದೆ. ಈ ಗ್ರಾ.ಪಂ.ಗಳಲ್ಲಿ ಬೀದಿದೀಪ, ಕುಡಿಯುವ ನೀರಿನ ನಳಿ ಸಂಪರ್ಕ, ಘನತ್ಯಾಜ್ಯ ವಿಂಗಡನೆ ಹಾಗೂ ವಿಲೇವಾರಿ, ಪಂ.ಗಳಿಗೆ ಸೌರ ವಿದ್ಯುತ್‌ ಅಳವಡಿಕೆ, ಉದ್ಯಾನವನ, ಲೈಬ್ರರಿ ಡಿಜಿಟಲೀಕರಣ ಶಾಲೆ ಹಾಗೂ ಅಂಗನವಾಡಿಗಳಿಗೆ ಮೂಲಸೌಕರ್ಯ, ಕೆರೆ, ಕಲ್ಯಾಣಿಗಳ ಪುನಶ್ಚೇತನ ಇತ್ಯಾದಿ  ಉದ್ದೇಶವಾಗಿದೆ. ಈ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಲ್ಲಿ ಅಂತಹ ಗ್ರಾ.ಪಂ.ಗಳಿಗೆ ಸರಕಾರ ತಲಾ 25 ಲ.ರೂ. ಅನಿರ್ಬಂಧಿತ ಅನುದಾನ ನೀಡಲಾಗುತ್ತದೆ. ಪ್ರಸಕ್ತ ಹಾಲಿ ಚಾಲ್ತಿಯಲ್ಲಿರುವ ಯೋಜನೆಗಳ ಅನುದಾನವನ್ನು ಒಗ್ಗೂಡಿಸುವ ಮೂಲಕ ಅಭಿವೃದ್ಧಿಗೊಳಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next