ಹೊಸದಿಲ್ಲಿ: ಪಕ್ಷ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ರಾಜ್ಯಗಳಲ್ಲಿ ಜಾತಿ ಗಣತಿಗೆ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ. ಅಲ್ಲದೆ ಇದು ಐತಿಹಾಸಿಕ ನಿರ್ಧಾರ ಎಂದು ಕರೆದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು (ಸಿಡಬ್ಲ್ಯುಸಿ) ನಾಲ್ಕು ಗಂಟೆಗಳ ಕಾಲ ಸಭೆ ನಡೆಸಿ ಜಾತಿ ಗಣತಿ ಕುರಿತು ಚರ್ಚಿಸಿದೆ ಎಂದು ಹೇಳಿದರು.
“ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಸಾಮೂಹಿಕವಾಗಿ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದೆ. ಹಿಮಾಚಲ ಪ್ರದೇಶ, ರಾಜಸ್ಥಾನ, ಕರ್ನಾಟಕ ಮತ್ತು ಛತ್ತೀಸ್‌ಗಢದಲ್ಲಿ ಜಾತಿ ಗಣತಿ ನಡೆಸಲು ನಮ್ಮ ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ” ಎಂದು ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಇದನ್ನೂ ಓದಿ:Vaccine War: ಸಿನಿಮಾ ಪ್ರಚಾರ ಮಾಡಿಸಲು ಯೋಗಿ ಆದಿತ್ಯನಾಥ್ ಭೇಟಿಯಾದ ವಿವೇಕ್ ಅಗ್ನಿಹೋತ್ರಿ
ದೇಶದ ಬಡ ಜನರ ವಿಮೋಚನೆಗಾಗಿ ಈ ನಿರ್ಧಾರವು ಅತ್ಯಂತ “ಪ್ರಗತಿಪರ” ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.
ಈ ನಿರ್ಧಾರವು ಧರ್ಮ ಅಥವಾ ಜಾತಿಯ ಪರಿಗಣನೆಯಿಂದ ಪ್ರೇರಿತವಾಗಿಲ್ಲ, ಬದಲಿಗೆ ಭಾರತದ ಆರ್ಥಿಕವಾಗಿ ಹಿಂದುಳಿದ ಜನರಿಗೆ ಅನುಕೂಲವಾಗುವಂತೆ ಮಾಡಲಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.