ಬೆಂಗಳೂರು: ದುರ್ಬಲ ವರ್ಗದ ಮಕ್ಕಳನ್ನು ಪ್ರತಿಷ್ಠಿತ ಶಾಲೆಗೆ ಸೇರಿಸುವ ಇಲಾಖೆಯ ಯೋಜನೆಯ ವ್ಯಾಪ್ತಿಗೆ ಶ್ಮಶಾನ ಕಾರ್ಮಿಕರ ಮಕ್ಕಳನ್ನು ತರಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಶ್ಮಶಾನ ಕಾರ್ಮಿಕರಿಗೆ ಸೌಲಭ್ಯ ಒದಗಿಸುವ ಸಂಬಂಧ ಬುಧವಾರ ವಿಧಾನಸೌಧದಲ್ಲಿ ಸಭೆ ನಡೆಸಿದ ಸಚಿವರು, ಸಮಾಜ ಕಲ್ಯಾಣ ಇಲಾಖೆ ಯೋಜನೆಯಾಗಿರುವ ದುರ್ಬಲರ ಮಕ್ಕಳನ್ನು ಪ್ರತಿಷ್ಠಿತ ಶಾಲೆಗೆ ಸೇರಿಸುವ ಯೋಜನೆ ವ್ಯಾಪ್ತಿಗೆ ಶ್ಮಶಾನ ಕಾರ್ಮಿಕರ ಮಕ್ಕಳಿಗೆ ಆದ್ಯತೆ ಮೇಲೆ ಪ್ರವೇಶ ಕಲ್ಪಿಸಲಾಗುವುದು ಎಂದರು.
ಪ್ರತಿಷ್ಠಿತ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವ ಯೋಜನೆಯಲ್ಲಿ ಅಲೆಮಾರಿ, ದೇವದಾಸಿಯರ ಮಕ್ಕಳು, ಪೋಷಕರು ಮೃತರಾಗಿ ಅನಾಥರಾದ ಮಕ್ಕಳು, ಅಂಗವಿಕಲರು ಸಹಿತ 14 ವರ್ಗಗಳ ಒಂದು ಸಾವಿರ ಮಕ್ಕಳನ್ನು ಪ್ರತಿವರ್ಷ ಪ್ರತಿಷ್ಠಿತ ಶಾಲೆಗಳಿಗೆ ಸೇರಿಸಿ ಓದಿಸುವ ಯೋಜನೆಯಾಗಿದೆ. ಈಗ ಶ್ಮಶಾನ ಕಾರ್ಮಿಕರ ಮಕ್ಕಳಿಗೆ ಆದ್ಯತೆ ನೀಡಿ ಆದೇಶ ಹೊರಡಿಸಲಾಗುವುದು. ಅಲ್ಲದೆ ಪ್ರವೇಶ ಸಂಖ್ಯೆಯನ್ನು 1000ದಿಂದ 2000ಕ್ಕೆ ಹೆಚ್ಚಿಸಲು ಕ್ರಮ ವಹಿಸಲಾಗುವುದು ಎಂದರು.
ಶ್ಮಶಾನಗಳ ಕಾರ್ಮಿಕರನ್ನು ಖಾಯಂ ಮಾಡುವ, ಅವರಿಗೆ ನಿವೇಶನ, ಮನೆ, ಆರೋಗ್ಯ ಕಾರ್ಡು, ಗುರುತಿನ ಚೀಟಿ ವಿತರಣೆ, ಕನಿಷ್ಠ ವೇತನ ನಿಗದಿ ಸಹಿತ ವಿವಿಧ ಸೌಲಭ್ಯಗಳನ್ನು ವಿತರಿಸಲು ಕ್ರಮ ವಹಿಸಲಾಗುವುದು. ಪ್ರತಿ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳಲ್ಲಿ ಶ್ಮಶಾನಗಳ ಮಾಹಿತಿ ಹಾಗೂ ಸ್ಮಶಾನಕ್ಕೊಬ್ಬ ಕಾರ್ಮಿಕರನ್ನು ನೇಮಿಸಿಕೊಳ್ಳುವ ಸಂಬಂಧ ಪಂಚಾಯತ್ ರಾಜ್ ಹಾಗೂ ನಗರಾಭಿವೃದ್ಧಿ ಇಲಾಖೆಯೊಂದಿಗೆ ಚರ್ಚಿಸಲಾಗುವುದು ಎಂದರು.
ಜಿಲ್ಲೆಗಳಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರ
ಜಿಲ್ಲಾ ಮಟ್ಟದಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರ ನಿರ್ಮಿಸಲು ಸ್ಥಳ ಗುರುತಿಸುವಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿಕಾಸಸೌಧದಲ್ಲಿ ಬುಧವಾರ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಸಚಿವರು, ಭಿಕ್ಷಾಟನೆ ಸಂಪೂರ್ಣ ನಿಷೇಧಿಸಲಾಗಿದ್ದು, ನಿರಾಶ್ರಿತರ ಪರಿಹಾರ ಕೇಂದ್ರಗಳನ್ನು ಜಿಲ್ಲಾ ಮಟ್ಟದಲ್ಲಿ ನಿರ್ಮಿಸಲು ಕ್ರಮ ವಹಿಸಬೇಕು ಹಾಗೂ ಅದಕ್ಕಾಗಿ ಶೀಘ್ರ ಸ್ಥಳ ಗುರುತಿಸುವಂತೆ ಸಚಿವರು ಸೂಚಿಸಿದರು.