Advertisement

ಅನಾಥ ಮಕ್ಕಳ ಶಿಕ್ಷಣಕ್ಕೆ ಸರ್ಕಾರದಿಂದ ಕ್ರಮ

03:23 PM May 31, 2022 | Niyatha Bhat |

ಶಿವಮೊಗ್ಗ: ವಿಶ್ವಾದ್ಯಂತ ಇನ್ನಿಲ್ಲದಂತೆ ಕಾಡಿದ ಮಹಾಮಾರಿ ಕೊರೊನಾದಿಂದ ತಮ್ಮ ಪೋಷಕರನ್ನು ಕಳೆದುಕೊಂಡು ಅನಾಥರಾಗಿರುವ ಅಪ್ರಾಪ್ತ ಮಕ್ಕಳ ಶಿಕ್ಷಣ ಮತ್ತು ಸುರಕ್ಷತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ಕ್ರಮ ಕೈಗೊಂಡಿವೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

Advertisement

ಪಿ.ಎಂ.ಕೇರ್ ಫಾರ್‌ ಚಿಲ್ಡ್ರನ್ಸ್‌ ಯೋಜನೆ ಅನುಷ್ಠಾನದ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೋಮವಾರ ದೇಶದ ಎಲ್ಲಾ ಜಿಲ್ಲೆಗಳಲ್ಲಿನ ಸಂತ್ರಸ್ತ ಕುಟುಂಬಗಳ ಮಕ್ಕಳಿಗೆ ಸಾಂತ್ವನ ಹೇಳುವ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸಂತ್ರಸ್ತ ಮಕ್ಕಳಿಗೆ ಸೌಲಭ್ಯಗಳ ಕಿಟ್‌ನ್ನು ವಿತರಿಸಿ ಅವರು ಮಾತನಾಡಿದರು.

ಕೊರೋನದಿಂದಾಗಿ ರಾಜ್ಯದಲ್ಲಿ ಸುಮಾರು 216ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡು ಪೋಷಕರ ಪ್ರೀತಿ- ವಾತ್ಸಲ್ಯದಿಂದ ವಂಚಿತರಾಗಿರುವುದು ಅತ್ಯಂತ ನೋವಿನ ಸಂಗತಿ. ಇಂತಹ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ಒದಗಿಸಲು ಸರ್ಕಾರಗಳು ಅಗತ್ಯ ಕ್ರಮ ಕೈಗೊಂಡಿರುವುದು ಸಮಾಧಾನಕರ ವಿಷಯ ಎಂದ ಅವರು, ಜಿಲ್ಲಾಧಿಕಾರಿಗಳು ಮತ್ತು ಸಂತ್ರಸ್ತ ಪ್ರತಿ ಮಗುವಿನ ಹೆಸರಲ್ಲಿ ಜಂಟಿಯಾಗಿ ಠೇವಣಿ ಇರಿಸಿದ ಹಣವನ್ನು ಮಗುವಿನ 23ವಯಸ್ಸಿಗೆ ಒಟ್ಟು 10ಲಕ್ಷ ರೂ. ಗಳ ಹಣವನ್ನು ಮಗುವಿನ ಮುಂದಿನ ಭವಿಷ್ಯಕ್ಕಾಗಿ ನೀಡಲಾಗುವುದು ಎಂದರು. ಜಿಲ್ಲೆಯಲ್ಲಿ ಇಂತಹ 05 ಮಕ್ಕಳನ್ನು ಗುರುತಿಸಲಾಗಿದ್ದು, ಈಗಾಗಲೇ ಸಂತ್ರಸ್ತ ಮಕ್ಕಳ ಹೆಸರಲ್ಲಿ 5 ಲಕ್ಷ ರೂ.ಗಳ ಠೇವಣಿಯನ್ನು ಅಂಚೆ ಕಚೇರಿಯಲ್ಲಿ ಇರಿಸಲಾಗಿದೆ. ಅಲ್ಲದೇ ಮುಖ್ಯಮಂತ್ರಿಗಳ ಬಾಲಸೇವಾ ಯೋಜನೆಯಡಿ ಸೌಲಭ್ಯ ನೀಡಲಾಗುತ್ತಿದೆ ಎಂದ ಅವರು, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಿಗೆ ದಾಖಲಿಸಲು ಕ್ರಮ ವಹಿಸಲಾಗಿದೆ. ಇದರೊಂದಿಗೆ 5 ಲಕ್ಷ ರೂ.ಗಳ ವರೆಗೆ ಉಚಿತ ಆರೋಗ್ಯವಿಮೆ ಸೌಲಭ್ಯ ಒದಗಿಸಲಾಗಿದೆ ಎಂದರು.

ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿ, ಪೋಷಕರನ್ನು ಕಳೆದುಕೊಂಡ ಮಕ್ಕಳ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅವರ ಉಜ್ವಲ ಭವಿಷ್ಯ ರೂಪಿಸುವಲ್ಲಿ ಸರ್ಕಾರ ಮಹತ್ವದ ನಿರ್ಣಯಗಳನ್ನು ಕೈಗೊಂಡಿದೆ. ಅವರ ಶೈಕ್ಷಣಿಕ ಚಟುವಟಿಕೆಗಳು ನಿರಂತರವಾಗಿರುವಂತೆ ನೋಡಿಕೊಳ್ಳಲಿದೆ. ಅವರ 23ನೇ ವಯಸ್ಸಿಗೆ 10ಲಕ್ಷ ರೂ.ಗಳ ಇಡಿಗಂಟನ್ನು ಒದಗಿಸಲು ಕ್ರಮ ಕೈಗೊಂಡಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ರುದ್ರೇಗೌಡರು, ಶಾಸಕ ಕೆ.ಬಿ. ಅಶೋಕನಾಯ್ಕ, ಮೇಯರ್‌ ಸುನಿತಾ ಅಣ್ಣಪ್ಪ, ಜಿಲ್ಲಾಧಿಕಾರಿ ಡಾ| ಆರ್.ಸೆಲ್ವಮಣಿ, ಅಪರ ಜಿಲ್ಲಾ ಧಿಕಾರಿ ಡಾ| ನಾಗೇಂದ್ರ ಎಫ್‌.ಹೊನ್ನಳ್ಳಿ, ಮಹಿಳಾ ಮತ್ತು ಮಕ್ಕಳ ಅವೃದ್ಧಿ ಇಲಾಖೆಯ ಉಪ ನಿರ್ದೇಶಕ ಜಿ.ಜಿ. ಸುರೇಶ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಜೇಶ್‌ ಸುರಗೀಹಳ್ಳಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಕುಮಾರ್‌, ಪಪೂ ಶಿಕ್ಷಣ ಇಲಾಖೆಯ ಉಪನಿದೇಶಕ ನಾಗರಾಜ ಕಾಗಲ್ಕರ್‌, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next