Advertisement
“ಬಜಾರ್’ ಚಿತ್ರ ನೋಡಿ ಹೊರಬಂದಾಗ ನಿಮಗೆ ಹಾಡು, ಸಂಭಾಷಣೆಗಳಿಗಿಂತ ಹೆಚ್ಚಾಗಿ ಮಚ್ಚಿನೇಟಿನ ಸದ್ದುಗಳೇ ಗುಂಯ್‌ಗಾಡುತ್ತಿರುತ್ತದೆ. ಆ ಮಟ್ಟಿಗೆ ಸುನಿ ಬದಲಾಗಿದ್ದಾರೆ ಮತ್ತು ಹೊಸ ಜಾನರ್‌ಗೆ ಒಗ್ಗಿಕೊಂಡಿದ್ದಾರೆ. ಹಾಗಾಗಿ, ಆ್ಯಕ್ಷನ್ ಬಜಾರ್‌ಗೆ ಸುನಿ ಬಂದಿದ್ದಾರೆಂದರೆ ತಪ್ಪಾಗಲಾರದು. ಈ ಚಿತ್ರದಲ್ಲಿ ಸುನಿಗೆ ಮುಖ್ಯವಾಗಿ ಎರಡು ರೀತಿಯ ಸವಾಲು ಎದುರಾಗಿದೆ. ಮೊದಲನೇಯದಾಗಿ ಏಕಾಏಕಿ ಆ್ಯಕ್ಷನ್ ಸಿನಿಮಾ ನಿರ್ದೇಶನಕ್ಕಿಳಿದು, ಅದನ್ನು ಸಮರ್ಥವಾಗಿ ನಿರ್ವಹಿಸುವುದು ಒಂದಾದರೆ, ಎರಡನೇಯದಾಗಿ ಹೊಸಬನ ಆ್ಯಕ್ಷನ್ ಹೀರೋ ಆಗಿ ಪ್ರೇಕ್ಷಕರಿಗೆ ಮೆಚ್ಚುವಂತೆ ತೋರಿಸುವುದು.
Related Articles
Advertisement
ನಿರ್ದೇಶಕ ಸುನಿಗೆ ಆ್ಯಕ್ಷನ್ ಸಿನಿಮಾ ಹೊಸದಾಗಿದ್ದರಿಂದ ರೌಡಿಸಂ ಸಿನಿಮಾಗಳಲ್ಲಿನ ಒಂದಷ್ಟು ಸಿದ್ಧಸೂತ್ರಗಳನ್ನು ಪಾಲಿಸಿದ್ದಾರೆ. ಒಬ್ಬನ ಬೆನ್ನಿಗೆ ಮತ್ತೂಬ್ಬ ಸ್ಕೆಚ್, ಜೊತೆಯಲ್ಲಿದ್ದೇ ನಂಬಿಕೆ ದ್ರೋಹ … ಈ ತರಹದ ಅಂಶಗಳೊಂದಿಗೆ ಸಿನಿಮಾ ಸಾಗುತ್ತದೆ. ಚಿತ್ರದಲ್ಲಿ ತುಂಬಾ ಹೊಸದಾಗಿ ಕಾಣುವ ಅಂಶವೆಂದರೆ ಅದು ಪಾರಿವಾಳ ರೇಸ್. ಅಲ್ಲಿನ ಭಾಷೆ, ಅದರ ವಿಧಾನ, ಅದರ ಹಿಂದಿನ ಜಿದ್ದು … ಈ ಅಂಶಗಳನ್ನು ಸೂಕ್ಷ್ಮವಾಗಿ ತೋರಿಸಲು ಪ್ರಯತ್ನಿಸಿದ್ದಾರೆ ಸುನಿ.
ನಾಯಕ ಧನ್ವೀರ್ ಮೊದಲ ಚಿತ್ರದಲ್ಲಿ ಭರವಸೆ ಮೂಡಿಸಿದ್ದಾರೆ. ಅದರಲ್ಲೂ ಆ್ಯಕ್ಷನ್ ಹೀರೋ ಆಗಿ ನೆಲೆ ನಿಲ್ಲುವ ಲಕ್ಷಣಗಳು ಕಾಣುತ್ತಿವೆ. ಅದಕ್ಕೆ ಪೂರಕವಾಗಿ ಅವರ ಬಾಡಿ, ಮ್ಯಾನರೀಸಂ ಕೂಡಾ ಇದೆ. ಅದನ್ನು ಮೊದಲ ಚಿತ್ರದಲ್ಲಿ ಚೆನ್ನಾಗಿ ಬಳಸಿಕೊಂಡಿದ್ದಾರೆ ಧನ್ವೀರ್. ಆದರೆ, ಲವ್, ಸೆಂಟಿಮೆಂಟ್ ದೃಶ್ಯಗಳಲ್ಲಿ ಇನ್ನಷ್ಟು ಪಳಗಬೇಕಿದೆ. ನಾಯಕಿ ಅದಿತಿ ಪ್ರಭುದೇವಗೆ ಇಲ್ಲಿ ಹೇಳಿಕೊಳ್ಳುವಂತಹ ದೊಡ್ಡ ಅವಕಾಶವೇನೂ ಇಲ್ಲ. ಇದ್ದಷ್ಟು ಹೊತ್ತು ಲವಲವಿಕೆಯಿಂದ ನಟಿಸಿದ್ದಾರೆ. ಉಳಿದಂತೆ ಶರತ್ ಲೋಹಿತಾಶ್ವ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರವಿ ಬಸ್ರೂರು ಸಂಗೀತದ ಎರಡು ಹಾಡುಗಳು ಇಷ್ಟವಾಗುತ್ತವೆ.
ಚಿತ್ರ: ಬಜಾರ್ನಿರ್ಮಾಣ: ತಿಮ್ಮೇಗೌಡ
ನಿರ್ದೇಶನ: ಸುನಿ
ತಾರಾಗಣ: ಧನ್ವೀರ್, ಅದಿತಿ, ಶರತ್ ಲೋಹಿತಾಶ್ವ ಮತ್ತಿತರರು. * ರವಿಪ್ರಕಾಶ್ ರೈ