ಹೊಸಬರ ಸಿನಿಮಾ ಸಾಲಿಗೆ “ಬದ್ರಿ ವರ್ಸಸ್ ಮಧುಮತಿ’ ಸೇರಿದೆ. ಈ ಚಿತ್ರಕ್ಕೆ ಪ್ರತಾಪವನ್ ಹೀರೋ. ಅವರಿಗೆ ಆಕಾಂಕ್ಷಾ ನಾಯಕಿ. ಇನ್ನು, ಈ ಚಿತ್ರವನ್ನು ಶಂಕರ್ ನಾರಾಯಣ್ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಚಿತ್ರ ಈಗಾಗಲೇ ಪೂರ್ಣಗೊಂಡಿದ್ದು, ಡಿ.26 ಕ್ಕೆ ಟ್ರೇಲರ್ ಬಿಡುಗಡೆ ಮಾಡಿ, ಆ ಬಳಿಕ ಹಾಡು ಹೊರತಂದು ಜನವರಿ ಹೊತ್ತಿಗೆ ಚಿತ್ರವನ್ನು ಪ್ರೇಕ್ಷಕರ ಎದುರು ತರುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ.
ಇದೇ ಮೊದಲ ಸಲ ಪತ್ರಕರ್ತರ ಎದುರು ಮಾತುಕತೆಗೆ ಕುಳಿತುಕೊಂಡಿದ್ದ ಚಿತ್ರತಂಡ, ತುಂಬಾ ಖುಷಿಯಲ್ಲಿತ್ತು. ನಾಯಕ ಪ್ರತಾಪವನ್ ಮಾತಿಗೆ ನಿಂತರು. “ನಾಯಕನಾಗಿ ಸಾಬೀತುಪಡಿಸೋಕೆ ಈ ಕಥೆ ಬೇಕೆನಿಸಿತು. ಹಾಗಾಗಿ ಈ ಚಿತ್ರ ಆಯ್ಕೆ ಮಾಡಿಕೊಂಡೆ. ಮೊದ ಮೊದಲು ಚಿಕ್ಕ ಬಜೆಟ್‌ನಲ್ಲೇ ಚಿತ್ರ ಮಾಡಬಹುದು ಅಂದುಕೊಂಡು ಶುರುಮಾಡಿದೆವು. ಆದರೆ, ಕಥೆ ದೊಡ್ಡದಾಗುತ್ತಾ ಹೋಯ್ತು. ಬಜೆಟ್ ಕೂಡ ದೊಡ್ಡದಾಯ್ತು.
ಒಂದು ಫೈಟ್‌ಗೆ ಮೂರ್‍ನಾಲ್ಕು ಫೈಟರ್ ಮತ್ತೆ ಒಂದು ಬೈಕ್ ಸಾಕು ಅಂತ ಸ್ಟಂಟ್ ಮಾಸ್ಟರ್ ಹೇಳಿದ್ದರು. ಆದರೆ, ಫೈಟ್ ಶುರುವಿಗೆ ಮುನ್ನ, 30 ಫೈಟರ್, 15 ಬೈಕ್ ಬೇಕು ಅಂತ ಹೇಳಿಬಿಟ್ಟರು. ಇನ್ನೇನು ಮಾಡೋಕ್ಕಾಗುತ್ತೆ ಅಂತ, ಮಾಸ್ಟರ್ ಹೇಳಿದ್ದನ್ನು ಮಾಡಿದೆವು. ಆಮೇಲೆ ಗೊತ್ತಾಯ್ತು, ಸ್ಕ್ರೀನ್ ಮೇಲೆ ಅದರ ಪ್ರಭಾವ ಹೇಗಿತ್ತು ಅನ್ನೋದು. ಎಡಿಟಿಂಗ್ ಮಾಡಿ ನೋಡಿದ ಮೇಲೆ, ಇದೊಂದು ಒಳ್ಳೆಯ ಚಿತ್ರವಾಗುತ್ತದೆ ಎಂಬ ನಂಬಿಕೆ ಬಂತು’ ಎಂದು ಹೇಳುತ್ತಾ ಹೋದರು ಪ್ರತಾಪವನ್.
ಇನ್ನು ಸಿನಿಮಾ ಕಥೆ ಬಗ್ಗೆ ಹೇಳಿಕೊಂಡ ಪ್ರತಾಪವನ್, “ಇದೊಂದು ಯೋಧನ ಕಥೆ. ದೇಶಕ್ಕೆ ಪ್ರಾಣ ಕೊಡುವ ಯೋಧ ಅವನು. ಕುಟುಂಬಕ್ಕಾಗಿ ಅವನು ತನ್ನ ಪ್ರೀತಿಯನ್ನೇ ತ್ಯಾಗ ಮಾಡುತ್ತಾನೆ. ಆದರೆ, ಯಾಕೆ ಮಾಡುತ್ತಾನೆ. ಆ ಸಂದರ್ಭ ಎಂಥದ್ದು ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಇಡೀ ಚಿತ್ರದಲ್ಲಿ ಲವ್‌ಸ್ಟೋರಿ ಜೊತೆಗೊಂದು ದೇಶಕ್ಕೆ ಸಂದೇಶ ಸಾರುವ ಒಳ್ಳೆಯ ಅಂಶಗಳಿವೆ. ಇನ್ನು, ಚಿತ್ರದಲ್ಲಿ ನಾಲ್ಕು ಪೈಟ್‌ಗಳಿವೆ.
ಪಾಕಿಸ್ತಾನ ಗಡಿಗೆ ಹೋಗಿ, ಅಲ್ಲಿ ಎದುರಾಳಿಗಳ ಜೊತೆ ಫೈಟ್ ಮಾಡುವ ಚಿತ್ರಣವೂ ಇಲ್ಲಿದೆ. ಹಾಗಂತ, ಪಾಕಿಸ್ತಾನಕ್ಕೆ ಹೋಗಿ ಚಿತ್ರೀಕರಣ ಮಾಡಿಲ್ಲ. ಕಥೆಯಲ್ಲಿ ನಾಯಕ ಪಾಕ್ ಗಡಿಗೆ ಹೋಗಿ ಹೊಡೆದಾಡುವ ದೃಶ್ಯಗಳಿವೆ’ ಎಂದಷ್ಟೇ ಹೇಳಿದರು. ನಿರ್ದೇಶಕ ಶಂಕರ್ ನಾರಾಯಣ್ ರೆಡ್ಡಿ ಹೆಚ್ಚು ಮಾತನಾಡಲಿಲ್ಲ. ಯಾಕೆಂದರೆ, ಭಾಷೆಯ ತೊಡಕು ಎಂಬ ಉತ್ತರ ಕೊಟ್ಟರು.
ಆದರೂ, ಕಥೆಯ ಒನ್‌ಲೈನ್ ಹೇಳಿ ಅಂತ ಪ್ರಶ್ನೆ ತೂರಿಬಂದಿದ್ದಕ್ಕೆ, “ಇದು ತೆಲುಗು ಸಿನಿಮಾ ರೇಂಜ್‌ನಲ್ಲಿರುತ್ತೆ’ ಅಂದರು. ಅವರ ಮಾತಿಗೆ, ಇದು ಕನ್ನಡ ಸಿನಿಮಾ ಅಲ್ವಾ? ಎಂಬ ಪತ್ರಕರ್ತರ ಪ್ರಶ್ನೆಗೆ, “ನಿಜ. ಆದರೆ, ತೆಲುಗು ಸಿನಿಮಾಗಳಲ್ಲಿರುವಂತೆ ಇಲ್ಲೂ ಭರ್ಜರಿ ಫೈಟ್ ಮತ್ತು ಮನರಂಜನೆ ಹೆಚ್ಚಾಗಿರುತ್ತೆ. ಚಿತ್ರಕಥೆ ಹೊಸದಾಗಿರಲಿದೆ’ ಎಂದರು ನಿರ್ದೇಶಕರು.
ಎಲ್ವಿನ್ ಜೋಶ್ವ ಸಂಗೀತ ನೀಡಿದ್ದಾರೆ. ಅವರಿಗೆ ಇದು 10 ನೇ ಸಿನಿಮಾ ಎಂಬುದು ವಿಶೇಷ. ಮೂರು ಹಾಡುಗಳಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಇದೆ. ಅರ್ಮಾನ್ ಮಲ್ಲಿಕ್, ವಿಜಯ್ ಯೇಸುದಾಸ್,ಕಾರ್ತಿಕ್ ಹಾಡಿದ್ದಾರೆ. ಲವ್ ಮೆಲೋಡಿ ಜೊತೆಗೆ ವಿರಹ ಗೀತೆಯೂ ಇದೆ ಎಂದು ವಿವರ ಕೊಟ್ಟರು ಎಲ್ವಿನ್ ಜೋಶ್ವ. ಚಿತ್ರದಲ್ಲಿ ಗಿರೀಶ್ ಜತ್ತಿ, ಜಹಾಂಗೀರ್ ಇತರರು ನಟಿಸಿದ್ದಾರೆ.