Advertisement

ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುವ ವಾಹನಗಳ ವಿರುದ್ಧ ಕ್ರಮ

09:28 PM Dec 23, 2019 | Team Udayavani |

ಚಾಮರಾಜನಗರ: ಜಿಲ್ಲೆಯಲ್ಲಿ ಆಟೋ, ಟಾಟಾ ಮ್ಯಾಜಿಕ್‌, ಟಾಟಾ ಏಸ್‌ನಂತಹ ವಾಹನಗಳಲ್ಲಿ ನಿಗದಿತ ಆಸನ ಸಾಮರ್ಥ್ಯಕ್ಕಿಂತ ಹೆಚ್ಚು ಆಸನ ಅಳವಡಿಸಿ, ಪ್ರಯಾಣಿಕರನ್ನು ಕರೆದೊಯ್ಯುವುದರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಬಿ ಬಿ ಕಾವೇರಿ ಅಧ್ಯಕ್ಷತೆಯಲ್ಲಿ ನಡೆದ ಸಾರಿಗೆ ಪ್ರಾಧಿಕಾರ (ಆರ್‌ಟಿಎ) ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಶಾಲಾ ವಾಹನಗಳಲ್ಲಿ ವಾಹನದ ಸಾಮಾರ್ಥ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಕರೆ ತರುವ ಬಗ್ಗೆಯೂ ಕಟ್ಟುನಿಟ್ಟಾಗಿ ಕಡಿವಾಣ ಹಾಕಲು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.

ತೊಂದರೆಗೆ ಅವಕಾಶ ಬೇಡ: ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಮಾತನಾಡಿ, ಸಾಮರ್ಥ್ಯಕ್ಕಿಂತ ಹೆಚ್ಚು ಆಸನಗಳನ್ನು ಅಳವಡಿಸಿಕೊಂಡಿರುವ ವಾಹನಗಳ ತಪಾಸಣೆಯನ್ನು ತೀವ್ರಗೊಳಿಸಬೇಕು. ನಿಯಮ ಮೀರಿ ಆಸನಗಳನ್ನು ಅಳವಡಿಸಿ ಪ್ರಯಾಣಿಕರನ್ನು ಕರೆದೊಯ್ಯುತ್ತಿರುವ ವಾಹನಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ಸಂಚಾರಿ ಪೊಲೀಸರು ಕ್ರಮ ವಹಿಸಬೇಕು.

ಶಾಲಾ ವಾಹನಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ವಾಹನಗಳ ತಪಾಸಣೆ ಮಾಡಬೇಕು. ಯಾವುದೇ ತೊಂದರೆಗೆ ಅವಕಾಶವಾಗಬಾರದು. ಶಾಲಾ ಶಿಕ್ಷಕರು ಸಹ ಈ ಬಗ್ಗೆ ಪರಿಶೀಲಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದರು.

ಖಾಸಗಿ ಬಸ್‌ ಮಾಲೀಕರಿಗೆ ನಷ್ಟ: ಈ ವೇಳೆ ಸಭೆಯಲ್ಲಿ ಹಾಜರಿದ್ದ ಖಾಸಗಿ ಬಸ್‌ ಮಾಲೀಕರ ಸಂಘದ ಪ್ರತಿನಿಧಿಗಳು, ಗ್ರಾಮಾಂತರ ಪ್ರದೇಶದಿಂದ ಪಟ್ಟಣಕ್ಕೆ ಹಾಗೂ ಪಟ್ಟಣದಿಂದ ಗ್ರಾಮಾಂತರ ಪ್ರದೇಶಕ್ಕೆ ಟಾಟಾ ಏಸ್‌, ಮ್ಯಾಜಿಕ್‌, ಇತರೆ ಆಟೋಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿದೆ. ಅನುಮತಿ ಪಡೆಯದ ಇಂತಹ ವಾಹನಗಳ ಕಾರ್ಯಾಚರಣೆಯಿಂದ ಖಾಸಗಿ ಬಸ್‌ ಮಾಲೀಕರು ನಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಪೊಲೀಸ್‌ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

Advertisement

ಸುರಕ್ಷತಾ ಕ್ರಮ ಅನುಸರಿಸಿ: ಸಾರಿಗೆ ಪ್ರಾಧಿಕಾರದ ಸಭೆ ಬಳಿಕ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯೊಂದಿಗೆ ಬೆಂಗಳೂರು ಮಹಾಲೇಖಪಾಲರ ಆಡಿಟ್‌ ತಂಡದೊಂದಿಗೆ ಸಭೆ ನಡೆಸಲಾಯಿತು. ಈ ವೇಳೆ ಮಹಾಲೇಖಪಾಲರ ಆಡಿಟ್‌ ತಂಡದ ಹಿರಿಯ ಲೆಕ್ಕಪರಿಶೋಧನಾ ಅಧಿಕಾರಿ ಬಿ.ಎಸ್‌.ಶ್ರೀನಾಥ್‌ ಮಾತನಾಡಿ, ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆ ಸಂಬಂಧ ತಂಡವು ಹಲವು ಅಂಶಗಳನ್ನು ಗಮನಿಸಿದೆ. ಅಡ್ಡ ರಸ್ತೆಗಳು ಮುಖ್ಯರಸ್ತೆಗೆ ಸೇರ್ಪಡೆಯಾಗುವ ಸಂದರ್ಭದಲ್ಲಿ ಇನ್ನು ಹಲವು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕಿದೆ. ಸೂಚನಾ ಫ‌ಲಕಗಳು, ರಸ್ತೆ ಅಗಲೀಕರಣ, ಸ್ಪಷ್ಟವಾಗಿ ಗೋಚರಿಸುವಿಕೆ, ವಿದ್ಯುತ್‌ ಕಂಬಗಳ ಸ್ಥಳಾಂತರ, ರಸ್ತೆ ಬದಿಯಲ್ಲಿ ಸುರಕ್ಷತಾ ವ್ಯವಸ್ಥೆ ಖಾತರಿಪಡಿಸುವ ಕೆಲಸಗಳು ಆಗಬೇಕಿದೆ ಎಂಬುದನ್ನು ತಂಡವು ಗಮನಿಸಿದೆ ಎಂದರು.

ವ್ಯವಸ್ಥೆಗಳ ಬಗ್ಗೆ ಕಾಳಜಿ ವಹಿಸಿ: ಜಿಲ್ಲಾಧಿಕಾರಿಯವರು ಮಾತನಾಡಿ, ಆಡಿಟ್‌ ತಂಡವು ಗಮನಿಸಿ ಪ್ರಸ್ತಾಪಿಸಿರುವ ರಸ್ತೆ ಸುರಕ್ಷತಾ ಕ್ರಮಗಳ ಪಾಲನೆಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು. ರಾಜ್ಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಯವುದೇ ತೊಂದರೆಗೆ ಅವಕಾಶವಾಗದಂತೆ ಸುರಕ್ಷತಾ ವ್ಯವಸ್ಥೆಗಳ ಬಗ್ಗೆ ಕಾಳಜಿ ವಹಿಸಿ ಅನುಷ್ಠಾನ ಮಾಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣನವರ್‌, ಹಿರಿಯ ಲೆಕ್ಕ ಪರಿಶೋಧನ ಅಧಿಕಾರಿಗಳಾದ ಹರೀಶ್‌, ದತ್ತ, ಸಾರಿಗೆ ಅಧಿಕಾರಿ ಬಿ. ಶಿವಕುಮಾರ್‌, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಶ್ರೀಧರ್‌, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಸುರೇಂದ್ರ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್‌, ಡಿಡಿಪಿಐ ಮಂಜುನಾಥ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next