ದಾವಣಗೆರೆ: ಸಾರ್ವಜನಿಕರ ಸಮಸ್ಯೆ, ಕುಂದುಕೊರತೆ, ಅಹವಾಲುಗಳಿಗೆ ಸ್ಪಂದಿಸದೇ ಇರುವ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಬಹುಜನ ಸಮಾಜ ಪಾರ್ಟಿ ಜಿಲ್ಲಾ ಅಧ್ಯಕ್ಷ ಡಿ. ಹನುಮಂತಪ್ಪ ಒತ್ತಾಯಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಾಭಿವೃದ್ಧಿ ಕೋಶ, ಭೂಸೇನಾ ನಿಗಮ, ಯುವಜನ ಸೇವಾ ಮತ್ತು ಕ್ರೀಡಾ, ಕಾರ್ಮಿಕ, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆಯಲ್ಲಿನ ಕೆಲ ಅಧಿಕಾರಿಗಳು ಸ್ವಯಂ ಜಿಲ್ಲಾಧಿಕಾರಿ ಅವರೇ ಆದೇಶ ನೀಡಿದರೂ ಪಾಲನೆ ಮಾಡದ ಅನೇಕ ಉದಾಹರಣೆ ಇವೆ. ಜಿಲ್ಲಾಧಿಕಾರಿಗಳು ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಹರಿಹರ ನಗರಸಭೆ ವ್ಯಾಪ್ತಿಯಲ್ಲಿ ನೂರಾರು ಮಳಿಗೆಗಳನ್ನು ಅಧಿಕೃತವಾಗಿ ಪರಭಾರೆ ಮಾಡಲಾಗಿದೆ. ನಗರಸಭೆ ಸದಸ್ಯರೊಬ್ಬರು ಐದು ಮಳಿಗೆ ಪಡೆದುಕೊಂಡಿದ್ದಾರೆ. ಹಲವಾರು ವರ್ಷಗಳಿಂದ ಮಳಿಗೆಯಲ್ಲಿ ವ್ಯಾಪಾರ ನಡೆಸುತ್ತಿರುವರಿಗೆ ನೀಡುತ್ತಿರುವ ಕಿರುಕುಳದ ಬಗ್ಗೆ ಸಂಬಂಧಿತ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳೇ ಸೂಚನೆ ನೀಡಿದರೂ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ತಮಗೆ ಬೇಕಾದವರ ಪರವಾಗಿ ಕೆಲಸ ಮಾಡಿದ್ದಾರೆ. ಹಲವಾರು ವರ್ಷಗಳಿಂದ ಇದ್ದವರ ಹೆಸರಲ್ಲೇ ಮಳಿಗೆ ಹಂಚಿಕೆ ಮಾಡಿ, ಮುಂದುವರೆಸಬೇಕು ಎಂದು ಒತ್ತಾಯಿಸಿದರು.
1.20 ಕೋಟಿ ಅನುದಾನದಲ್ಲಿ ಭೂ ಸೇನಾ ನಿಗಮದಿಂದ ಹರಿಜನ ರುದ್ರಭೂಮಿ ಅಭಿವೃದ್ಧಿ ನಾಲ್ಕು ವರ್ಷದಿಂದ ನಡೆಯುತ್ತಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ. ನಡೆದಿರುವುದು ಸಹ ಕಳಪೆ ಗುಣಮಟ್ಟದ ಕಾಮಗಾರಿ ಎಂದು ದೂರಿದ ಅವರು ಸಂಬಂಧಿತ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು 15ದಿನಗಳಲ್ಲಿ ಕ್ರಮ ತೆಗೆದು ಕೊಳ್ಳಬೇಕು. ಇಲ್ಲವಾದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವವರೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ನಿರಂತರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ರಾಜ್ಯ ಕಾರ್ಯದರ್ಶಿ ಎಚ್. ಮಲ್ಲೇಶ್ ಮಾತನಾಡಿ, ರಾಜ್ಯದಲ್ಲಿ ಅವ್ಯಾಹತವಾಗಿರುವ ನಕಲಿ ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಐಡಿಜಿಪಿ ಡಾ| ರವೀಂದ್ರನಾಥ್ ಸೂಕ್ತ ಕ್ರಮ ಕೈಗೊಂಡಿದ್ದರು. 89 ಅಧಿಕಾರಿಗಳ ವಜಾ, 1400ಕ್ಕೂ ಹೆಚ್ಚು ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದ ಎರಡೇ ದಿನಗಳಲ್ಲಿ ವರ್ಗಾವಣೆ ಮಾಡಿರುವ ಸರ್ಕಾರದ ಕ್ರಮ ಅತ್ಯಂತ ಖಂಡನೀಯ. ಸರ್ಕಾರ ಪರಿಶಿಷ್ಟರ ಜಾತಿ ಪ್ರಮಾಣ ಪತ್ರ ದುರುಪಯೋಗ ಪಡಿಸಿಕೊಂಡವರ ಪರ ಇದೆ ಎಂದು ದೂರಿದ ಅವರು ಕೂಡಲೇ ಡಾ| ರವೀಂದ್ರನಾಥ್ ಅವರ ವರ್ಗಾವಣೆ ರದ್ಧುಪಡಿಸಿ, ಸಿಆರ್‌ಸಿ ಸೆಲ್‌ನಲ್ಲೇ ಮುಂದುವರೆಸಬೇಕು ಎಂದು ಒತ್ತಾಯಿಸಿದರು. ಯಶೋಧಾ ಪ್ರಕಾಶ್ ಸುದ್ದಿಗೋಷ್ಠಿಯಲ್ಲಿದ್ದರು.