ತೀರ್ಥಹಳ್ಳಿ : ಮಲೆನಾಡಿನಲ್ಲಿ ಸೋರುವುದು ಸಹಜವಾಗಿರುತ್ತದೆ. ಆದರೆ ಕಳಪೆ ಕಾಮಗಾರಿಗೆ ಸುಮ್ಮನಿರುತ್ತೀನಿ ಎಂದು ನಾನು ಯಾವತ್ತು ಹೇಳಿಲ್ಲ ಎಂದು ಶಿಕ್ಷಣ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕುರುವಳ್ಳಿ-ಬಾಳೆಬೈಲು ಬೈಪಾಸ್ ರಸ್ತೆ ತಡೆಗೋಡೆ ಕುಸಿತ , ತಾಲೂಕು ಪಂಚಾಯತ್ ಕಟ್ಟಡ ಇರಲಿ ಅದರ ರಿಪೋರ್ಟ್ ತರಿಸಲು ಜಿಲ್ಲಾಧಿಕಾರಿಗಳ ಬಳಿ ಹೇಳಿದ್ದೇನೆ. ಕಳಪೆ ಕಾಮಗಾರಿ ಯಾರದ್ದೇ ಇದ್ದರು ಕೂಡ ಯಾರೇ ಮಾಡಿದ್ದರು ಕೂಡ, ಯಾರ ಸರ್ಕಾರದ್ದೆ ಆಗಿದ್ದರೂ ಕೂಡ ಸಾರ್ವಜನಿಕರ ತೆರಿಗೆ ಹಣ ದುರುಪಯೋಗ ಮಾಡಿ ಕಳಪೆ ಕಾಮಗಾರಿ ಮಾಡಿದ್ದರೆ ಅದಕ್ಕೆ ಏನು ಮಾಡಬೇಕೊ ಮಾಡುತ್ತೇವೆ ಎಂದರು.
ಯಾರೇ ಆಗಿರಲಿ ಬೆಳಗ್ಗೆ ಮೇಕಪ್ ಮಾಡಿದರೆ ರಾತ್ರಿ ತೆಗೆಯಲೇ ಬೇಕು, ಪರ್ಮನೆಂಟ್ ಇಟ್ಟುಕೊಂಡು ಓಡಾಡಲು ಆಗುವುದಿಲ್ಲ, ನಮ್ಮ ಕೆಲಸ ನಾವು ಮಾಡುತ್ತೇವೆ, ನಮ್ಮ ಹಾಗೂ ನಿಮ್ಮ (ಪತ್ರಕರ್ತರು ) ಕಂಡರೆ ಹೊಟ್ಟೆಕಿಚ್ಚು ಇರಬೇಕು ಸ್ವಲ್ಪ ಹುಷಾರಾಗಿರಿ, ಬರೆಯಬೇಕಾದರೆ ಅವರ ಬಗ್ಗೆ ಬರಿಯಬೇಕಾ? ಅಥವಾ ನಮ್ಮ ಬಗ್ಗೆ ಬರಿಯಬೇಕಾ ಎಂದು ಯೋಚಿಸಿ ಬರೆಯಿರಿ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಇನ್ನು ತೀರ್ಥಹಳ್ಳಿ ತಾಲೂಕಿನಲ್ಲಿ ಕೆಲವೊಂದು ಮನೆಗಳು ಹಾನಿಯಾಗಿದ್ದಾವೆ ಹೊರತು ಬೇರೆ ಅನಾಹುತ ಆಗಿಲ್ಲ. ಹಾಗೇನಾದರು ಆದರೆ ಇನ್ನು ಮುಂದೆ ಜಿಲ್ಲಾಧಿಕಾರಿಗಳು ನೋಡಿಕೊಳ್ಳುತ್ತಾರೆ. ಮನೆ ಹಾನಿಯಾದವರಿಗೆ 5 ಲಕ್ಷ ಹಣ ಸರ್ಕಾರ ಕೊಡುತ್ತದೆ. ಆದರೆ ಅವರಿಗೆ ಹಕ್ಕುಪತ್ರ ಇರಬೇಕು. ಹಕ್ಕುಪತ್ರ ಇಲ್ಲ ಎಂದರೆ 1 ಲಕ್ಷ ಹಣ ಸಿಗುತ್ತದೆ. ಹಕ್ಕುಪತ್ರ ಇಲ್ಲದವರಿಗೂ ಹಣ ಕೊಡುವ ಕೆಲಸ ಮಾಡಲು ಮನವಿ ಮಾಡುತ್ತೇವೆ. ಇಲ್ಲಿ ಅನಧಿಕೃತ ಮನೆಗಳು ಜಾಸ್ತಿ ಇದ್ದಾವೆ ಕಟ್ಟಿಕೊಂಡವರಿಗೆ ಏನು ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದೇವೆ ಈ ವಿಚಾರವಾಗಿ ಮುಖ್ಯಮಂತ್ರಿಗಳ ಬಳಿ ಮಾತನಾಡುತ್ತೇನೆ ಎಂದರು.
ಜಿಲ್ಲೆಯಲ್ಲಿ ಇನ್ನು ಮೂರು ದಿನ ಬಾರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳು ಎಲ್ಲಾ ಕಡೆ ಹೊಗಲಿದ್ದಾರೆ. ಶಾಲಾ ಕಟ್ಟಡ ಕೂಡ ಕೆಲವು ಕಡೆ ಬಿದ್ದಿವೆ. ಈಗಾಗಲೇ ಜಿಲ್ಲೆಯಲ್ಲಿ ಮಳೆಯಿಂದ ಮೂರು ಸಾವು ಆಗಿದೆ. ಜನರು ಜವಾಬ್ದಾರಿಯಿಂದ ಮಕ್ಕಳ ಬಗ್ಗೆ ಜಾಗ್ರತೆ ವಹಿಸಬೇಕು. ಕಳೆದ ಬಾರಿ ಆಗಸ್ಟ್ ನಲ್ಲಿ ಸ್ವಲ್ಪ ಮಟ್ಟಿಗೆ ಮಳೆ ಆಗಿತ್ತು. ಈ ಬಾರಿ ಸ್ವಲ್ಪ ಜಾಸ್ತಿ ಮಳೆಯಾಗುತ್ತಿದೆ. ಕುಸಿತ ಆಗಿದ್ದನ್ನು ವೀಕ್ಷಣೆ ಮಾಡಿದ್ದೇವೆ. ಸರಿಪಡಿಸುವ ಕೆಲಸವೂ ಆಗುತ್ತಿದೆ ಎಂದರು.
ತೀರ್ಥಹಳ್ಳಿಯಲ್ಲಿ ಬಿಇಒ ಅವರಿಗೆ ವಾಹನ ಇಲ್ಲ ಎಂಬ ಪತ್ರಕರ್ತರ ಪ್ರೆಶ್ನೆಗೆ ಹಲವು ಕಡೆ ಈ ಸಮಸ್ಯೆ ಇದೆ. ಅದನ್ನು ಬಗೆಹರಿಸುವ ಕೆಲಸ ಮಾಡುತ್ತಿದ್ದೇನೆ. ಅದಕ್ಕೂ ಮೊದಲು ಶಾಲೆಗಳಿಗೆ ಶಿಕ್ಷಕರ ಅವಶ್ಯಕತೆ ಇದೆ. ಶಿಕ್ಷಣ ಬೇಕು ಎಂಬ ಕಾರಣಕ್ಕೆ ಅತಿಥಿ ಶಿಕ್ಷಕರನ್ನು ತಂದಿದ್ದೇವೆ.
ಅನುದಾನಿತ ಶಾಲೆಗೆ ಶಿಕ್ಷಕರ ಆಯ್ಕೆ ಆಗುತ್ತದೆ. ಹತ್ತು ಸಾವಿರ ಶಿಕ್ಷಕರ ಪಾಠ ಮಾಡಲಿದ್ದಾರೆ. ಶಿಕ್ಷಕರಿಗೆ ಒತ್ತು ಕೊಡುವ ಕೆಲಸ ಆಗುತ್ತಿದೆ. ಮಕ್ಕಳಿಗೆ ರಸ್ತೆಯಲ್ಲಿ ಪಾಠ ಮಾಡಿದರು ಶಿಕ್ಷಕರ ಅವಶ್ಯಕತೆ ಬಹಳ ಇದೆ ಅದನ್ನು ಸರಿಪಡಿಸುವ ಕೆಲಸ ಆಗುತ್ತಿದೆ. ಇನ್ನು ಪೌಷ್ಟಿಕತೆ ಬೇಕು ಎಂಬ ಕಾರಣಕ್ಕೆ ಮಕ್ಕಳಿಗೆ ಮೊಟ್ಟೆ ಹಾಲು ಕೊಡುವ ಕೆಲಸ ಆಗುತ್ತಿದೆ ಎಂದರು.