ಬೆಂಗಳೂರು: ಇಂದಿರಾನಗರ ಸುತ್ತಮುತ್ತಲ ಪ್ರದೇಶದಲ್ಲಿ ಪಬ್ ಮತ್ತು ಬಾರ್‌ಗಳಿಂದ ಉಂಟಾಗುತ್ತಿರುವ ಶಬ್ದ ಮಾಲಿನ್ಯ ತಡೆಗೆ ಸ್ಥಳೀಯರು ಮನವಿ ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದಾದರೆ ಪೊಲೀಸರ ಮೇಲೇ ಕ್ರಮ ಜರುಗಿಸಲಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಪಬ್‌ಗಳಿಂದ ಆಗುತ್ತಿರುವ ಶಬ್ಧಮಾಲಿನ್ಯ ತೊಂದರೆ ಬಗ್ಗೆ ಕ್ರಮವಹಿಸುವಂತೆ ಸಕ್ಷಮ ಪ್ರಾಧಿಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ಎ.ಎಸ್. ಓಕಾ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಗುರುವಾರ ವಿಚಾರಣೆ ನಡೆಸಿತು.
ವಸತಿ ಪ್ರದೇಶವಾಗಿರುವ ಇಂದಿರಾನಗರದಲ್ಲಿ ಅಬಕಾರಿ ಆಯುಕ್ತರು 80ಕ್ಕೂ ಅಧಿಕ ಪಬ್ ಮತ್ತು ಬಾರ್‌ಗಳಿಗೆ ಅನುಮತಿ ನೀಡಿದ್ದಾರೆ. ಇದರಿಂದಾಗಿ ಆ ಪ್ರದೇಶದಲ್ಲಿ ವ್ಯಾಪಕ ಶಬ್ಧ, ವಾಯು ಮಾಲಿನ್ಯ, ಪಾರ್ಕಿಂಗ್ ಸಮಸ್ಯೆ ಉಂಟಾಗುತ್ತಿದ್ದು, ಸಾರ್ವಜನಿಕರು ಜೀವನ ನಡೆಸುಲು ಕಷ್ಟವಾಗಿದೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.
ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರು ಸೇರಿ ಎಲ್ಲರಿಗೂ ಮನವಿ ಸಲ್ಲಿಸಿದ್ದು, ಯಾರೂ ಕ್ರಮ ಕೈಗೊಂಡಿಲ್ಲ. ರಾತ್ರಿ ಒಂದು ಗಂಟೆಯಾದರೂ ಶಬ್ದ ಮಾಲಿನ್ಯ ಆಗುತ್ತಲೇ ಇರುತ್ತದೆ. ಜತೆಗೆ, ಸಮಸ್ಯೆ ಪರಿಹಾರಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ನ್ಯಾಯಪೀಠ ಮಾರ್ಚ್‌ನಲ್ಲಿ ನೀಡಿದ್ದ ಆದೇಶ ಪಾಲನೆಯಾಗಿಲ್ಲ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಆದೇಶ ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಸ್ಥಳೀಯರು ನೀಡಿರುವ ಮನವಿ ಆಧರಿಸಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಶಬ್ದ ಮಾಲಿನ್ಯ ತಡೆಗೆ ಕ್ರಮ ಕೈಗೊಂಡಿಲ್ಲ ಎಂದಾದರೆ ಪೊಲೀಸರ ವಿರುದ್ಧವೇ ಕ್ರಮ ಜರುಸಗಿಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು.
ಇಂದಿರಾನಗರದಲ್ಲಿ ಎರಡು ಕಿ.ಮೀ ವ್ಯಾಪ್ತಿಯಲ್ಲಿರುವ ಪಬ್ ಮತ್ತು ಬಾರ್‌ಗಳಿಂದ ಆಗುತ್ತಿರುವ ಶಬ್ದ ಮಾಲಿನ್ಯ ಹಾಗೂ ತೊಂದರೆ ತಡೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು.