Advertisement

ನರೇಗಾ ನಿರ್ಲಕ್ಷಿಸುವ ಅಧಿಕಾರಿಗಳ ವಿರುದ್ಧ ಕ್ರಮ

09:13 PM Feb 11, 2020 | Lakshmi GovindaRaj |

ಮೈಸೂರು: ನರೇಗಾ ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರುವ ತಾಪಂ ಕಾರ್ಯನಿರ್ವಾಹಕ ಅಧಿಕಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಜಿಪಂ ಕೆಡಿಪಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಜಿಪಂ ಅಧ್ಯಕ್ಷೆ ಬಿ.ಸಿ.ಪರಿಮಳಾ ಶ್ಯಾಂ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ನರೇಗಾ ಯೋಜನೆ ಸಂಬಂಧ ಅನುಪಾಲನಾ ವರದಿ ಮೇಲೆ ವಿಸ್ತೃತ ಚರ್ಚೆ ನಡೆಯಿತು.

Advertisement

2019-20ನೇ ಸಾಲಿಗೆ ನರೇಗಾ ಯೋಜನೆಯಡಿ ಮಾನವ ದಿನಗಳ ಸೃಜನೆಯಲ್ಲಿ ಜಿಲ್ಲೆಯ ಏಳು ತಾಲೂಕುಗಳ ಪೈಕಿ ತಿ.ನರಸೀಪುರ ತಾಲೂಕಿನಲ್ಲಿ 4,78,923 ಮಾನವ ದಿನಗಳ ಸೃಜನೆಯ ಗುರಿಗೆ 3,42,956 ಮಾನವದಿನಗಳ ಸೃಜನೆ ಮಾಡುವುದರೊಂದಿಗೆ ಶೇ.71.61 ಸಾಧನೆ ಮಾಡಿದ್ದರೆ, ಕೆ.ಆರ್‌.ನಗರ ತಾಲೂಕಿನಲ್ಲಿ 3,82,871 ಮಾನವ ದಿನಗಳ ಸೃಜನೆಯ ಗುರಿಗೆ

2,67,965 ಮಾನವ ದಿನಗಳ ಸೃಜನೆ ಮಾಡುವುದರೊಂದಿಗೆ ಶೇ.69.99 ಸಾಧನೆ ಮಾಡಿದ್ದರೆ, ಮೈಸೂರು ತಾಲೂಕಿನಲ್ಲಿ 2,65,502 ಮಾನವ ದಿನಗಳ ಸೃಜನೆಯ ಗುರಿಗೆ 1,78,785 ಮಾನವ ದಿನಗಳ ಸೃಜನೆ ಮಾಡುವುದರೊಂದಿಗೆ ಶೇ.67.34 ಸಾಧನೆ ಮಾಡಿದ್ದರೆ, ಹುಣಸೂರು ತಾಲೂಕಿನಲ್ಲಿ 4,59,402 ಮಾನವ ದಿನಗಳ ಸೃಜನೆಯ ಗುರಿಗೆ 2,96,281 ಮಾನವ ದಿನಗಳ ಸೃಜನೆ ಮಾಡುವುದರೊಂದಿಗೆ ಶೇ.64.49 ಸಾಧನೆ ಮಾಡಲಾಗಿದೆ.

ಕಳಪೆ ಸಾಧನೆ: ನಂಜನಗೂಡು ತಾಲೂಕಿನಲ್ಲಿ 7,45,736 ಮಾನವ ದಿನಗಳ ಸೃಜನೆಯ ಗುರಿಗೆ 3,03,577 ಮಾನವ ದಿನಗಳ ಸೃಜನೆ ಮಾಡುವುದರೊಂದಿಗೆ ಕೇವಲ ಶೇ.40.71 ಸಾಧನೆ ಮಾಡಿದ್ದರೆ, ಎಚ್‌.ಡಿ.ಕೋಟೆ ತಾಲೂಕಿನಲ್ಲಿ 7,46,564 ಮಾನವ ದಿನಗಳ ಸೃಜನೆಯ ಗುರಿಗೆ 3,14,932 ಮಾನವ ದಿನಗಳ ಸೃಜನೆ ಮಾಡುವುದರೊಂದಿಗೆ ಶೇ.42.18 ಸಾಧನೆ ಮಾಡಿದ್ದರೆ, ಪಿರಿಯಾಪಟ್ಟಣ ತಾಲೂಕಿನಲ್ಲಿ 4,71,002 ಮಾನವ ದಿನಗಳ ಸೃಜನೆಯ ಗುರಿಗೆ 2,08,576 ಮಾನವ ದಿನಗಳ ಸೃಜನೆ ಮಾಡುವುದರೊಂದಿಗೆ ಶೇ.44.28 ಸಾಧನೆ ಮಾಡಲಾಗಿದೆ.

ಜಿಲ್ಲೆಯ ಏಳು ತಾಲೂಕುಗಳಲ್ಲಿ ಒಟ್ಟಾರೆ 35,50,000 ಮಾನವ ದಿನಗಳ ಸೃಜನೆ ಗುರಿಗೆ 19,13,072 ಮಾನವ ದಿನಗಳ ಸೃಜನೆ ಮಾಡಿ, ಶೇ.53.89 ಸಾಧನೆ ಮಾಡಲಾಗಿದೆ. ನರೇಗಾ ಯೋಜನೆಯಡಿ ಕಾಮಗಾರಿಯನ್ನು ಕೈಗೆತ್ತಿಕೊಂಡು ಜನರಿಗೆ ಉದ್ಯೋಗ ಒದಗಿಸಿಕೊಡಲು ಯಾವುದೇ ಮಿತಿ ಇಲ್ಲದಿದ್ದರೂ ಅಧಿಕಾರಿಗಳು ಯೋಜನೆಯ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರಿರುವುದಕ್ಕೆ ಸ್ಥಾಯಿಸಮಿತಿ ಅಧ್ಯಕ್ಷರುಗಳಾದ ವೆಂಕಟಸ್ವಾಮಿ, ಅಚ್ಯುತಾನಂದ, ಸಾ.ರಾ.ನಂದೀಶ್‌ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Advertisement

ನೋಟಿಸ್‌ ಬಳಿಕ ಕ್ರಮ: ಈ ಬಗ್ಗೆ ಮಾತನಾಡಿದ ಜಿಪಂ ಸಿಇಒ ಕೆ.ಜ್ಯೋತಿ ಅವರು, ಮುಂದಿನವಾರ ತಾಲೂಕುವಾರು ನರೇಗಾ ಯೋಜನೆಯ ಪ್ರಗತಿಪರಿಶೀಲನೆ ಮಾಡಿ, ನಿರ್ಲಕ್ಷ್ಯತೋರುವ ಇಒ, ಪಿಡಿಒ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ 3 ಬಾರಿ ನೋಟಿಸ್‌ ಕೊಟ್ಟ ಮೇಲೂ ಸರಿಪಡಿಸಿಕೊಳ್ಳದಿದ್ದರೆ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೊರೊನಾ ವೈರಸ್‌ ಪ್ರತಿಧ್ವನಿ: ಚೀನಾದಲ್ಲಿ ತಲ್ಲಣ ಮೂಡಿಸಿರುವ ಕೊರೊನಾ ವೈರಸ್‌ ಸೋಂಕು ಕೇರಳದವರಿಗೂ ತಗುಲಿದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಈ ಬಗ್ಗೆ ಹೆಚ್ಚಿನ ನಿಗಾವಹಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ತಿಳಿಸಲಾಯಿತು. ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಆರ್‌.ವೆಂಕಟೇಶ್‌, ಕೊರೊನಾ ವೈರಸ್‌ ಬಗ್ಗೆ ನಮ್ಮಲ್ಲಿ ಯಾವುದೇ ಆತಂಕವಿಲ್ಲ.

ಮೈಸೂರಿನ ಪ್ರವಾಸಿ ತಾಣಗಳು ಹಾಗೂ ಜನನಿಬಿಡ ಸ್ಥಳಗಳಲ್ಲಿ ಆರೋಗ್ಯ ಇಲಾಖೆಯ ತಂಡದ ಮೂಲಕ ಅರಿವು ಮೂಡಿಸಲಾಗುತ್ತಿದೆ. ಕೇರಳಕ್ಕೆ ಸಂಪರ್ಕ ಕಲ್ಪಿಸುವ ಎಚ್‌.ಡಿ.ಕೋಟೆ ತಾಲೂಕಿನ ಬಾವಲಿ ಗೇಟ್‌ನಲ್ಲಿ ತಪಾಸಣೆಗಾಗಿ ತಂಡವನ್ನು ನಿಯೋಜಿಸಲಾಗಿದೆ. ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರನ್ನು ತಪಾಸಣೆ ಮಾಡಲಾಗುತ್ತಿದೆ ಎಂದರು.

ಮೈಸೂರು ವಿವಿ ಜತೆಗೂ ಸಭೆ ನಡೆಸಿದ್ದು, ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಚೀನಾದ 200 ವಿದ್ಯಾರ್ಥಿಗಳ ಪೈಕಿ 18 ವಿದ್ಯಾರ್ಥಿಗಳು ಚೀನಾಗೆ ತೆರಳಿದ್ದು, ಸದ್ಯಕ್ಕೆ ಅವರನ್ನು ವಾಪಸ್‌ ಬರದಂತೆ ತಿಳಿಸಲಾಗಿದೆ ಎಂದು ವಿವರಿಸಿದರು. ಜಿಪಂ ಸಿಇಒ ಮಾತನಾಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪಶುಪಾಲನಾ ಇಲಾಖೆಯವರು ಜಂಟಿಯಾಗಿ ನಾಳೆಯೇ ಕೊರೊನಾ ವೈರಸ್‌ ಹೇಗೆ ಹರುಡುತ್ತದೆ ?

ಮುನ್ನೆಚ್ಚರಿಕೆ ಕ್ರಮ ಏನು ತೆಗೆದುಕೊಳ್ಳಬೇಕು? ಎಂಬ ಮಾಹಿತಿಯನ್ನು ಕೊಡಿ ಎಲ್ಲ ಪಂಚಾಯಿತಿಗೂ ಕಳಿಸೋಣ ಎಂದು ಸೂಚಿಸಿದರು. ಜಿಪಂ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್‌, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ವೆಂಕಟಸ್ವಾಮಿ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಅಚ್ಯುತಾನಂದ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಾ.ರಾ.ನಂದೀಶ್‌, ಜಿಪಂ ಸಿಇಒ ಕೆ.ಜ್ಯೋತಿ, ಮುಖ್ಯಯೋಜನಾಧಿಕಾರಿ ಪದ್ಮಶೇಖರ ಪಾಂಡೆ ಉಪಸ್ಥಿತರಿದ್ದರು.

ಮಾಂಸದ ಅಂಗಡಿಗಳ ಮೇಲೆ ದಾಳಿ ನಡೆಸಿ: ಮಾಂಸದ ಅಂಗಡಿಗಳಲ್ಲಿ ಕಡಿಯುವ ಪ್ರತಿ ಕುರಿ-ಕೋಳಿಯನ್ನು ಆರೋಗ್ಯಾಧಿಕಾರಿಗಳು ತಿನ್ನಲು ಯೋಗ್ಯವಾಗಿದೆಯೇ ಎಂದು ಪರಿಶೀಲಿಸಿ ಸೀಲ್‌ ಹಾಕಿ ದೃಢೀಕರಿಸಿದ ನಂತರ ಮಾರಾಟ ಮಾಡಲಾಗುತ್ತಿತ್ತು. ಆದರೆ, ಈಗ ಆ ಪದ್ಧತಿ ಕಾಟಾಚಾರಕ್ಕೆ ಎಂಬಂತಾಗಿಬಿಟ್ಟಿದೆ.

4-5 ಕುರಿಗಳಿಗೆ ಸೀಲ್‌ ಹಾಕಿಸಿಕೊಂಡು 20-25 ಕುರಿ ಕಡಿದು ಮಾರುತ್ತಾರೆ. ಜತೆಗೆ ರಸ್ತೆ ಬದಿಗಳಲ್ಲಿ ಎಲ್ಲೆಂದರಲ್ಲಿ ಮಾಂಸದ ಅಂಗಡಿಗಳು ತಲೆ ಎತ್ತುತ್ತಿವೆ. ಕೋಳಿ ಮಾಂಸದ ಅಂಗಡಿಗಳವರು ಗಲೀಜನ್ನೆಲ್ಲ ರಸ್ತೆ ಬದಿಯಲ್ಲೇ ಸುರಿಯುತ್ತಾರೆ. ರಸ್ತೆ ಬದಿಯಲ್ಲಿ ಹಣ್ಣು ಮಾರುವ ರೀತಿಯಲ್ಲಿ ಮಾಂಸ ಮಾರಲಾಗುತ್ತಿದೆ.

ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದಲ್ಲ. ಕತ್ತರಿಸಿದ ಮಾಂಸವನ್ನು ಧೂಳು, ನೊಣಗಳಿಂದ ರಕ್ಷಿಸಲು ಗಾಜಿನ ಪೆಟ್ಟಿಗೆಯಲ್ಲಿಟ್ಟು ಮಾರಾಟ ಮಾಡುವಂತೆ ಸೂಚಿಸಿ, ಈ ಬಗ್ಗೆ ಗ್ರಾಪಂಗಳಿಗೆ ಪತ್ರ ಬರೆದು ತಿಳಿಸಬೇಕಲ್ಲದೆ, ಪಶುಪಾಲನಾ ಇಲಾಖೆಯವರು ದಾಳಿ ಮಾಡಿ ತಪಾಸಣೆ ಮಾಡಿ ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಾ.ರಾ.ಮಹೇಶ್‌ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next