ತುಮಕೂರು: ಜನರಿಗೆ ತೊಂದರೆಯಾಗದಂತೆ ಆದಷ್ಟು ಬೇಗ ಕಾಮಗಾರಿಗಳನ್ನು ಪೂರ್ಣಗೊಳಿಸು ವಂತೆ ಅಧಿಕಾರಿಗಳಿಗೆ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಖಡಕ್ ಸೂಚನೆ ನೀಡಿದರು.
ಶನಿವಾರ ನಗರ ವೀಕ್ಷಣೆ ಮಾಡಿ ಸ್ಮಾರ್ಟ್‌ಸಿಟಿ, ಪಾಲಿಕೆ ಹಾಗೂ ನಗರ ನೀರು ಸರಬರಾಜು ಮಂಡಳಿ ಯಿಂದ ವಿವಿಧ ಪ್ರದೇಶದಲ್ಲಿ ಕೈಗೊಂಡಿರುವ ಕಾಮಗಾರಿ ಪರಿಶೀಲಿಸಿ ಮಾತನಾಡಿದರು.
ಸದಾಶಿವ ನಗರದಲ್ಲಿ ಅಮೃತ್ ಯೋಜನೆಯಡಿ ಪಾಲಿಕೆಯಿಂದ 1.39ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ 800 ಮೀಟರ್ ಉದ್ದದ ಪಾದಚಾರಿ ಮಾರ್ಗ, ಸೈಕಲ್ ಟ್ರ್ಯಾಕ್ ನಿರ್ಮಾಣ ಹಾಗೂ ಓವರ್ ಹೆಡ್ ಟ್ಯಾಂಕ್ ಕಾಮಗಾರಿ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಪರಿ ಶೀಲಿಸಲು ಸೂಚಿಸಲಾಗುವುದು. ಕಾಮಗಾರಿ ಕಳಪೆ ಯಾಗಿರುವುದು ಸಾಬೀತಾದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮೈದಾಳರಸ್ತೆ 34ನೇ ವಾರ್ಡ್‌ನ ಬನ್ನಿಮರ ಪಾರ್ಕ್, ಹೊರ ವಲಯದಲ್ಲಿರುವ ವರ್ತುಲ ರಸ್ತೆ, ನಗರ ಕೇಂದ್ರ ಗ್ರಂಥಾಲಯದಲ್ಲಿರುವ ಡಿಜಿಟಲ್ ಲೈಬ್ರರಿ, ಎಂಪ್ರಸ್ ಬಾಲಕಿಯರ ಪದವಿಪೂರ್ವ ಕಾಲೇಜಿನ ಸ್ಮಾರ್ಟ್ ತರಗತಿ, ಸದಾಶಿವ ನಗರದ ಓವರ್ ಹೆಡ್‌ಟ್ಯಾಂಕ್ ಹಾಗೂ ಸೈಕಲ್ ಟ್ರ್ಯಾಕ್, ಪಾದಚಾರಿ ರಸ್ತೆ, ಬುಗುಡನಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದರು.
ಬುಗುಡನಹಳ್ಳಿ ಕೆರೆ ವೀಕ್ಷಿಸಿದ ಸಚಿವ:ಬುಗುಡನಹಳ್ಳಿ ಕೆರೆ ಕಾಮಗಾರಿಯನ್ನು ಸಚಿವರು ವೀಕ್ಷಿಸಿದರು. ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರ ಮುದ್ದು ರಾಜ್ ಮಾತನಾಡಿ, ಬುಗುಡನಹಳ್ಳಿ ಕೆರೆಯು 240 ಎಂಸಿಎಫ್ಟಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ನಗರದ ಜನಸಂಖ್ಯೆ 2031ಕ್ಕೆ ಸುಮಾರು 5 ಲಕ್ಷ ತಲುಪುವ ನಿರೀಕ್ಷೆಯಿದ್ದು, ಕುಡಿಯುವ ನೀರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ 58 ಕೋಟಿ ರೂ. ವೆಚ್ಚದಲ್ಲಿ 38.5 ಲಕ್ಷ ಕ್ಯುಬಿಕ್ ಮೀಟರ್ ಮಣ್ಣು ತೆಗೆದು ಕೆರೆ ನೀರು ಸಂಗ್ರಹ ಸಾಮರ್ಥ್ಯವನ್ನು 120 ಎಂಸಿಎಫ್ಟಿ ಹೆಚ್ಚಿಸುವ ಕಾಮಗಾರಿ ಕೈಗೊಳ್ಳಲಾಗಿದ್ದು, ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಕಾಮಗಾರಿಯನ್ನು ಪಾಲಿಕೆ, ನೀರಾವರಿ ಇಲಾಖೆ, ನಗರ ನೀರು ಸರಬರಾಜು ಮಂಡಳಿಗಳು ಜಂಟಿ ಯಾಗಿ ತಪಾಸಣೆ ಮಾಡಬೇಕು ಎಂದು ಸಚಿವರು ಸೂಚನೆ ನೀಡಿದರು. ಕುಡಿಯುವ ನೀರಿಗೆ ಬುಗುಡನ ಹಳ್ಳಿ ಕೆರೆಯಿಂದ ಅಮಾನಿಕೆರೆಗೆ 6 ಕಿ.ಮೀ. ಉದ್ದದ 9.4 ಮಿ.ಮೀ. ವ್ಯಾಸದ ಪೈಪ್‌ಲೈನ್ ಮೂಲಕ ನೀರು ತುಂಬಿಸಲು 56 ಕೋಟಿ ರೂ. ವೆಚ್ಚದಲ್ಲಿ ಹೌಸಿಂಗ್ ಛೇಂಬರ್, 335 ಎಚ್ಪಿ ಸಾಮರ್ಥ್ಯದ 3 ಪಂಪಿಂಗ್ ಮಷಿನ್ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಮೇಯರ್ ಲಲಿತಾ ರವೀಶ್, ಉಪಮೇಯರ್ ಬಿ.ಎಸ್.ರೂಪಶ್ರೀ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ನಗರ ಯೋಜನಾ ಇಲಾಖೆ ಜಂಟಿ ನಿರ್ದೇಶಕ ರವಿಕುಮಾರ್, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ಬಿ.ಟಿ.ರಂಗಸ್ವಾಮಿ, ಪಾಲಿಕೆ ಆಯುಕ್ತ ಭೂಬಾಲನ್ ಇತರರಿದ್ದರು.