Advertisement

“ನೋಟಾ’ಅಭಿಯಾನ ವಿರುದ್ಧ ಕ್ರಮ: ಡಿಸಿ ಎಚ್ಚರಿಕೆ

12:45 PM Mar 24, 2019 | keerthan |

ಉಡುಪಿ: “ನೋಟಾ’ ಚಲಾಯಿಸಲು ಅಭಿಯಾನ ನಡೆಸಿದರೆ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

Advertisement

ಶನಿವಾರ ಉಡುಪಿಯಲ್ಲಿ ಪತ್ರಕರ್ತರಿಗಾಗಿ ನಡೆದ ಸ್ವೀಪ್‌ ಮಾಹಿತಿ ಮತ್ತು ಅಣಕು ಮತದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮತದಾನ ಪ್ರತಿಯೋರ್ವರ ಹಕ್ಕು. ಒಂದು ವೇಳೆ ಯಾರೊಬ್ಬ ಅಭ್ಯರ್ಥಿಗೂ ಮತದಾನ ಮಾಡಲು ಇಚ್ಛೆ ಇಲ್ಲದವರು “ನೋಟಾ’ ಚಲಾಯಿಸಬಹುದು. ಆದರೆ “ನೋಟಾ’ ಚಲಾಯಿಸಬೇಕೆಂದು ಯಾವುದೇ ವ್ಯಕ್ತಿ-ಸಂಘಟನೆಗಳು ಅಭಿಯಾನ ನಡೆಸಿದರೆ ಅದು ಇನ್ನೋರ್ವನ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲಾಡಳಿತದಿಂದಲೇ ವಾಹನ
ಮತದಾನದಂದು ಅಶಕ್ತರಿಗೆ ಜಿಲ್ಲಾಡಳಿತದಿಂದಲೇ ವಾಹನ ವ್ಯವಸ್ಥೆ ಮಾಡಲಾಗುವುದು. ಸ್ಥಳೀಯ ಗ್ರಾ.ಪಂ.ಗಳಿಗೆ ಈ ಜವಾಬ್ದಾರಿ ವಹಿಸಲಾಗುವುದು. ರಾಜಕೀಯ ಪಕ್ಷಗಳು ವಾಹನ ವ್ಯವಸ್ಥೆ ಮಾಡಿದರೆ ಅದು ಆಮಿಷವೇ ಆಗುತ್ತದೆ. ಇದರ ಬಗ್ಗೆ ಮತದಾರರು ಜಾಗೃತರಾಗಬೇಕು. ಯಾವುದೇ ಆಮಿಷಕ್ಕೆ ಒಳಗಾಗಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕ್ಯೂ ಆ್ಯಪ್‌
ಮತದಾನ ಕೇಂದ್ರಗಳಲ್ಲಿ ಇರುವ ಸರತಿ ಸಾಲಿನ ಬಗ್ಗೆ ತಿಳಿದುಕೊಳ್ಳಲು ಆ್ಯಪ್‌ ವ್ಯವಸ್ಥೆ ಇರುತ್ತದೆ. ಕಳೆದ ಬಾರಿ ಕೆಲವು ಆಯ್ದ ಮತದಾನ ಕೇಂದ್ರಗಳ ಕುರಿತು ಮಾಹಿತಿ ಈ ಆ್ಯಪ್‌ನಲ್ಲಿ ದೊರೆತಿತ್ತು. ಈ ಬಾರಿ ಆ್ಯಪ್‌ನಲ್ಲಿ ಎಷ್ಟು ಮತದಾನ ಕೇಂದ್ರಗಳ ಮಾಹಿತಿ ದೊರೆಯುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

Advertisement

ಉಡುಪಿ ಜಿಲ್ಲೆಯಲ್ಲಿ ಉತ್ತಮ ಪ್ರಮಾಣದಲ್ಲಿ ಮತದಾನವಾಗುತ್ತಿದೆ. ಹಾಗಾಗಿ ಮತದಾನ ಪ್ರಮಾಣದಲ್ಲಿ ಬೇರೆ ಜಿಲ್ಲೆಗಳಿಗೆ ಹೋಲಿಸದೆ ನಮ್ಮ ಪ್ರಮಾಣವನ್ನೇ ಮತ್ತಷ್ಟು ಹೆಚ್ಚಿಸುವತ್ತ ಗಮನ ಹರಿಸುತ್ತೇವೆ ಎಂದರು. ವೋಟರ್‌ ಸ್ಲಿಪ್‌ಗ್ಳನ್ನು ಚುನಾವಣ ಅಧಿಕಾರಿ, ಸಿಬಂದಿಗಳೇ ವಿತರಿಸುತ್ತಾರೆ. ರಾಜಕೀಯ ಪಕ್ಷಗಳು ವೋಟರ್‌ ಸ್ಲಿಪ್‌ಗ್ಳನ್ನು ಮನೆ ಮನೆಗೆ ತೆರಳಿ ವಿತರಿಸುವಂತಿಲ್ಲ ಎಂದರು.

ನ್ಯಾಯಾಲಯದಿಂದ ಮಾನಸಿಕ ಅಸ್ವಸ್ಥರು ಎಂದು ಘೋಷಿಸಿದವರನ್ನು ಹೊರತುಪಡಿಸಿ ಇತರರು, ಅಂದರೆ ವಿಶೇಷ ಚೇತನರು (ಬುದ್ಧಿಮಾಂದ್ಯರು) ಮತದಾನ ಮಾಡಬಹುದು ಎಂದು ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷೆ ಸಿಂಧೂ ಬಿ. ರೂಪೇಶ್‌ ಹೇಳಿದರು.
ಸ್ವೀಪ್‌ ಸಮಿತಿ ತಾಲೂಕು ನೋಡಲ್‌ ಅಧಿಕಾರಿ ರಾಜು ಕೆ., ವಾರ್ತಾಧಿಕಾರಿ ಖಾದರ್‌ ಶಾ ಉಪಸ್ಥಿತರಿದ್ದರು.

ಬಸ್‌ದರ ನಿಯಂತ್ರಣ: ಸಿಎಸ್‌ಗೆ ಪತ್ರ
ಮತದಾನ ಸಂದರ್ಭ ಊರಿಗೆ ಆಗಮಿಸುವವರಿಗೆ ಬಸ್‌ ದರ ಹೊರೆಯಾಗಲಿರುವ ವಿಚಾರವನ್ನು ಸರಕಾರದ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತರುವುದಾಗಿ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

“ಮತದಾನದ ದಿನದ ಹಿಂದೆ ಮುಂದೆ ಸರಣಿ ರಜೆಗಳು ಇರುವುದರಿಂದ ಆಗ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳ ಟಿಕೆಟ್‌ ದರ ಹೆಚ್ಚು ಮಾಡಲಾಗುತ್ತದೆ. ಇದರಿಂದ ಮತದಾರರು ಊರಿಗೆ ಬರಲು ಹಿಂದೇಟು ಹಾಕುವ ಅಪಾಯವಿರುತ್ತದೆ’ ಎಂದು ಪತ್ರಕರ್ತರು ಜಿಲ್ಲಾಧಿಕಾರಿಯರ ಗಮನ ಸೆಳೆದಾಗ ಪ್ರತಿಕ್ರಿಯಿಸಿ, ರಾಜ್ಯಮಟ್ಟದಲ್ಲಿಯೇ ಇದಕ್ಕೆ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next