ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹೊರಗಿನ ಔಷಧ ಅಂಗಡಿಗಳಲ್ಲಿ ಲಭ್ಯವಾಗುವ ಪ್ರತ್ಯೇಕ ಬ್ರಾಂಡ್‌ನ ಔಷಧಗಳನ್ನೇ ತೆಗೆದುಕೊಳ್ಳುವಂತೆ ಪ್ರೇರೇಪಿಸುವ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಆಯುಷ್ ಸೇವೆಗಳ ಆಯುಕ್ತಾಲಯ ಎಚ್ಚರಿಕೆ ನೀಡಿದೆ.
ಈ ಕುರಿತು ಸುತ್ತೋಲೆ ಹೊರಡಿಸಿರುವ ಆಯುಕ್ತಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರಿ ಆಸ್ಪತ್ರೆಗಳ ವೈದ್ಯರು ತಮ್ಮಲ್ಲಿ ಬರುವ ರೋಗಿಗಳಿಗೆ ಪ್ರತ್ಯೇಕ ಬ್ರಾಂಡ್ ಔಷಧವನ್ನು ಹೊರಗಿನ ಔಷಧ ಅಂಗಡಿಗಳಿಂದ ಖರೀದಿಸುವಂತೆ ಬರೆದುಕೊಡುವುದರ ಜತೆಗೆ ಆ ಬಗ್ಗೆ ಪ್ರೇರೇಪಿಸುವುದು ಮತ್ತು ಒತ್ತಾಯಿಸುತ್ತಿರುವುದು ಗಮನಕ್ಕೆ ಬಂದಿದೆ. ಇದು ಸಾರ್ವಜನಿಕ ಆರೋಗ್ಯ ನೀತಿಯ ವಿರುದ್ಧ ನಿಲುವಾಗಿದೆ ಎಂದು ಹೇಳಿದೆ.
ಜನೌಷಧಿ, ಜನಸಂಜೀವಿನಿ ಆಂದೋಲನದ ಅಡಿಯಲ್ಲಿ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಔಷಧವನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಅತಿ ಕಡಿಮೆ ದರದಲ್ಲಿ ಸಿಗುವಂತೆ ಮಾಡಲು ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ. ಅದರಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರಗಿನ ಔಷಧ ಮಳಿಗೆಗಳಿಂದ ಔಷಧ ಖರೀದಿಸಲು ಪ್ರೇರೇಪಿಸುವುದು ಅಥವಾ ಒತ್ತಾಯಿಸುವುದು ಆಕ್ಷೇಪಾರ್ಹವಾಗಿದೆ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣ ಕೆ.ಸಿ.ಎಸ್.ಆರ್. ನಿಯಮಾವಳಿ ಮತ್ತು ಎಂ.ಸಿ.ಐ. ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಎಲ್ಲಾ ಹಂತದ ಆಸ್ಪತ್ರೆಗಳಲ್ಲಿ ವೈದ್ಯರು ಜನೌಷಧಿ/ಜನಸಂಜೀವಿನ ಆಂದೋಲನದ ಅಡಿಯಲ್ಲಿ ಸೂಚಿಸಿರುವ ಜನರಿಕ್ ಔಷಧವನ್ನೇ ರೋಗಿಗಳಿಗೆ ಸೂಚಿಸಬೇಕು ಎಂದು ಸ್ಪಷ್ಟ ನಿರ್ದೇಶನವನ್ನೂ ಆಯುಕ್ತಾಲಯ ಸರ್ಕಾರಿ ವೈದ್ಯರಿಗೆ ನೀಡಿದೆ.
ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಜನೆರಿಕ್ ಔಷಧವನ್ನೇ ನೀಡಬೇಕು ಮತ್ತು ಅವುಗಳನ್ನೇ ಖರೀದಿಸಲು ಪ್ರೇರೇಪಿಸಬೇಕು ಎಂದು ಆರೋಗ್ಯ ಇಲಾಖೆ ಇತ್ತೀಚೆಗೆ ಸುತ್ತೋಲೆ ಹೊರಡಿಸಿತ್ತು. ಆದರೂ ಕೆಲವು ಕಡೆ ಸರ್ಕಾರಿ ವೈದ್ಯರು ಬ್ರಾಂಡೆಡ್ ಔಷಧವನ್ನು ಬರೆದುಕೊಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಇಲಾಖೆ ಈ ಸೂತ್ತೋಲೆ ಹೊರಡಿಸಿದೆ.