ಮುಂಬಯಿ: ದೇಶಿ ಪ್ರವಾಸಿಗರ ಬಗ್ಗೆ ಹರಿಹಾಯುವ ಬದಲು ಗೋವಾದಲ್ಲಿ ಬೀಡುಬಿಟ್ಟಿರುವ ವಿದೇಶೀಯರ ವಿರುದ್ಧ ಕ್ರಮ ಜರಗಿಸುವಂತೆ ಬಿಜೆಪಿ ನೇತೃತ್ವದ ಗೋವಾ ಸರಕಾರಕ್ಕೆ ಶಿವಸೇನೆ ಸವಾಲು ಹಾಕಿದೆ.
ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆಯಿಂದಾಗಿ ಉದ್ಯೋಗಾ ವಕಾಶಗಳು ಕುಂಠಿತಗೊಂಡಿವೆ. ಒಂದು ವಲಯದ ಜನರ ವಿರುದ್ಧ ಗೋವಾದ ಸಚಿವ ವಿಜಯ್ ಸರ್ದೇಸಾಯಿ ಅವರು ನೀಡಿರುವ ಹೇಳಿಕೆ ಬೇಜವಾಬ್ದಾರಿಯುತವಾದುದು ಎಂದು ಶಿವಸೇನೆ ಹೇಳಿದೆ.
ದೇಶಿ ಪ್ರವಾಸಿಗರ ವರ್ಗವೊಂದನ್ನು ಕೃಷಿ ಸಚಿವ ಸರ್ದೇಸಾಯಿ ಅವರು ಕಳೆದ ವಾರ “ಭೂಮಿಯ ಕಸ’ ಎಂಬುದಾಗಿ ಬಣ್ಣಿಸಿದ್ದರು ಮತ್ತು ಪ್ರವಾಸಿಗರ ಸಂಖ್ಯೆಯಲ್ಲಿ ಸುಧಾರಣೆಗೆ ನೋಡುವ ಬದಲು ಗುಣಮಟ್ಟದಲ್ಲಿ ಸುಧಾರಣೆಗೆ ನೋಡಬೇಕೆಂದು ರಾಜ್ಯವನ್ನು ಆಗ್ರಹಿಸಿದ್ದರು. ಬಳಿಕ ಅವರ ಸಂಪುಟ ಸಹೋದ್ಯೋಗಿ ಮನೋಹರ್ ಅಜಾYಂವ್ಕರ್ ಅವರು ಗೋವಾದ ಸಂಸ್ಕೃತಿ ಮತ್ತು ವೈಶಿಷ್ಟéಗಳ ಕುರಿತು ಅಸಡ್ಡೆ ತೋರುವ ಪ್ರವಾಸಿಗರನ್ನು ಓಡಿಸುವ ಬೆದರಿಕೆ ಹಾಕಿದ್ದರು.
ತನ್ನ ಮುಖವಾಣಿ “ಸಾಮ್ನಾ’ದಲ್ಲಿ ಬರೆದಿರುವ ಸಂಪಾದಕೀಯ ದಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆ, “ಬಿಜೆಪಿ ನೇತೃತ್ವದ ಗೋವಾ ಸರಕಾರದ ಸಚಿವರೊಬ್ಬರು ಉತ್ತರ ಭಾರತೀಯರು ಗೋವಾವನ್ನು ಒಂದು ಚರಂಡಿಯಾಗಿ ಪರಿವರ್ತಿಸಿದ್ದಾರೆಂದು ದೂಷಿಸಿದ್ದಾರೆ. ಆದರೆ ರಾಜ್ಯವು ಪ್ರವಾಸೋದ್ಯಮದ ಮೇಲೆ ನಡೆಯುತ್ತಿದೆ ಮತ್ತು ಅದು ಕಾನೂನು ಮತ್ತು ಶಿಸ್ತು ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ವಿಫಲವಾಗಿದೆ. ಗೋವಾದಲ್ಲಿ ಸ್ಥಳೀಯ ಪೊಲೀಸರು ಕೂಡ ಹೋಗಲು ಭಯಪಡುವಂಥ ಕೆಲ ಜಾಗಗಳಿವೆ. ಅಲ್ಲಿ ರಷ್ಯ ಮತ್ತು ನೈಜೀರಿಯ ಪ್ರವಾಸಿಗರ ಪ್ರಾಬಲ್ಯವಿದೆ. ಗೋವಾ ಆಡಳಿತೆ ಸಾಧ್ಯವಿದ್ದರೆ ಆ ಹಳ್ಳಿಗಳಿಗೆ ಹೋಗಿ ಅವುಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಿ’ ಎಂದು ಹೇಳಿದೆ.
ಗೋವಾ ಅನೇಕ ವರ್ಷಗಳ ಕಾಲ ಪೋರ್ಚುಗೀಸರ ದಬ್ಟಾಳಿಕೆಗೆ ತುತ್ತಾಗಿದ್ದರೂ ಉತ್ತರ ಭಾರತೀಯ ಪ್ರವಾಸಿಗರಿಗಿಂತ ಅದೇ ಆಳ್ವಿಕೆಯನ್ನು ಬಯಸುವ ಕೆಲ ಸಚಿವರಿದ್ದಾರೆ ಎಂದು ಸರ್ದೇಸಾಯಿ ಅವರನ್ನು ಶಿವಸೇನೆ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದೆ. ಇದು ಯಾವ ಬಗೆಯ ರಾಷ್ಟ್ರವಾದ ಎಂದು ಅದು ಪ್ರಶ್ನಿಸಿದೆ.
ಬೇಜವಾಬ್ದಾರಿಯುತ ಹೇಳಿಕೆ
ಜಮ್ಮು-ಕಾಶ್ಮೀರವನ್ನು ಉಲ್ಲೇಖೀಸಿರುವ ಶಿವಸೇನೆ, ಉಗ್ರಗಾಮಿ ಚಟುವಟಿಕೆಗಳಿಂದಾಗಿ ಟ್ಯಾಕ್ಸಿ ಮತ್ತು ಆಟೋರಿಕ್ಷಾ ಚಾಲಕರು, ದಲ್ ಸರೋವರದಲ್ಲಿ ಶಿಕಾರಾಗಳನ್ನು ನಡೆಸುವವರು, ಹೊಟೇಲ್ ಮತ್ತು ರೆಸ್ಟಾರೆಂಟ್ ಉದ್ಯಮಿಗಳ ಉದ್ಯೋಗಕ್ಕೆ ಸಂಚಕಾರವುಂಟಾಗಿದೆ. ಈ ಹಿನ್ನೆಲೆಯಲ್ಲಿ ಒಂದು ವಲಯದ ಜನರ ವಿರುದ್ಧ ಸರ್ದೇಸಾಯಿ ನೀಡಿರುವ ಹೇಳಿಕೆ ಬೇಜವಾಬ್ದಾರಿ ಯುತವಾದುದು. ಗೋವಾದ ಜನತೆ ತಮ್ಮ ಸಚಿವರ ಇಂಥ ಹೇಳಿಕೆಗಳನ್ನು ತಿರಸ್ಕರಿಸಬೇಕು ಎಂದು ಹೇಳಿದೆ.