Advertisement

ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣ ವಿರುದ್ಧ ಕ್ರಮ

04:02 PM Jan 01, 2020 | Suhan S |

ಕೊಪ್ಪಳ: ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು 12 ಪ್ರಕರಣಗಳು ಬೆಳಕಿಗೆ ಬಂದಿದ್ದು, ಅವುಗಳಿಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಫಲಾನುಭವಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ್‌ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅನುಸೂಚಿತ ಜಾತಿಗಳ ಮತ್ತು ಬುಡಕಟ್ಟು ಉಪಯೋಜನೆ ಹಾಗೂ ಪರಿಶಿಷ್ಟ ಜಾತಿ ಮತ್ತು ವರ್ಗದ ಅಭಿವೃದ್ಧಿಗೆ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲಾ ವ್ಯಾಪ್ತಿಯಲ್ಲಿ ಸುಳ್ಳು ಜಾತಿ ಪ್ರಕರಣಗಳಿಗೆ ಸಂಬಂಧಿಸಿದಂತೆ 12 ಪ್ರಕರಣಗಳು ಬೆಳಕಿಗೆ ಬಂದಿದ್ದು, ತನಿಖೆಯ ನಂತರ ಎರಡು ಪ್ರಕರಣಗಳು ಸಿಂಧುವಾಗಿವೆ ಮತ್ತು 10 ಪ್ರಕರಣಗಳು ಅಸಿಂಧುವಾಗಿರುವುದು ಕಂಡುಬಂದಿದೆ. ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಇಂತಹ ಪ್ರಕರಣಗಳು ನಡೆದಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಅಂಬೇಡ್ಕರ್‌ ಅಭಿವೃದ್ಧಿ ನಿಗಮ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸಂಬಂಧಪಟ್ಟ ಅ ಧಿನಿಯಮ-2013 ರನ್ವಯ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕು. ಸ್ವಯಂ ಉದ್ಯಮಶೀಲತಾ ಯೋಜನೆಯಡಿ ಜಿಲ್ಲೆಯ ಮುನಿರಾಬಾದ್‌ ನಿವಾಸಿಯೊಬ್ಬರು ಹಡಪದ ಜಾತಿಗೆ ಸೇರಿದವರಾಗಿದ್ದು, ಅಂಬೇಡ್ಕರ್‌ ನಿಗಮದಿಂದ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಎಂದು ಅಕ್ರಮವಾಗಿ ಸಹಾಯಧನ ಪಡೆದಿರುವ ಪ್ರಕರಣ ನಡೆದಿದ್ದು, ಸೂಕ್ತ ದಾಖಲಾತಿ ಸಂಗ್ರಹಿಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ನಗರದ ಜೆ.ಪಿ. ಮಾರುಕಟ್ಟೆಯಲ್ಲಿ ನಿರ್ಮಾಣವಾಗುತ್ತಿರುವ ಡಾ| ಬಿ.ಆರ್‌. ಅಂಬೇಡ್ಕರ್‌ ಭವನ ಹಾಗೂ ತಾಲೂಕಿನ ಟಣಕನಕಲ್‌ ಗ್ರಾಮದ ಜಿಲ್ಲಾಮಟ್ಟದ ವಾಲ್ಮೀಕಿ ಸಮುದಾಯ ಭವನ ಕಟ್ಟಡ ಕಾಮಗಾರಿಗಳಿಗೆ ಈಗಾಗಲೇ ಚಾಲನೆ ನೀಡಿದ್ದು, ನಿರ್ದಿಷ್ಟ ಕಾಮಗಾರಿಗೆ ನೀಡಿದ ಅನುದಾನವನ್ನು ಬಳಸಿ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಒಂದು ವೇಳೆ ಆ ಕಾಮಗಾರಿಗೆ ಯಾವುದೇ ಅಡೆತಡೆಯಾದಲ್ಲಿ ಮತ್ತು ಕಾಮಗಾರಿ ಸ್ಥಗಿತಗೊಂಡರೆ ಜಿಲ್ಲಾಡಳಿತದ ಗಮನಕ್ಕೆ ತರಬೇಕು ಎಂದರು.

ವಿರೂಪಾಪೂರಗಡ್ಡಿಯಲ್ಲಿ ಸ್ಥಳಾಂತರಗೊಳಿಸಿದ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಪುನರ್‌ವಸತಿ ಕಲ್ಪಿಸಲು ಒಟ್ಟು 70 ಕುಟುಂಬಗಳಲ್ಲಿ 22 ಕುಟುಂಬಗಳಿಗೆ ಕರಿಯಮ್ಮ ಗಡ್ಡಿಯಲ್ಲಿ ಹಾಗೂ ಉಳಿದ ಕುಟುಂಬಗಳಿಗೆ ತಿರುಮಲಾಪೂರದಲ್ಲಿ ಪುನರ್ವಸತಿ ಕಲ್ಪಿಸಲು ಶೀಘ್ರವಾಗಿ ಕ್ರಮವಹಿಸಲಾಗುತ್ತದೆ. ದೌರ್ಜನ್ಯಕ್ಕೊಳಗಾದ ಸಿಂಗನಾಳ, ಗಂಗಾವತಿ ಮತ್ತು ಸಿದ್ದಾಪೂರ ವ್ಯಾಪ್ತಿಯ ದಲಿತ ದೇವದಾಸಿ ಮಹಿಳೆಗೆ ವ್ಯವಸಾಯ ಭೂಮಿಯನ್ನು ಸರ್ವೇ ಮಾಡಿ ಪಹಣಿ ಸಲ್ಲಿಸಿ ದಾಖಲೆಗಳನ್ನು ಜಿಲ್ಲಾಡಳಿತಕ್ಕೆ ತಲುಪಿಸಬೇಕು. ದೇವದಾಸಿ ಅಭಿವೃದ್ಧಿ ನಿಗಮದಡಿ ಜಮೀನು ಮತ್ತು ನಿವಾಸಕ್ಕೆ ಭೂಮಿಯನ್ನು ನೀಡುವಲ್ಲಿ ಯೋಜನೆಗಳ ಸೌಲಭ್ಯಗಳು ದೊರೆಯುವಂತಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

Advertisement

ಸಭೆಯಲ್ಲಿ ಜಿಪಂ ಸಿಇಒ ರಘುನಂದನ್‌ ಮೂರ್ತಿ, ಡಿವೈಎಸ್‌ಪಿ ವೆಂಕಟಪ್ಪ ನಾಯಕ್‌, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next