ಕಲಬುರಗಿ : ಜಿಲ್ಲೆಯಲ್ಲಿ ಕೊರೊನಾ ಸೋಂಕಿತರನ್ನು ದಾಖಲಿಸಿಕೊಳ್ಳುವ ಖಾಸಗಿ ಆಸ್ಪತ್ರೆಯವರು ಸರ್ಕಾರ ನಿಗದಿಪಡಿಸಿರುವ ದರವನ್ನು ಮಾತ್ರ ಪಡೆಯಬೇಕೆಂದು ಸಂಸದ ಡಾ| ಉಮೇಶ್ ಜಾಧವ ಹೇಳಿದರು.
ನಗರದ ಜಿಲ್ಲಾ ಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರವಿವಾರ ಸಂಜೆ ನಡೆದ ಕೋವಿಡ್ ಕುರಿತ ಜಿಲ್ಲಾಮಟ್ಟದ ತಜ್ಞರ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ 21 ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರ ಚಿಕಿತ್ಸೆಗೆ ಹೆಚ್ಚಿನ ಶುಲ್ಕ ಪಡೆದಲ್ಲಿ ಅಂತಹ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಸರ್ಕಾರ ಶಿಫಾರಸು ಮಾಡುವ ಕೊರೊನಾ ರೋಗಿಗಳಿಗೆ ಸರ್ಕಾರಿ ಕೋಟಾದಲ್ಲಿ ಉಚಿತವಾಗಿ ಚಿಕಿತ್ಸೆ ನೀಡಬೇಕು. ಇತರ (ಖಾಸಗಿ) ರೋಗಿಗಳಿಗೆ ಸರ್ಕಾರ ನಿಗದಿಪಡಿಸಿದ ದರದಲ್ಲಿ ಚಿಕಿತ್ಸೆ ಕೊಡಬೇಕು. ಅದೇ ರೀತಿ ಚಿಕಿತ್ಸೆ ದರದ ಬಗ್ಗೆ ಆರೋಗ್ಯ ಇಲಾಖೆಯವರು ನಿಗಾ ವಹಿಸಬೇಕೆಂದು ಸೂಚಿಸಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ರೆಮ್-ಡಿಸಿವಿರ್ ಇಂಜೆಕ್ಷನ್ ಕೊರತೆ ಇಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದಲ್ಲಿ ದಾಖಲಾಗಿರುವ ರೋಗಿಗಳಿಗೂ ಇಂಜೆಕ್ಷನ್ ಸಮಸ್ಯೆ ಉದ್ಭವಿಸಲ್ಲ. ಆದರೆ, ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗುವ ಸೋಂಕಿತರಿಗೆ ರೆಮ್-ಡಿಸಿವಿರ್ ನೀಡುವಲ್ಲಿ ಕೊರತೆ ಆಗುತ್ತಿದೆ. ಹೀಗಾಗಿ ಜಿಲ್ಲಾಡಳಿತ ಮೂಲಕವೇ ಖಾಸಗಿಯುವರು ರೆಮ್ ಡಿಸಿವಿಯರ್ ಚುಚ್ಚುಮದ್ದು ಪಡೆಯಬೇಕು. ಹಾಗೆ ಸೋಂಕಿತರ ಸ್ಥಿತಿಗತಿಯ ಮಾಹಿತಿಯನ್ನೂ ಆರೋಗ್ಯ ಇಲಾಖೆಯವರು ಕಲೆ ಹಾಕಬೇಕು. ಅಗತ್ಯ ಇದ್ದರೆ ಮಾತ್ರವೇ ಈ ಇಂಜೆಕ್ಷನ್ ನೀಡುವ ವ್ಯವಸ್ಥೆ ಆಗಬೇಕೆಂದು ಹೇಳಿದರು.
ಆಕ್ಸಿಜನ್ ಸಿಲಿಂಡರ್ ಸಮಸ್ಯೆ ಉಂಟಾಗದಂತೆಯೂ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಮೂರು ಆಕ್ಸಿಜನ್ ಪೂರೈಕೆ ಏಜೆನ್ಸಿಗಳು ಇದ್ದು, ಎಷ್ಟು ಸಿಲಿಂಡರ್ ಲಭ್ಯ ಇದೆ ಎಂಬ ಮಾಹಿತಿಯನ್ನೂ ಅಧಿಕಾರಿಗಳು ಪಡೆಯಬೇಕು. ಏಜೆನ್ಸಿಗಳ ಮೂಲಕ 21 ಖಾಸಗಿ ಆಸ್ಪತ್ರೆಗಳಿಗೂ ಪೂರೈಕೆ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಜತೆಗೆ ಕೊರೊನಾ ಪ್ರಕರಣಗಳನ್ನು ನಿಯಂತ್ರಿಸಲು ಅಗತ್ಯ ಕ್ರಮಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಸಮಿತಿ ತಜ್ಞರು ಸೇರಿದಂತೆ ವೈದ್ಯರು ಶ್ರಮಿಸಬೇಕು ಎಂದರು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ, ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಉತ್ತರ ಮತಕ್ಷೇತ್ರದ ಶಾಸಕಿ ಖನೀಜ್ ಫಾತಿಮಾ, ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ್, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಕಲಬುರಗಿ ಅಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ದಯಾನಂದ ಧಾರವಾಡಕರ, ಜಿಪಂ ಸಿಇಒ ದಿಲೀಷ್ ಸಸಿ, ಅಪರ ಜಿಲ್ಲಾ ಧಿಕಾರಿ ಡಾ.ಶಂಕರಣ್ಣ ವಣಿಕ್ಯಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ್, ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ್, ಇಎಸ್‌ಐ ನಿರ್ದೇಶಕಿ ಡಾ.ಲೋಬೋ, ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ರಾಹುಲ್ ಸೇರಿದಂತೆ ವೈದ್ಯರು ಭಾಗವಹಿಸಿದ್ದರು.