ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವ ಆರೋಪದ ಮೇಲೆ ರಾಜ್ಯದ 18 ಅಧಿಕಾರಿಗಳಿಗೆ ಸೇರಿದ ಆಸ್ತಿಪಾಸ್ತಿಗಳ ಮೇಲೆ ಬುಧವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿ, ಕೋಟ್ಯಂತರ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ. ಆದರೆ, ಇದುವರೆಗೆ ಈ ರೀತಿ ದಾಳಿ ನಡೆಸಲಾಗಿರುವ ಎಷ್ಟು ಭ್ರಷ್ಟಾಚಾರಿಗಳಿಗೆ ಶಿಕ್ಷೆಯಾಗಿದೆ ಎಂಬ ಬಗ್ಗೆಯೂ ನೋಡಬೇಕಾಗುತ್ತದೆ.
ಕಳೆದ ವರ್ಷ ಎಸಿಬಿ ಬಿಡುಗಡೆ ಮಾಡಿದ ದಾಖಲೆಗಳ ಪ್ರಕಾರ, 2016ರಿಂದ 2021ರ ಅಂತ್ಯದವರೆಗೆ ರಾಜ್ಯದಲ್ಲಿ 1,803 ಕೇಸುಗಳನ್ನು ಎಸಿಬಿ ದಾಖಲಿಸಿತ್ತು. ಇದರಲ್ಲಿ ಕೇವಲ 10 ಮಂದಿಗೆ ಶಿಕ್ಷೆ ಕೊಡಿಸುವಲ್ಲಿ ಎಸಿಬಿ ಯಶಸ್ವಿಯಾಗಿದೆ. 25 ಮಂದಿಗೆ ಕ್ಲೀನ್ ಚಿಟ್ ಸಿಕ್ಕಿದೆ. ಉಳಿದ ಕೇಸುಗಳು ಇನ್ನೂ ವಿಚಾರಣ ಹಂತದಲ್ಲೇ ಇವೆ. ಇದರ ಅರ್ಥ, ದಾಳಿ ನಡೆಸುವಾಗ ಇದ್ದ ಉತ್ಸಾಹ ಭ್ರಷ್ಟರಿಗೆ ಶಿಕ್ಷೆ ಕೊಡಿಸುವಲ್ಲಿ ಇರುವುದಿಲ್ಲವೇ ಎಂಬ ಪ್ರಶ್ನೆಯೂ ಉದ^ವವಾಗುತ್ತದೆ. 1,803 ಕೇಸುಗಳ ಪೈಕಿ, 753 ಕೇಸುಗಳ ಬಗ್ಗೆ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. 682 ಕೇಸುಗಳು ವಿಚಾರಣ ಹಂತದಲ್ಲಿವೆ. 1,473 ಸರಕಾರಿ ಅಧಿಕಾರಿಗಳು ಒಟ್ಟಾರೆ ಬಂಧಿತರಾಗಿದ್ದಾರೆ. ಇವರಲ್ಲಿ 391 ಪ್ರಥಮ ದರ್ಜೆ ಅಧಿಕಾರಿಗಳಾಗಿದ್ದಾರೆ. ಹಾಗೆಯೇ, 1,335 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದ್ದು, 493 ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲಾಗುತ್ತಿದೆ.
ಏನೇ ಆಗಲಿ, 2016ರಿಂದ 2021ರ ನವೆಂಬರ್‌ವರೆಗಿನ ಅ ಅವಧಿಯಲ್ಲಿ ಇಷ್ಟೆಲ್ಲ ದಾಳಿಗಳಾಗಿ ಕೇವಲ 10 ಮಂದಿ ಮಾತ್ರ ಶಿಕ್ಷೆಯಾಗಿರುವುದು ದುರದೃಷ್ಟಕರ. ದಾಳಿ ವೇಳೆ ಆದಾಯಕ್ಕಿಂತ 10 ಪಟ್ಟು, 20 ಪಟ್ಟು ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚು ಪಟ್ಟು ಆದಾಯ ಗಳಿಸಿಕೊಂಡಿದ್ದರೂ ಈ ಅಧಿಕಾರಿಗಳು ಬಚಾವ್ ಆಗುವುದು ಹೇಗೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿದೆ. ಲೋಕಾಯುಕ್ತ ಸಂಸ್ಥೆಗೆ ಪರ್ಯಾಯ ಎಂಬಂತೆಯೋ ರೂಪಿಸಲಾಗಿರುವ ಎಸಿಬಿ ಸಂಸ್ಥೆ ನೇರ ಸರಕಾರದ ಅಧೀನದಲ್ಲಿಯೇ ಬರುವುದರಿಂದ ಸಹಜವಾಗಿಯೇ ಇದರಿಂದ ಹೆಚ್ಚಿನದ್ದೇನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಲೋಕಾಯುಕ್ತ ಸಂಸ್ಥೆಯಿಂದ ವಿಚಾರಣೆಯ ಅಧಿಕಾರವನ್ನು ಕಿತ್ತುಕೊಂಡು ರಚನೆಯಾಗಿರುವ ಎಸಿಬಿ ಸಂಸ್ಥೆಯ ಅಸ್ತಿತ್ವದ ಬಗ್ಗೆಯೇ ಪ್ರಶ್ನೆ ಎದ್ದಿದೆ. ಪ್ರಕರಣ ಈಗ ಹೈಕೋರ್ಟಿನಲ್ಲಿದೆ.
ಹಲ್ಲಿಲ್ಲದ ಹಾವಾಗಿರುವ ಎಸಿಬಿಗೆ ಶಕ್ತಿ ತುಂಬುವ ಕೆಲಸ ನಡೆಯಬೇಕು. ಎಸಿಬಿ ಪ್ರಕರಣದಲ್ಲಿ ಭಾಗಿಯಾಗಿರುವ ಬಹುತೇಕ ಅಧಿಕಾರಿಗಳ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲು ಆಯಾ ಇಲಾಖಾ ಮುಖ್ಯಸ್ಥರ ಅನುಮತಿ ಬೇಕಾಗುತ್ತದೆ. ಆದರೆ ಬಹುತೇಕ ಸಂದರ್ಭದಲ್ಲಿ ಅನುಮತಿ ನೀಡಿಕೆ ತಡವಾಗುವುದರಿಂದ ವಿಚಾರಣೆ ಸಹ ಮಂದಗತಿಯಲ್ಲಿ ಸಾಗುತ್ತಿದೆ. ಪ್ರಥಮ ಮಾಹಿತಿ ದಾಖಲಾದ ಅಧಿಕಾರಿಗಳ ವಿರುದ್ಧ ತನಿಖೆಗೆ ಅನುಮತಿ ನೀಡಲು ಸರಕಾರ ತತ್‌ಕ್ಷಣ ಕ್ರಮ ಕೈಗೊಳ್ಳಬೇಕಾಗುತ್ತದೆ.
ಎಸಿಬಿಯ ದಾಳಿಗಳು, ಎಫ್ಐಆರ್‌ಗಳು ತಾರ್ಕಿಕ ಅಂತ್ಯ ಮುಟ್ಟಲೇಬೇಕಾಗುತ್ತದೆ. ಇಲ್ಲದೆ ಇದ್ದರೆ ಇದೆಲ್ಲವೂ ಒಂದೋ ಮಾಧ್ಯಮಗಳ ಮುಂದೆ ಪ್ರದರ್ಶನವಾಗಿಯೋ, ಸರಕಾರದ ಕೈಗೊಂಬೆ ಆಟವಾಗಿಯೋ ಕಾಣಿಸಿಕೊಳ್ಳುತ್ತದೆ. ಎಸಿಬಿಯ ದಾಳಿಗಳು ವಿಶ್ವಾಸ ಕಳೆದುಕೊಳ್ಳುವ ಮೊದಲು ಅದನ್ನು ಸರಕಾರದ ಹಿಡಿತದಿಂದ ತಪ್ಪಿಸಿ, ಲೋಕಾಯುಕ್ತದ ಜತೆಗೆ ವಿಲೀನ ಅಥವಾ ಸ್ವಾಯತ್ತ ಸಂಸ್ಥೆಯಾಗಿ ರೂಪಿಸಬೇಕು. ಭ್ರಷ್ಟರ ವಿರುದ್ಧ ಕ್ರಮ ಜರಗುತ್ತದೆ ಎಂಬ ನಂಬಿಕೆ ಜನರಲ್ಲಿ ಮೂಡಿಸಬೇಕು.