Advertisement

ಯೂರಿಯಾ ರಸಗೊಬ್ಬರ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕ್ರಮ: ಬಿ.ಸಿ.ಪಾಟೀಲ್

08:10 PM Oct 15, 2020 | Mithun PG |

ಹನೂರು: ಚಾಮರಾಜನಗರ ಜಿಲ್ಲೆಯಲ್ಲಿ ಯೂರಿಯಾ ಸಮಸ್ಯೆ ಬಗ್ಗೆ ಶಾಸಕರು ಮತ್ತು ಅಧಿಕಾರಿಗಳು ತಿಳಿಸಿದ್ದು ಈಗಾಗಲೇ 200ಟನ್ ಯೂರಿಯಾಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ಇದರ ಜೊತೆ ಹೆಚ್ಚುವರಿಯಾಗಿ 300 ಟನ್ ಯೂರಿಯಾ ಸೇರಿ ಮುಂದಿನ 2-3 ದಿನಗಳಲ್ಲಿ 500 ಟನ್ ಯೂರಿಯಾ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.

Advertisement

ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್ ಈಗಾಗಲೇ ರಾಜ್ಯದಲ್ಲಿ ಎರಡು ಲಕ್ಷದ ಮೂವತ್ತು ಸಾವಿರ ಟನ್ ಯೂರಿಯಾವನ್ನು ಹೆಚ್ಚುವರಿಯಾಗಿ ರೈತರಿಗೆ ನೀಡಲಾಗಿದೆ. ಈ ಪೈಕಿ ಚಾಮರಾಜನಗರ ಜಿಲ್ಲೆಗೆ 500 ಟನ್ ಯೂರಿಯಾವನ್ನು 2-3 ದಿನಗಳಲ್ಲಿ ಅಧಿಕಾರಿಗಳಿಗೆ ವಿತರಿಸಲು ಸೂಚನೆ ನೀಡಲಾಗಿದೆ. ಯೂರಿಯಾ ರಸಗೊಬ್ಬರಕ್ಕೆ ಕೃತಕ ಅಭಾವ ಸೃಷ್ಠಿಸುವವರ ವಿರುದ್ಧ ಹಲವು ಕ್ರಮ ಕೈಗೊಳ್ಳಲಾಗಿದ್ದು 148 ಪ್ರಕರಣ ದಾಖಲಿಸಲಾಗಿದೆ. ಇದರ ಜೊತೆಗೆ ಅವರ ಲೈಸನ್ಸ್‍ಗಳನ್ನೂ ರದ್ದುಪಡಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಬೆಳೆವಿಮೆಗೆ 205ಕೋಟಿ ಬಿಡುಗಡೆ: ಕಳೆದ 5 ವರ್ಷಗಳಿಂದ ಬಾಕಿಯಿರುವ ಬೆಳೆವಿಮೆಯ ಹಣವನ್ನು ಈಗಾಗಲೇ 205 ಕೋಟಿ ಬಿಡುಗಡೆ ಮಾಡಲಾಗಿದೆ. ಇನ್ನೂ 90 ಕೋಟಿ ಅನುದಾನದ ವ್ಯತ್ಯಾಸವಿದ್ದು ಅದನ್ನು ಶೀಘ್ರ ಬಿಡುಗಡೆಗೆ ಕ್ರಮವಹಿಸಲಾಗಿದೆ. ಆಧಾರ್ ಕಾರ್ಡ್, ಬ್ಯಾಂಕ್ ಇಲ್ಲದ ರೈತರಿಗೆ ಚೆಕ್ ಮೂಲಕ ಬೆಳೆವಿಮೆ ವಿತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಶೇ.52 ಹುದ್ದೆ ಕೊರತೆ: ಕೃಷಿ ಮಂತ್ರಿಯಾಗಿರುವ ನನ್ನ ತಾಲೂಕಿನಲ್ಲಿಯೇ ಸಿಬ್ಬಂದಿಗಳ ಕೊರತೆಯಿದೆ. ಕೃಷಿ ಇಲಾಖೆಯಲ್ಲಿ ರಾಜ್ಯದಾದ್ಯಂತ ಶೇ.52 ಹುದ್ದೆ ಖಾಲಿಯಿದ್ದು ಪ್ರಸಕ್ತ ವರ್ಷದಲ್ಲಿ ಕೋವಿಡ್ ಹಿನ್ನೆಲೆ ಅನುದಾನದ ಕೊರತೆಯಿಂದಾಗಿ ಯಾವುದೇ ಹೊಸ ಹುದ್ದೆ ಭರ್ತಿಮಾಡಲು ಕ್ರಮವಹಿಸಿಲ್ಲ. ಮುಂದಿನ ಸಾಲಿನಲ್ಲಿ ಹುದ್ದೆಗಳ ಭರ್ತಿಮಾಡಲು ಕ್ರಮವಹಿಸುವುದಾಗಿ ತಿಳಿಸಿದರು.

ಯೂರಿಯಾ ದುರ್ಬಳಕೆ ಪ್ರಕರಣ ಪತ್ತೆ: ರಾಜ್ಯದ ಮಾಲೂರಿನ ಕಂಪೆನಿಯೊಂದು ವೇಮಗಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಬಿಲ್ ಮಾಡಿದ್ದ ಯೂರಿಯಾವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಜಾಲವೊಂದನ್ನು ಪತ್ತೆ ಮಾಡಲಾಗಿದೆ. ಈ ಕಂಪೆನಿಯು ಯುರಿಯಾದಲ್ಲಿನ ನೈಟ್ರೋಜನ್ ಅಂಶವನ್ನು ತೆಗೆದು ಇತರೆ ರಾಸಾಯನಿಕ ತಯಾರಿಕೆಗೆ ಬಳಕೆ ಮಾಡುತ್ತಿದ್ದುದು ಕಂಡುಬಂದಿದೆ. ಈ ಹಿನ್ನೆಲೆ ಯಾರಾದರೂ ದುರ್ಬಳಕೆ ಮಾಡುವುದು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಒಂದೇ ಬೆಳೆ – ಒಂದೇ ಮಾರುಕಟ್ಟೆ ಯೋಜನೆಯು ರೈತರಿಗೆ ಸಹಕಾರಿಯಾಗಲಿದ್ದು ಈ ಹಿಂದೆ ರೈತರು ತಾವು ಬೆಳೆದ ಬೆಳೆಯನ್ನು ಎಪಿಎಂಸಿಯಲ್ಲಿ ಮಾರಾಟ ಮಾಡಬೇಕಿತ್ತು. ಒಂದೊಮ್ಮೆ ಅಂತರರಾಜ್ಯ ಮಾರುಕಟ್ಟೆಗೆ ಕೊಂಡೊಯ್ಯಬೇಕಿದ್ದಲ್ಲಿ ಸೆಸ್ ಪಾವತಿ ಮಾಡಬೇಕಿತ್ತು. ಈ ನೂತನ ಯೋಜನೆಯಿಂದ ರೈತ ತಾನು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಯಾರಿಗೆ ಬೇಕಾದರೂ ಮಾರಾಟ ಮಾಡಬಹುದಾಗಿದೆ ಎಂದು ತಿಳಿಸಿದರು.

ಅಧಿಕಾರಿಗೆ ತರಾಟೆ: ರಸಗೊಬ್ಬರ ಫೆಡರೇಷನ್‍ನ ಅಧಿಕಾರಿ ಜಯಶಂಕರ್ ಅವರ ಉತ್ತರದಿಂದ ಅತೃಪ್ತರಾದ ಸಚಿವರು ನೀವು ಫೆಡರೇಷನ್‍ನವರು ನಾವು ಕೊಟ್ಟ ರಸಗೊಬ್ಬರವನ್ನು ಕೊಡುವ ಕೆಲಸವನ್ನು ಮಾಡಬೇಕು. ಅದು ಬಿಟ್ಟು ರೈತರನ್ನು ಅದೇ ಖರೀದಿ ಮಾಡಿ,  ಇದು ಖರೀದಿ ಮಾಡಿ ಎಂದು ಬಲವಂತ ಮಾಡಬಾರದು ಎಂದು ತರಾಟೆಗೆ ತೆಗೆದುಕೊಂಡರು.

ಇದೇ ವೇಳೆ ಆರ್.ಆರ್.ನಗರ ಮತ್ತು ಶಿರಾ ಉಪಚುನಾವಣೆ ಸಂಬಂಧ ಮಾತನಾಡಿ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಆರ್.ನರೇಂದ್ರ, ಜಂಡಿ ಕೃಷಿ ನಿರ್ದೇಶಕಿ ಚಂದ್ರಕಲಾ, ಸಹಾಯಕ ಕೃಷಿ ನಿರ್ದೇಶಕಿ ಸುಂದ್ರಮ್ಮ, ಕೃಷಿ ಇಲಾಖೆ ಅಧಿಕಾರಿಗಳಾದ ರಘುವೀರ್, ದೊರೆಸ್ವಾಮಿ, ಧರ್ಮೇಂದ್ರ ಇನ್ನಿತರರು ಹಾಜರಿದ್ದರು.

ಹೆಚ್ಚುವರಿಯಾಗಿ ಕೃಷಿ ಯಂತ್ರೋಪಕರಣ ವಿತರಣೆ ? :  ಜಿಲ್ಲೆಗೆ ಹೆಚ್ಚುವರಿಯಾಗಿ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮವಹಿಸುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.

ರಾಜ್ಯದ ಧಾರ್ಮಿಕ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ವೇಳೆ ಪಟ್ಟಣದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.

ಈ ವೇಳೆ ಶಾಸಕ ನರೇಂದ್ರ ಮಾತನಾಡಿ ಜಿಲ್ಲೆಯಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದವರು ಮತ್ತು ಹಿಂದುಳಿದ ವರ್ಗದವರು ಹೆಚ್ಚಾಗಿದ್ದಾರೆ. ಆದರೆ ಇಲಾಖೆ ಮೂಲಕ ನೀಡುತ್ತಿರುವ ಟ್ರಾಕ್ಟರ್, ಟಿಲ್ಲರ್ ಮತ್ತು ಟಾರ್ಪಲಿನ್‍ಗಳನ್ನು ಬೇಡಿಕೆಗೆ ಅನುಗುಣವಾಗಿ ವಿತರಿಸಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಹೆಚ್ಚಿನ ಅನುದಾನ ನೀಡಿ ರೈತರಿಗೆ ಸವಲತ್ತು ಕಲ್ಪಿಸಬೇಕು ಎಂದು ಮನವಿ ಮಾಡಿದರು. ಬಳಿಕ ಹನೂರು ನೂತನ ತಾಲೂಕಾಗಿ ಎರಡೂವರೆ ವರ್ಷ ಕಳೆದಿದ್ದರೂ ಇನ್ನೂ ಸಹ ಇಲಾಖೆ ವಿಭಜನೆಯಾಗಿಲ್ಲ. ಕೂಡಲೇ ನೂತನ ತಾಲೂಕಿನಲ್ಲಿ ಕಚೇರಿ ತೆರೆದು ಸಿಬ್ಬಂದಿ ನಿಯೋಜಿಸಬೇಕು ಎಂದು ತಿಳಿಸಿದರು. ಈ ವೇಳೆ ಶಾಸಕರ ಮನವಿ ಆಲಿಸಿದ ಸಚಿವರು ಕೂಡಲೇ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮವಹಿಸುವ ಭರವಸೆ ನೀಡಿದರು.

ಬಳಿಕ ರೈತ ಸಂಘದ ಮುಖಂಡರ ನಿಯೋಗ ಸಚಿವರನ್ನು ಭೇಟಿ ಮಾಡಿ ಕಬ್ಬು ಬೆಳೆಗಾರರು ಸಂಕಷ್ಟ ಎದರಿಸುತ್ತಿದ್ದು 17-18 ತಿಂಗಳು ಕಳೆದಿದ್ದರೂ ಕಬ್ಬಿನ ಕಟಾವಿಗೆ ಅನುಮತಿ ನೀಡುತ್ತಿಲ್ಲ. ಇದರಿಂದ ರೈತರು ಸಮಸ್ಯೆ ಅನುಭವಿಸುವಂತಾಗಿದೆ ಎಂದು ಅಹವಾಲು ಸಲ್ಲಿಸಿದ್ದರು. ಈ ಸಂಬಂಧ ಕ್ರಮವಹಿಸುವ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next