Advertisement

ಉದರನಿಮಿತ್ತಂ ಸುಳ್ಳಿನ ವೇಷಂ

06:39 PM Aug 12, 2019 | mahesh |

ಇಲ್ಲಿ ನಮ್ಮ ಪರಿಚಯದವರ ಮದುವೆ ನಡೀತಿದೆ. ಅದಕ್ಕೆ ಬಂದಿದ್ದೀನಿ. ಇವರೆಲ್ಲ ನನ್ನ ಫ್ರೆಂಡ್ಸು. ನೀನೇನು ದಿಢೀರ್‌ ಬಂದಿದೀಯಲ್ಲ ಮಂಜೂ… ಎಂದೆ. ಅವನು ಬೆರಗಿನಿಂದ ನೋಡುತ್ತಾ- ಅಣ್ಣಾ, ಇಲ್ಲಿ ನಡೀತಿರೋದು ನಮ್ಮ ಅಕ್ಕನ ಮದುವೆ ಅಂದ!

Advertisement

ಪಿ.ಯು.ಸಿ. ಓದುತ್ತಿದ್ದ ಸಮಯವದು. ನಾನಿದ್ದ ಹಾಸ್ಟೆಲ್‌ನಲ್ಲಿ ಬರೀ ಮಧ್ಯಾಹ್ನ ಹಾಗೂ ರಾತ್ರಿ ಎರಡೇ ಹೊತ್ತು ಊಟ. ಬೆಳಗಿನ ತಿಂಡಿ ಇರಲಿಲ್ಲ. ಇದಕ್ಕೆ ಹಾಸ್ಟೆಲ್‌ ಬಳಿ ಇದ್ದ ವೀರೇಶನ ಕ್ಯಾಂಟೀನೇ ಗತಿ. ಎಂಥಾ ಸ್ಟಾರ್‌ ಹೋಟೆಲ್‌ನ ರುಚಿಯನ್ನೂ ಮೀರಿಸುವಂತೆ ಇರುತ್ತಿತ್ತು ಇಲ್ಲಿನ ತಿಂಡಿ. ಬೆಳಗ್ಗೆ 8 ಕ್ಕೆ ಕಾಲೇಜು ಪ್ರಾರಂಭವಾಗುತ್ತಿದ್ದುದರಿಂದ, ಇಲ್ಲಿ ತಿಂಡಿಯನ್ನು ಪಾರ್ಸೆಲ್‌ ಕಟ್ಟಿಸಿಕೊಂಡು ಕಾಲೇಜಿಗೆ ಹೋಗುತ್ತಿದ್ದೆ. ಮಧ್ಯಾಹ್ನದ ಊಟ ಹಾಸ್ಟೆಲ್‌ನಲ್ಲಿ. ಅಲ್ಲಿ ಪ್ರತಿದಿನ ಜೋಳದ ಮುದ್ದೆ, ಸಾಂಬಾರ್‌. ಅಷ್ಟೇನೂ ರುಚಿಯಾಗಿರುತ್ತಿರಲಿಲ್ಲ. ಅಪರೂಪಕ್ಕೊಮ್ಮೆ ಪಾಯಸದ ಊಟ. ಮನೆಯಲ್ಲಿ ಬಡತನ. ಹೀಗಾಗಿ, ಹಾಸ್ಟೆಲ್‌ ಬದಲಿಸಲು ಸಾಧ್ಯವೇ ಇರಲಿಲ್ಲ.

ನಾನು, ಸುಧಾಕರ, ಲಿಂಗ, ಮೂರೂ ಜನ ಆತ್ಮೀಯ ಹಾಸ್ಟೆಲ್‌ಮೆಟ್‌ಗಳು. ಇವರಿಗೂ ಊಟದ್ದೇ ಸಮಸ್ಯೆ. ಹಾಸ್ಟೆಲ್‌ನಲ್ಲಿ ಹಬ್ಬದಂದು ಮಾತ್ರ ಪಾಯಸದೂಟ! ಆಗ ಖುಷಿ. ಬದುಕಲು ತಿನ್ನಬೇಕು. ಆದರೆ ತಿನ್ನಲೆಂದೇ ಬದುಕಬಾರದು ಎಂಬ ನುಡಿ ತಿಳಿದಿತ್ತಾದರೂ, ಜಡ್ಡು ಹಿಡಿದ ನಾಲಗೆ ಮಾತ್ರ ವಿಶೇಷ ಊಟವನ್ನು ಬಯಸುತ್ತಿತ್ತು.

ಹೀಗಾಗಿ, ಒಂದು ಸಲ ಮನದ ಆಸೆ ಈಡೇರಿಸಿಕೊಳ್ಳಲು ನಾನು, ನನ್ನ ಗೆಳೆಯರು ಆಗಿನ ಕಾಲದಲ್ಲಿ ದಾವಣಗೆರೆಯಲ್ಲಿ ಪ್ರಸಿದ್ಧವಾಗಿದ್ದ, ಸಿರಿವಂತರ ಮದುವೆಗಳು ಮಾತ್ರ ನಡೆಯುತ್ತಿದ್ದ ಗುಂಡಿ ಛತ್ರಕ್ಕೆ ಹೋಗಬೇಕೆಂದು ತೀರ್ಮಾನಿಸಿದೆವು. ಅಲ್ಲಿ ಯಾರಾದರೂ ಪರಿಚಿತರು ಸಿಕ್ಕರೆ ಗತಿ ಏನು? ಎಂಬ ಪ್ರಶ್ನೆ ನಮ್ಮಲ್ಲಿ ಮೂಡಿದ್ದರಿಂದ ಒಂದಷ್ಟು ಗ್ರೌಂಡ್‌ ವರ್ಕ್‌ ಮಾಡಿಕೊಂಡಿದ್ದೆವು. ಛತ್ರದಲ್ಲಿ ಮದುವೆ ಇರೋ ಬಗ್ಗೆ ಖಾತ್ರಿಪಡಿಸಿಕೊಂಡು, ಗಂಡು, ಹೆಣ್ಣಿನ ಹೆಸರು, ಊರಿನ ಮಾಹಿತಿ ಕಲೆ ಹಾಕಿದ್ದೆವು. ಛತ್ರದ ಮುಂದೆ ನಿಂತಾಗ, ಸುತ್ತಲೂ ಝಗಮಗಿಸುವ ವಿದ್ಯುತ್‌ ಅಲಂಕಾರ ನೋಡಿ, ಇದು ಭಾರೀ ಕುಳದ ಮದುವೆಯೇ ಇರಬೇಕು ,ಭೂರಿ ಭೋಜನದ ವ್ಯವಸ್ಥೆ ಇರುತ್ತದೆ ಎಂದು ಕಲ್ಪಿಸಿಕೊಂಡು, ಬಾಯಲ್ಲಿ ನೀರೂರಿಸಿಕೊಂಡು ಹೊರಟೆವು. ಯಾರಿಗೂ ಅಪರಿಚಿತರು ಎಂಬ ಅನುಮಾನ ಬಾರದಿರಲೆಂದು ಇರುವ ಬಟ್ಟೆಗಳಲ್ಲೇ ಟ್ರಿಮ್ಮಾಗಿ ಕಾಣುವಂತೆ ನೋಡಿಕೊಂಡಿದ್ದೆವು.

ಆತನಕ ಎಲ್ಲಾ ಅಂದುಕೊಂಡಂತೆಯೇ ನಡೆದು, ಇನ್ನೇನು ಛತ್ರದೊಳಗೆ ಎರಡು ಹೆಜ್ಜೆ ಹೋಗಿಲ್ಲ, ಅಷ್ಟರೊಳಗೆ ನನ್ನ ಎದುರಿಗೆ ನನ್ನ ಪ್ರೌಢ ಶಾಲಾ ಗೆಳೆಯ, ನನ್ನ ಜ್ಯೂನಿಯರ್‌ ಒಬ್ಬ ಸಿಕ್ಕ.

Advertisement

ನನ್ನ ಮುಖ ಪರಿಚಯ ಚೆನ್ನಾಗಿಯೇ ಇದ್ದ ಮಂಜುನಾಥನೇ ಅವನು! ನಾನು ಅವನ ಮುಖ ಕಂಡೊಡನೆಯೇ ತಬ್ಬಿಬ್ಟಾಗಿ, ನನ್ನ ಪರಿಚಿತರ ಮದುವೆಗೇ ಬಂದಿದ್ದೇನೆ ಎಂದು ಅವನ ಎದುರು ತೋರ್ಪಡಿಸಿಕೊಳ್ಳಲು, ಅವನು ಮಾತಾಡುವ ಮುನ್ನವೇ ನಾನೇ, “ಏನ್‌ ಮಂಜು ಇಲ್ಲಿ?’ ಎಂದು ಪ್ರಶ್ನಿಸಿದೆ. ಅದಕ್ಕವನು ಅತ್ಯಾಶ್ಚರ್ಯ ಮುಖ ಭಾವದಿಂದ “ಅಣ್ಣಾ, ಇಲ್ಲಿ ನಡೆಯುತ್ತಿರುವುದು ನನ್ನ ಸ್ವಂತ ಅಕ್ಕನ ಮದುವೆ’ ಎಂದ! ಈ ಉತ್ತರ ಕೇಳಿ, ನಾನು ತುಸು ದಿಗಿಲುಗೊಂಡೆ. ಅವನಿಗೆ ಏನು ಮರು ಉತ್ತರ ಕೊಡಬೇಕೆಂದೇ ತಿಳಿಯಲಿಲ್ಲ. “ಕರೆಯದೇ ಬರುವವನ…’ ಎಂಬ ಸರ್ವಜ್ಞನ ಮಾತು ನೆನಪಿಸಿಕೊಂಡು, ಅಲ್ಲಿ ಉಂಟಾದ ಮುಜುಗರದಿಂದ ಪಾರಾಗಲು, ನಾವು ಹುಡುಗನ ಕಡೆಯಿಂದ ನಾವು ಬಂದಿದ್ದೇವೆ ಎಂದು ವರನ ಊರಿನ ಹೆಸರು ಹೇಳುವ ಮೂಲಕ ತಪ್ಪಿಸಿಕೊಂಡೆ. ಅವನು “ಹೌದಾ, ಊಟ ಮುಗಿಸಿಕೊಂಡು ಹೋಗಿ’ ಎಂದ.

ಒಂದೊಮ್ಮೆ ಅವನು ಹೆಚ್ಚಿನ ಮಾಹಿತಿ ಕೇಳಿದ್ದರೆ ನಮ್ಮ ಬಂಡವಾಳ ಬಯಲಾಗುತ್ತಿತ್ತು.ಅದಕ್ಕೆ ಅವಕಾಶ ಕೊಡದೇ, ತಕ್ಷಣ ಅಲ್ಲಿಂದ ಊಟದ ಹಾಲ್‌ಗೆ ಹೋಗಿ, ಮತ್ತಿನ್ಯಾರಾದರೂ ಸಿಕ್ಕಿ ಎಲ್ಲಿ ನಮ್ಮ ನಿಜ ಸ್ಥಿತಿ ತಿಳಿಯುತ್ತದೋ ಎಂಬ ಭಯದಿಂದ ಊಟ ಗಬಗಬನೇ ತಿಂದು ಹಾಸ್ಟೆಲ್‌ಗೆ ವಾಪಾಸ್ಸಾದೆವು. ಈಗಲೂ ಆ ಛತ್ರದ ಮುಂದೆ ಹೋಗುವಾಗ ಆ ಘಟನೆಯು ನೆನಪಾಗಿ , ಮನದಲ್ಲೇ ನಕ್ಕು ಮುಂದೆ ಸಾಗುತ್ತೇನೆ.

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ

Advertisement

Udayavani is now on Telegram. Click here to join our channel and stay updated with the latest news.

Next