Advertisement

‘ನಟನಾ ಕ್ಷೇತ್ರ ಕೆಟ್ಟದ್ದೆಂಬ ತಪ್ಪು ಕಲ್ಪನೆಯಿಂದ ಹೊರಬರಬೇಕು’

02:20 AM Jul 08, 2017 | Team Udayavani |

ನೆಹರೂನಗರ: ಧಾರಾವಾಹಿ, ಸಿನೆಮಾ ಮೊದಲಾದವು ಕೆಟ್ಟ ಕ್ಷೇತ್ರಗಳೆಂಬ ಭ್ರಮೆಗೆ ಒಳಗಾದವರು ಹಲವರಿದ್ದಾರೆ. ಇಂತಹ ತಪ್ಪು ಕಲ್ಪನೆಯಿಂದ ಹೊರಬಂದು ವ್ಯಕ್ತಿಯಲ್ಲಿನ ಪ್ರತಿಭೆಯ ಅನಾವರಣಕ್ಕೆ ಈ ಕ್ಷೇತ್ರಗಳು ಸಹಕಾರಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಬೆಂಗಳೂರು ಖಾಸಗಿ ವಾಹಿನಿಯ ಮನೋರಂಜನಾ ಕಾರ್ಯಕ್ರಮ ವಿಭಾಗದ ನಿರ್ದೇಶಕ ದೀಪಕ್‌ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಹಾಗೂ ಲಲಿತ ಕಲಾ ಸಂಘದ ಸಹಯೋಗದಲ್ಲಿ ಆಯೋಜಿಸಲಾದ ವಾಹಿನಿಯ ಧಾರಾವಾಹಿಗಳಿಗಾಗಿ ನಟ, ನಟಿಯರ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು. ಇಂದಿನ ಯುವ ಸಮೂಹದಲ್ಲಿ ಅದಮ್ಯವಾದ ಆಸಕ್ತಿ, ಸಾಮರ್ಥ್ಯ ಇದೆ. ಅದನ್ನು ಹೊರಜಗತ್ತಿಗೆ ಕಾಣಿಸುವ ಪ್ರಯತ್ನಕ್ಕೆ ಹೆತ್ತವರು, ಸಮಾಜ ಸಹಕರಿಸಬೇಕಾದ ಆವಶ್ಯಕತೆ ಇದೆ. ನಮ್ಮ ನಡುವೆಯೇ ಇರಬಹುದಾದ ಅದ್ಭುತ ಕಲಾವಿದನನ್ನು ಗುರುತಿಸದಿದ್ದರೆ ಅದರಿಂದ ನಟನಾ ಕ್ಷೇತ್ರಕ್ಕೇ ನಷ್ಟವಾಗುತ್ತದೆ. ಇದನ್ನು ನಾವೆಲ್ಲ ಮನ ಗಾಣಬೇಕು ಎಂದರು.

Advertisement

ಭಾವನೆ ವ್ಯಕ್ತವಾಗಬೇಕು
ನಟನೆ ಎಂದರೆ ಕೇವಲ ವಾಕ್ಚಾತುರ್ಯವಲ್ಲ. ಕೊಟ್ಟ ವಿಷಯವನ್ನು ಕೇವಲ ಗಿಣಿ ಪಾಠದಂತೆ ಒಪ್ಪಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಮುಖದ ಭಾವನೆ, ಒಟ್ಟಾರೆ ಅಭಿನಯ ಎಲ್ಲವೂ ನಟನೆಯಲ್ಲಿ ಪ್ರಾಮುಖ್ಯ ಪಡೆಯುತ್ತದೆ. ನಿರ್ಭಾವುಕವಾಗಿ ವ್ಯಕ್ತಪಡಿಸುವ ಮಾತುಗಳು ಯಾರನ್ನೂ ನಟ – ನಟಿಯನ್ನಾಗಿ ರೂಪಿಸಲಾರವು. ಆದುದರಿಂದ ಮುಖದಲ್ಲಿ  ಭಾವನೆ ಕಾಣಿಸುವ ಯತ್ನಕ್ಕೆ ಪ್ರತಿಯೊಬ್ಬರೂ ತೊಡಗಬೇಕು ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ| ಪೀಟರ್‌ ವಿಲ್ಸನ್‌ ಪ್ರಭಾಕರ್‌ ಅವರು ಮಾತನಾಡಿ, ಇಂದು ನಟನಾ ಕ್ಷೇತ್ರವೂ ಒಂದು ಅತ್ಯುತ್ತಮ ಉದ್ಯೋಗದಾತ ಕ್ಷೇತ್ರವೆನಿಸಿದೆ. ಹಾಗಾಗಿ ವಿದ್ಯಾರ್ಥಿಗಳು ಇಂತಹ ಆಯ್ಕೆ ಪ್ರಕ್ರಿಯೆಯನ್ನು ಗಂಭೀರವಾಗಿ ಸ್ವೀಕರಿಸಬೇಕು. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಈಗಾಗಲೇ ಸಾಕಷ್ಟು ಕಿರುಚಿತ್ರ ತಯಾರಿ, ಸಾಕ್ಷ್ಯ ಚಿತ್ರ ರಚನೆ ಮೊದಲಾದ ಕಾರ್ಯಗಳಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ ಎಂದರು.

ಲಲಿತ ಕಲಾ ಸಂಘದ ಸಂಚಾಲಕಿ ಡಾ| ದುರ್ಗಾರತ್ನಾ, ವಾಹಿನಿಯ ಉದ್ಯೋಗಿ ಸಾಗರ್‌ ಹೆಗ್ಡೆ ನಾರಾವಿ ಉಪಸ್ಥಿತರಿದ್ದರು. ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ  ರಾಕೇಶ್‌ ಕುಮಾರ್‌ ಕಮ್ಮಜೆ ಸ್ವಾಗತಿಸಿ, ಪತ್ರಿಕೋದ್ಯಮ ಉಪನ್ಯಾಸಕಿ ಭವ್ಯಾ ಪಿ.ಆರ್‌. ನಿಡ್ಪಳ್ಳಿ ವಂದಿಸಿದರು. ಸಭಾ ಕಾರ್ಯಕ್ರಮದ ಅನಂತರ ಆಯ್ಕೆ ಪ್ರಕ್ರಿಯೆ ನಡೆಯಿತು. ಸುಮಾರು ಮುನ್ನೂರೈವತ್ತು ಮಂದಿ ವಿದ್ಯಾರ್ಥಿಗಳು ಹಾಗೂ ವಿವಿಧ ಕಡೆಗಳಿಂದ ಆಸಕ್ತಿಯಿಂದ ಬಂದ ನೂರಕ್ಕೂ ಹೆಚ್ಚು ಮಂದಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next