Advertisement

ಮಾನವೀಯತೆ ಆಧಾರದಲ್ಲಿ ಜಾರಿಗೆ ತಂದ ಕಾಯ್ದೆ: ಡಿ.ವಿ.ಸದಾನಂದಗೌಡ

09:57 AM Jan 06, 2020 | Sriram |

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜನರಿಗೆ ವಾಸ್ತವಾಂಶ ತಿಳಿಸುವ ಬಿಜೆಪಿ ಹಮ್ಮಿಕೊಂಡಿರುವ “ಮನೆ ಮನೆ ಸಂಪರ್ಕ’ ಅಭಿಯಾನಕ್ಕೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ಚಾಲನೆ ನೀಡಿದರು.

Advertisement

ಶೆಟ್ಟಿಹಳ್ಳಿ ವಾರ್ಡ್‌ನ ಲೇಕ್‌ ವ್ಯೂ ಡಿಫೆನ್ಸ್‌ ಕಾಲೋನಿ ನಿವಾಸಿಗಳಾದ ನಿವೃತ್ತ ಏರ್‌ ಮಾರ್ಷಲ್‌ ಬಿ.ಯು. ಚೆಂಗಪ್ಪ, ವೈದ್ಯ ಡಾ.ಜಗದೀಶ ಶೆಟ್ಟಿ, ಉದ್ಯಮಿ ಗೋಪಾಲ್‌ ಇತರರ ಮನೆಗೆ ಭೇಟಿ ನೀಡಿದ ಸದಾನಂದಗೌಡ ಅವರು ಕಾಯ್ದೆ ಬಗ್ಗೆ ವಿವರ ನೀಡಿದರು. ಜತೆಗೆ ಸರಿಯಾದ ಮಾಹಿತಿಯನ್ನು ಇತರರಿಗೂ ತಿಳಿಸುವಂತೆ ಮನವಿ ಮಾಡಿದರು.

ಬಳಿಕ ಮಾತನಾಡಿದ ಸದಾನಂದಗೌಡ, ಕಾಯ್ದೆಯಿಂದ ದೇಶದ ಯಾವುದೇ ಮುಸ್ಲಿಂ ಸಮುದಾಯದವರಿಗೂ ತೊಂದರೆಯಾಗದು. ಆದರೂ ಕಾಂಗ್ರೆಸ್‌ನವರು ಷಡ್ಯಂತ್ರ ನಡೆಸಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಪಕ್ಷದ ಪ್ರಣಾಳಿಕೆಯಲ್ಲೇ ಇದ್ದು, ಅದರಂತೆ ಜಾರಿಗೊಳಿಸಲಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘಾನಿಸ್ಥಾನದಲ್ಲಿ ಧಾರ್ಮಿಕ ಶೋಷಣೆಗೆ ಒಳಗಾದವರಿಗೆ ಮಾನವೀಯತೆ ಆಧಾರದ ಮೇಲೆ ಪೌರತ್ವ ನೀಡುವ ಕಾಯ್ದೆ ಇದು ಎಂದು ಹೇಳಿದರು.

ಈ ಕಾಯ್ದೆಯಿಂದ ದೇಶದ ಅಲ್ಪಸಂಖ್ಯಾತರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗುವುದಿಲ್ಲ. ಹಾಗಾಗಿ ಸುಳ್ಳು ಮಾಹಿತಿ ನೀಡಿ ದಾರಿ ತಪ್ಪಿಸುವವರ ಬಗ್ಗೆ ಎಚ್ಚರದಿಂದ ಇರಬೇಕು. ಜನರೂ ಈಗ ಎಚ್ಚೆತ್ತುಕೊಂಡಿದ್ದು, ಕಾಂಗ್ರೆಸ್‌ನ ಪಿತೂರಿ ಅರ್ಥವಾಗುತ್ತಿದೆ. ಯಾರೊಬ್ಬರೂ ಇಂತಹ ಪಿತೂರಿಗಳಿಗೆ ಬಲಿಯಾಗಬಾರದು ಎಂದು ಮನವಿ ಮಾಡಿದರು. ಮಾಜಿ ಶಾಸಕ ಎಸ್‌.ಮುನಿರಾಜು ಇತರರು ಪಾಲ್ಗೊಂಡಿದ್ದರು.

ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ
ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರ ಮನೆಗೆ ಭೇಟಿ ನೀಡಿ ಕಾಯ್ದೆ ಬಗ್ಗೆ ಮಾಹಿತಿ ನೀಡುವ ಮೂಲಕ “ಮನೆ ಮನೆ ಸಂಪರ್ಕ ಅಭಿಯಾನ’ಕ್ಕೆ ಚಾಲನೆ ನೀಡಿದರು. ಹಾಗೆಯೇ ಹಿರಿಯ ನಟಿ ಗಿರಿಜಾ ಲೋಕೇಶ್‌, ಬೃಹತ್‌ ಬೆಂಗಳೂರು ಹೋಟೆಲ್‌ಗ‌ಳ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಟಾರ್‌, ವೈದ್ಯ ರುದ್ರೇಶ್‌ ಸೇರಿದಂತೆ ಹಲವರ ಮನೆಗೆ ಭೇಟಿ ನೀಡಿ ಕಾಯ್ದೆಗೆ ಬಗ್ಗೆ ಮಾಹಿತಿ ನೀಡಿದರು.

Advertisement

ಈ ವೇಳೆ ಮಾತನಾಡಿದ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ಪ್ರತಿಪಕ್ಷಗಳು, ಕೆಲ ಸಂಘಟನೆಗಳಿಂದ ಜನರನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಇದು ಮಾನವೀಯತೆ ಆಧಾರದಲ್ಲಿ ಜಾರಿಗೆ ತಂದ ಕಾನೂನಾಗಿದ್ದು, ಇದನ್ನು ಒಪ್ಪಿಕೊಳ್ಳುವ ದೊಡ್ಡತನ ತೋರಬೇಕು ಎಂದು ಮನವಿ ಮಾಡಿದರು.

ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಎರಡನ್ನೂ ಥಳಕು ಹಾಕುವ ಪ್ರಯತ್ನ ನಡೆಯುತ್ತದೆ. ಈಗ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಚರ್ಚೆಯಾಗಬೇಕು. ಕಾಯ್ದೆಯು ಪಾಕಿಸ್ತಾನ, ಬಾಂಗ್ಲಾ ಹಾಗೂ ಆಫ್ಘಾನಿಸ್ತಾನದಿಂದ ನೊಂದು ಬಂದ ಭಾರತೀಯ ಮೂಲದವರಿಗೆ ಪೌರತ್ವ ಕೊಡುವ ಕಾನೂನಾಗಿದೆ. ಇದರಲ್ಲಿ ರಾಜಕೀಯ ಮಾಡಬಾರದು. ಹಾಗಿದ್ದರೂ ಇದಕ್ಕೆ ಕೋಮು ಬಣ್ಣ ಬಳಿಯಲಾಗುತ್ತಿದೆ. ಮುಸ್ಲಿಮರ ವಿರುದ್ಧದ ಕಾನೂನು ಎಂಬಂತೆ ಬಿಂಬಿಸುವ ಪ್ರಯತ್ನ ನಡೆಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಕಾಂಗ್ರೆಸ್‌ನವರೇ ಎನ್‌ಆರ್‌ಸಿ ತಂದಿದ್ದು, ಇದೀಗ ಜನರನ್ನು ದಾರಿ ತಪ್ಪಿಸುವ ಮೊದಲು ಕಾಂಗ್ರೆಸ್‌ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮುಸ್ಲಿಮರು ನಮ್ಮೊಂದಿಗೆ ಬದುಕುತ್ತಿದ್ದಾರೆ. ಇಲ್ಲಿಂದ ಯಾವುದೇ ಮುಸ್ಲಿಂ ಕುಟುಂಬ ವಲಸೆ ಹೋಗಿರುವುದನ್ನು ಕಂಡಿದ್ದೀರಾ. ಪೂರ್ವ, ಪಶ್ಚಿಮ ಪಾಕಿಸ್ತಾನದಲ್ಲಿ ಕಿರುಕುಳ ತಾಳಲಾರದೆ ನಿತ್ಯ ಇಲ್ಲಿಗೆ ವಲಸೆ ಬರುತ್ತಿದ್ದಾರೆ. ಅಲ್ಲಿ ಬದುಕಲಾಗದವರು ಎಲ್ಲಿಗೆ ಹೋಗಬೇಕು. ಅವರು ಇಲ್ಲಿಗೆ ಬರಬೇಕು. ಇದನ್ನು ವಿರೋಧಿಸುವುದು ಸರಿಯಲ್ಲ ಎಂದು ತಿಳಿಸಿದರು.

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಹಿಂದೆ ಸಿಎಎ ಜಾರಿಯಾಗಬೇಕು ಎಂದಿದ್ದರು. ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರು ಅವರು ಈ ಬಗ್ಗೆ ಹೇಳಿದ್ದರು. ಆದರೆ ಈಗ ಪ್ರತಿಪಕ್ಷಗಳು, ಕೆಲ ಸಂಘಟನೆಗಳು ಸಮಾಜಕ್ಕೆ ತಪ್ಪು ಮಾಹಿತಿ ನೀಡುವ ಪ್ರಯತ್ನ ಮಾಡುತ್ತಿವೆ. ಜನರ ದಾರಿ ತಪ್ಪಿಸುತ್ತಿರುವ ಪ್ರತಿಪಕ್ಷಗಳ ಪ್ರಯತ್ನವನ್ನು ಬಯಲಿಗೆಳೆದು, ಸರಿಯಾದ ವಿಚಾರವನ್ನು ಎಲ್ಲರಿಗೂ ತಿಳಿಸುವ ಸಲುವಾಗಿ “ಮನೆ ಮನೆ ಸಂಪರ್ಕ ಅಭಿಯಾನ’ ಆರಂಭಿಸಲಾಗಿದೆ. ಅದರಂತೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿಗಳಾದ ಚಂದ್ರಶೇಖರ ಕಂಬಾರ ಅವರ ಮನೆಗೆ ಭೇಟಿ ನೀಡಿ ಅವರೊಂದಿಗೆ ವಿಚಾರ ಹಂಚಿಕೊಂಡಿದ್ದೇನೆ ಎಂದು ಹೇಳಿದರು.

ಪಕ್ಷದ ಪ್ರಣಾಳಿಕೆಯಲ್ಲೂ ಪೌರತ್ವ ತಿದ್ದುಪಡಿ ಕಾಯ್ದೆ ತರುವ ಬಗ್ಗೆ ಭರವಸೆ ನೀಡಿದ್ದೆವು. ಈ ಕಾಯ್ದೆ ಯಾವುದೇ ಒಂದು ಕೋಮು ಅಥವಾ ಸಮುದಾಯದ ವಿರುದ್ಧವಲ್ಲ. ಈ ವಿಚಾರವಾಗಿ ಜಾಗೃತಿ ಮೂಡಿಸುವುದು ಅಭಿಯಾನದ ಉದ್ದೇಶ. ಈ ಬಗ್ಗೆ ಯಾವುದೇ ಪ್ರಚೋದನಕಾರಿ ಭಾಷಣ ಸರಿಯಲ್ಲ. ಗೊಂದಲಕ್ಕೆ ನಿವಾರಿಸಿಕೊಂಡು ಸಾಮರಸ್ಯದ ಜೀವನ ನಡೆಸೋಣ ಎಂದು ಕರೆ ನೀಡಿದರು.

ಸಕಾರಾತ್ಮಕ ಚಿಂತನೆ ಅಗತ್ಯ
ಡಾ.ಚಂದ್ರಶೇಖರ ಕಂಬಾರ, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಹಿಂದೆ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ಮಾತನಾಡಿದ್ದರು. ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರು ಅವರು ಈ ಬಗ್ಗೆ ಆಲೋಚಿಸಿದ್ದರು. ಆದರೆ ಈಗ ಅದರ ಮಹತ್ವ ಅರ್ಥವಾಗಿದೆ. ನಾವೆಲ್ಲರೂ ಈ ಬಗ್ಗೆ ಖಂಡಿತಾ ಆಲೋಚಿಸಬೇಕು. ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ದೂರುವ ಅಥವಾ ಸಮರ್ಥಿಸಿಕೊಳ್ಳುವ ಬದಲಿಗೆ ನಮ್ಮನ್ನು ನಾವು ಸಮರ್ಥಿಸಿಕೊಳ್ಳಬೇಕು. ಈ ಬಗ್ಗೆ ಸಕಾರಾತ್ಮಕ ಚಿಂತನೆ ಅಗತ್ಯ ಎಂದು ಪ್ರತಿಪಾದಿಸಿದರು.ಶಾಸಕ ಎಲ್‌.ಎ.ರವಿಸುಬ್ರಹ್ಮಣ್ಯ, ಪಾಲಿಕೆ ಸದಸ್ಯ ವೆಂಕಟೇಶ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next