ಚಿತ್ರ: ಆಕ್ಟ್ 1978
ನಿರ್ದೇಶನ: ಮಂಸೋರೆ
ನಿರ್ಮಾಣ: ದೇವರಾಜ್ ಆರ್.
ತಾರಾಗಣ: ಯಜ್ಞಾ ಶೆಟ್ಟಿ, ದತ್ತಣ್ಣ, ಶ್ರುತಿ, ಸಂಚಾರಿ ವಿಜಯ್, ಪ್ರಮೋದ್ ಶೆಟ್ಟಿ, ಬಿ. ಸುರೇಶ್, ಸುಧಾ ಬೆಳವಾಡಿ, ಶೋಭರಾಜ್ ಮತ್ತಿತರರು
ಕಳೆದ ವರ್ಷ ಸೆಟ್ಟೇರಿದ್ದ “ಆಕ್ಟ್-1978′ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು, ಈ ವಾರ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ವ್ಯವಸ್ಥೆಯ ವಿರುದ್ದ ಮಹಿಳೆಯೊಬ್ಬಳು ಹೇಗೆಲ್ಲ ಹೋರಾಡುತ್ತಾಳೆ ಅನ್ನೋ ಸಣ್ಣ ಝಲಕ್ ಟ್ರೇಲರ್‌ನಲ್ಲಿದ್ದು, ಸರ್ಕಾರಿ ಕಚೇರಿಯನ್ನೇ ಹೈಜಾಕ್ ಮಾಡುವ ದೃಶ್ಯಾವಳಿಗಳು ಜೊತೆಗೆ ಒಂದಷ್ಟು ಸಸ್ಪೆನ್ಸ್-ಥ್ರಿಲ್ಲರ್ ಅಂಶಗಳು ಗಮನ ಸೆಳೆಯುತ್ತಿವೆ.
ಗರ್ಭಿಣಿ ಲುಕ್‌ನಲ್ಲಿ ಹೊಟ್ಟೆಗೆ ಬಾಂಬ್ ಕಟ್ಟಿಕೊಂಡು ವ್ಯವಸ್ಥೆಯ ವಿರುದ್ದ ಹೋರಾಟಕ್ಕೆ ನಿಲ್ಲುವ ಯಜ್ಞಾ ಶೆಟ್ಟಿ ಪಾತ್ರ ಟ್ರೇಲರ್‌ನಲ್ಲಿ ಹೈಲೈಟ್ ಆಗಿದೆ. ಈ ಮೂಲಕ ಪಕ್ಕಾ ಮಹಿಳಾ ಕೇಂದ್ರಿತ ಕಥೆಯೊಂದನ್ನು ನಿರ್ದೇಶಕ ಮಂಸೋರೆ ತೆರೆಮೇಲೆ ಹೇಳಲು ಹೊರಟಿದ್ದಾರೆ. ಉಳಿದಂತೆ ಚಿತ್ರದ ಇತರ ಪಾತ್ರಗಳು, ತಾಂತ್ರಿಕ ಅಂಶಗಳು ಕೂಡ ನೋಡುಗರಿಗೆ ಒಂದಷ್ಟು ಭರವಸೆ ಮೂಡಿಸುವಂತಿದೆ.
ಸದ್ಯ “ಆಕ್ಟ್-1978′ ಟ್ರೇಲರ್ ಸೋಶಿಯಲ್ ಮೀಡಿಯಾಗಳಲ್ಲಿ ಜೋರಾಗಿ ಸದ್ದು ಮಾಡುತ್ತಿದ್ದು, ಚಿತ್ರದ ಬಗ್ಗೆ ನಿರೀಕ್ಷೆಯ ಮಾತುಗಳು ಕೇಳಿ ಬರುತ್ತಿವೆ. ಒಟ್ಟಾರೆ “ಆಕ್ಟ್-1978′ ಬಿಗ್ ಸ್ಕ್ರೀನ್ ಮೇಲೆ ಪ್ರೇಕ್ಷಕ ಪ್ರಭುಗಳಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಅನ್ನೋದು ಚಿತ್ರ ರಿಲೀಸ್ ಆದ ಮೇಲಷ್ಟೇ ಗೊತ್ತಾಗಲಿದೆ.
ಡೈರೆಕ್ಟರ್ ಸ್ಪೆಷಲ್ : ಐವರು ನಿರ್ದೇಶಕರ ಒಂದು ಸಿನಿಮಾ :
ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗಗಳು ಆಗುತ್ತಲೇ ಇರುತ್ತವೆ. ಅದರಲ್ಲೂ ಸಮಾನ ಮನಸ್ಕರು ಒಂದೆಡೆ ಸೇರಿದರೆ ಅಲ್ಲೊಂದು ಭಿನ್ನತೆ ಇರುತ್ತದೆ. ಈಗ ಕನ್ನಡ ಚಿತ್ರರಂಗದ ಐವರು ನಿರ್ದೇಶಕರು ಒಟ್ಟಾಗಿದ್ದಾರೆ. ಅದು ಒಂದು ಸಿನಿಮಾಕ್ಕಾಗಿ ಎಂಬುದು ವಿಶೇಷ.
ಹೌದು, ಐದು ಮಂದಿ ನಿರ್ದೇಶಕರು ಜೊತೆಯಾಗಿ ಒಂದು ಸಿನಿಮಾ ನಿರ್ದೇಶಿಸುವ ಪ್ರಯೋಗಕ್ಕೆ ಮುಂದಾಗಿದ್ದಾರೆ. ನಿರ್ದೇಶಕರಾದ ಯೋಗರಾಜ್ ಭಟ್, ಪವನ್ ಕುಮಾರ್, ಶಶಾಂಕ್, ಜಯತೀರ್ಥ, ಚೈತನ್ಯ ಸೇರಿ ಒಂದು ಸಿನಿಮಾ ಮಾಡಲು ಮುಂದಾಗಿದ್ದಾರೆ. ಹಾಗಂತ ಒಬ್ಬೊಬ್ಬ ನಿರ್ದೇಶಕರ ಒಂದೊಂದು ಕಥೆ ತೆರೆದುಕೊಳ್ಳುವ ಪ್ರಯೋಗವಲ್ಲ. ಬದಲಾಗಿ ಒಂದೇ ಕಥೆಯನ್ನು ಐವರು ನಿರ್ದೇಶಿಸಲಿದ್ದಾರೆ. ಇದೊಂದು ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾವಾಗಿ ರುತ್ತದೆ. ಈ ಬಗ್ಗೆ ಮಾತನಾಡುವ ನಿರ್ದೇಶಕ ಶಶಾಂಕ್, “ಐವರು ಜೊತೆಯಾಗಿ ಸಿನಿಮಾ ಮಾಡುವ ಬಗ್ಗೆ ಮಾತುಕತೆಯಾಗಿದ್ದು ನಿಜ. ಆದರೆ, ಉಳಿದ ರೂಪುರೇಷೆಗಳುಅಂತಿಮವಾಗಿಲ್ಲ. ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾವಾಗಿ ಪ್ರೇಕ್ಷಕರನ್ನು ರಂಜಿಸಲಿದೆ’ ಎನ್ನುತ್ತಾರೆ.